

ಮೈಸೂರು: ಕ್ಲಬ್‌ಫೂಟ್ ಮತ್ತು ಸೆರೆಬ್ರಲ್ ಪಾಲ್ಸಿಪೀಡಿತ ದೈಹಿಕ ಅಂಗವೈಕಲ್ಯದಿಂದ ನರಳುತ್ತಿರುವ ಮಕ್ಕಳಿಗೆ ಉಚಿತ ಚಿಕಿತ್ಸೆ ನೀಡಲು ಮೈಸೂರಿನ ಅಪೋಲೋ ಬಿಜಿಎಸ್ ಆಸ್ಪತ್ರೆಯೊಂದಿಗೆ ಆಟೋಮೋಟಿವ್ ಆಕ್ಸೆಲ್ಸ್ ಲಿಮಿಟೆಡ್ ಕೈ ಜೋಡಿಸಿದೆ. ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ(ಸಿಎಸ್‌ಆರ್) ಯೋಜನೆಯ ಭಾಗವಾಗಿ ಕ್ಲಬ್‌ಫೂಟ್ ಮತ್ತು ಸೆರೆಬ್ರಲ್ ಪಾಲ್ಸಿ ಪೀಡಿತ ಬಡ ಮಕ್ಕಳಿಗೆ ಉಚಿತ ಚಿಕಿತ್ಸೆ ನೀಡಲು ಮುಂದಾಗಿದೆ.
ನಮ್ಮ ಸಂಸ್ಥೆಯು ಸಿಎಸ್‌ಆರ್ ಯೋಜನೆ ಅಡಿ ಈಗಾಗಲೇ ಅನೇಕ ಕಾರ್ಯಕ್ರಮಗಳನ್ನು ಮಾಡಿದೆ. ಇದೀಗ ಅಪೋಲೋ ಬಿಜಿಎಸ್ ಆಸ್ಪತ್ರೆಯೊಂದಿಗೆ ಕ್ಲಬ್ ಫೂಡ್ ಮತ್ತು ಸೆರೆಬ್ರಲ್ ಪಾಲ್ಸಿ ಪೀಡಿತ ಮಕ್ಕಳಿಗೆ ಚಿಕಿತ್ಸೆ ನೀಡುತ್ತಿದ್ದೇವೆ. ಇದ್ದರಿಂದ ಮಕ್ಕಳು ಹಾಗೂ ಪಾಲಕರು ಉತ್ತಮ ಜೀವನ ನಡೆಸಬೇಕು ಎಂಬುದು ಸಂಸ್ಥೆಯ ಉದ್ದೇಶವಾಗಿದೆ. ಪ್ರಾರಂಭದಲ್ಲಿ 5 ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ 20 ಮಕ್ಕಳಿಗೆ ನೆರವಾಗುವ ಚಿಂತನೆ ಇದೆ ಎಂದು ಆಟೋಮೋಟಿವ್ ಆಕ್ಸೆಲ್ಸ್ ಲಿಮಿಟೆಡ್‌ನ ಹಿರಿಯ ಜನರಲ್ ಮ್ಯಾನೇಜರ್ ವಿನಾಯಕ ವಿ.ಭಟ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಪೋಲೋ ಬಿಜಿಎಸ್ ಆಸ್ಪತ್ರೆಯ ಮಕ್ಕಳ ಮೂಳೆ ಶಸ್ತ್ರಚಿಕಿತ್ಸಕ ಸಲಹೆಗಾರ ಡಾ.ಶ್ರೇಯಸ್ ಆಳ್ವ ಮಾತನಾಡಿ, ಸಮಾಜಕ್ಕೆ ಇದೊಂದು ಉದಾತ್ತ ಚಿಂತನೆಯನ್ನು ಒಳಗೊಂಡ ಮಾದರಿ ನಡೆಯಾಗಿದೆ. ಹೆಚ್ಚೆಚ್ಚು ಕಾರ್ಪೊರೇಟ್ ಸಂಸ್ಥೆಗಳು ಮುಂದೆ ಬಂದು ಇಂತಹ ಸಾಮಾಜಿಕ ಜವಾಬ್ದಾರಿಗಳನ್ನು ಸ್ವೀಕರಿಸಬೇಕು. ಚಿಕಿತ್ಸೆಗಳು ಮಕ್ಕಳ ಜೀವನವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಇಂದು ಚಿಕಿತ್ಸೆ ಸಿಗದೆ ಅನೇಕ ಮಕ್ಕಳು ಇಂತಹ ಅಂಗವೈಕಲ್ಯಗಳಿಂದ ಮೌನವಾಗಿ ಬಳಲುತ್ತಿದ್ದಾರೆ. ಆದರೆ ಸರಿಯಾದ ಆರೈಕೆ ಮತ್ತು ಸಮಯೋಚಿತ ಕಾಳಜಿಯಿಂದ ಅವರ ಜೀವನವನ್ನು ಸಕಾರಾತ್ಮಕವಾಗಿ ಪರಿವರ್ತಿಸಬಹುದು ಎಂದರು.
ಆಸ್ಪತ್ರೆಗೆ ಬರುವ ಮಕ್ಕಳ ಸ್ಥಿತಿಯನ್ನು ಕಂಡು ಶಸ್ತ್ರಚಿಕಿತ್ಸೆ ಮಾಡಿಸಿ ಎಂದು ಸಲಹೆ ನೀಡುತ್ತೇನೆ. ಆದರೆ, ಪಾಲಕರು ಜೀವನ ನಡೆಸುವುದೇ ಕಷ್ಟಕರವಾಗಿದೆ ಎಂದು ಅಳಲು ತೋಡಿಕೊಳ್ಳುತ್ತಾರೆ. ಈ ಹಿನ್ನೆಲೆ ಆಟೋಮೋಟಿವ್ ಆಕ್ಸೆಲ್ಸ್ ಲಿಮಿಟೆಡ್‌ನೊಂದಿಗೆ ಚರ್ಚಿಸಿ, ನೂತನ ಒಪ್ಪಂದ ಮಾಡಸಿಕೊಳ್ಳಲಾಗಿದೆ. ಈ ಒಪ್ಪಂದವು ಕಾರ್ಪೊರೇಟ್ ಮತ್ತು ಆರೋಗ್ಯ ಕ್ಷೇತ್ರಗಳ ನಡುವೆ ಪರಿಣಾಮಕಾರಿ ಕೆಲಸ ಮಾಡಲು ಹಾಗೂ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರುವಲ್ಲಿ ಪರಿಣಾಮಕಾರಿ ಉದಾಹರಣೆಯಾಗಿ ನಿಲ್ಲುತ್ತದೆ ಎಂದರು.
ಈಗಾಗಲೇ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳ ಪಾಲಕರಾದ ರಂಗಸ್ವಾಮಿ, ಪೂರ್ಣಿಮಾ, ಜಯಲಕ್ಷ್ಮೀ ಮಾತನಾಡಿ, ಮೈಸೂರಿನ ಅಪೋಲೋ ಬಿಜಿಎಸ್ ಆಸ್ಪತ್ರೆ, ಆಟೋಮೋಟಿವ್ ಆಕ್ಸೆಲ್ಸ್ ಲಿ. ಸಂಸ್ಥೆಗಳಿಗೆ ಧನ್ಯವಾದ ತಿಳಿಸಿದರು. ನಾವು ಚಿಕಿತ್ಸೆಗೆ ತಗಲುವ ಹಣವನ್ನು ಭರಿಸುವಷ್ಟು ಶಕ್ತಿಯಿಲ್ಲದ ಕಾರಣ ಆಸ್ಪತ್ರೆಗೆ ಬಂದು ಕೇವಲ ಪರೀಕ್ಷೆ ಮಾಡಿಸಿಕೊಂಡು ಹೋಗುತ್ತಿದ್ದೆವು. ಆದರೆ, ಡಾ.ಶ್ರೇಯಸ್ ಆಳ್ವ ಅವರ ಸಲಹೆಯಂತೆ ಇಂದು ಆಟೋಮೋಟಿವ್ ಆಕ್ಸೆಲ್ಸ್ ಸಹಾಯದೊಂದಿಗೆ ಮಕ್ಕಳಿಗೆ ಉತ್ತಮ ಚಿಕಿತ್ಸೆ ದೊರೆಯುತ್ತಿದೆ ಎಂದು ಕೃತಜ್ಞತೆ ಸಲ್ಲಿಸಿದರು.