

ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆಯು ಮಹತ್ವದ ಮೈಲಿಗಲ್ಲು ಸಾಧಿಸಿದೆ.
ರಾಜ್ಯಾದ್ಯಂತ ಈವರೆಗೆ 400 ಕೋಟಿ ಮಹಿಳೆಯರು ಉಚಿತವಾಗಿ ಪ್ರಯಣಿಸಿದ್ದಾರೆ. ಮಹಿಳಾ ಪ್ರಯಾಣಿಕರ ಪ್ರಯಾಣದಲ್ಲಿ 9,803 ಕೋಟಿ ರೂ.ಮೌಲ್ಯದ ಉಚಿತ ಟಿಕೆಟ್ ಪಡೆದುಕೊಂಡಿದ್ದಾರೆ. ಈ ಯೋಜನೆಗೆ 20 ತಿಂಗಳು ತುಂಬಿದೆ. ವಿಧಾನಸಭಾ ಚುನಾವಣೆಗೆ ಮುನ್ನ ಕಾಂಗ್ರೆಸ್ ನೀಡಿದ್ದ ಐದು ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆ ಪ್ರಮುಖವಾಗಿತ್ತು. ಯೋಜನೆ ಅನುಷ್ಠಾನದಿಂದ ಮಹಿಳಾ ಸಬಲೀಕರಣಕ್ಕೆ ಸಾಕಷ್ಟು ಅನುಕೂಲವಾಗಿದೆ. 2023ರ ಜೂ.11ರಂದು ಜಾರಿಗೆ ತರಲಾಗಿದ್ದ ಯೋಜನೆಯಡಿ ಸರ್ಕಾರಿ ಬಸ್ಗಳಲ್ಲಿ ರಾಜ್ಯಾದ್ಯಂತ ಮಹಿಳೆಯರಿಗೆ ಉಚಿತ ಪ್ರಯಣಿಸಲು ಅವಕಾಶ ನೀಡಲಾಯಿತು. ಆರಂಭದಿಂದಲೂ ಇದಕ್ಕೆ ಅಭೂತಪೂರ್ವ ಸ್ಪಂದನೆ ವ್ಯಕ್ತವಾಯಿತು.ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಆರ್ಟಿಸಿ), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ), ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ(ಎನ್ಡಬ್ಲ್ಯುಕೆಆರ್ಟಿಸಿ) ಹಾಗೂ ಕಲ್ಯಾಣ ಕನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ.
ಒಟ್ಟು ಮಹಿಳಾ ಪ್ರಯಾಣಿಕರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಲ್ಲಿ 121.17 ಕೋಟಿ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಲ್ಲಿ 127.42, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ 93.06 ಕೋಟಿ ಹಾಗೂ ಕಲ್ಯಾಣ ಕನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ 58.35 ಕೋಟಿ ಸೇರಿ ಒಟ್ಟು 400 ಕೋಟಿ ಮಹಿಳೆಯರು ಪ್ರಯಾಣಿಸಿದ್ದಾರೆ. ರಾಜ್ಯದ 4 ರಸ್ತೆ ಸಾರಿಗೆ ಸಂಸ್ಥೆಗಳು ಅತ್ಯುತ್ತಮ ಸಾಧನೆ ಮಾಡಿವೆ. ಯೋಜನೆಯಡಿ ಪ್ರತಿನಿತ್ಯ ಕಾರ್ಯಾಚರಣೆಗೊಳಿಸುತ್ತಿದ್ದ ಟ್ರಿಪ್ಗಳ ಪ್ರಮಾಣವೂ ಗಣನೀಯವಾಗಿ ಹೆಚ್ಚಳವಾಗಿದೆ.
ಶಕ್ತಿ ಯೋಜನೆ ಕರುನಾಡಿನಲ್ಲಿ ಶಕ್ತಿ ಸಂಚಾರವನ್ನೇ ಸೃಷ್ಟಿಸಿದೆ.ನಾಡಿನ ಸ್ವಾಭಿಮಾನಿ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿಸುವ ಉದ್ದೇಶದೊಂದಿಗೆ ಜಾರಿಗೆ ತಂದ ಶಕ್ತಿ, ತನ್ನ ಗುರಿಯನ್ನು ಯಶಸ್ವಿಯಾಗಿ ಈಡೇರಿಸುತ್ತಾ ಮುನ್ನಡೆಯುತ್ತಿರುವುದು ಯೋಜನೆ ಯಶಸ್ಸಿಗೆ ಹಿಡಿದಿರುವ ಕೈಗನ್ನಡಿ. ಯೋಜನೆ ಜಾರಿಗೊಂಡ ನಂತರ 400 ಕೋಟಿ ಮಹಿಳೆಯರು ಉಚಿತ ಪ್ರಯಾಣದ ಸೌಲಭ್ಯ ಪಡೆದು ಸ್ವಾವಲಂಬಿ ಬದುಕಿನೆಡೆಗೆ ಮುಂದಡಿಯಿಟ್ಟಿದ್ದಾರೆ. ಈವರೆಗಿನ ಒಟ್ಟು ಟಿಕೆಟ್ ಮೌಲ್ಯ ರೂ.9,803 ಕೋಟಿ ಆಗಿದ್ದು, ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ಶಕ್ತಿ ನವ ಇತಿಹಾಸ ಸೃಷ್ಟಿಸಿದೆ.
| ಸಿದ್ದರಾಮಯ್ಯ, ಸಿಎಂ.