ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣಕ್ಕೆ ಅವಕಾಶ

Published on

ಹುಬ್ಬಳ್ಳಿ: ವಿದ್ಯಾರ್ಥಿ ಬಸ್ ಪಾಸ್ ವಿತರಣೆಯಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿರುವುದರಿಂದ ಈಗಾಗಲೇ 2025-26ನೇ ಸಾಲಿಗೆ ಬಸ್ ಪಾಸ್​ಗಾಗಿ ಅರ್ಜಿ ಸಲ್ಲಿಸಿದ ಪ್ರಾಥಮಿಕದಿಂದ ಪಿಯುಸಿವರೆಗೆ ವಿದ್ಯಾರ್ಥಿಗಳಿಗೆ ಸಂಸ್ಥೆಯ ಬಸ್​ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ವಾಕರಸಾ ಸಂಸ್ಥೆ ತಿಳಿಸಿದೆ.

ಇಡಿಸಿಎಸ್ ಇಲಾಖೆಯ ಸೇವಾಸಿಂಧು ಮುಖೇನ ಸಂಸ್ಥೆಯ ಬಸ್ ಪಾಸ್ ಪಡೆಯಲು ಅರ್ಜಿ ಸಲ್ಲಿಸಿ ಕರ್ನಾಟಕ-1, ಗ್ರಾಮ-1 ಕೇಂದ್ರಗಳಲ್ಲಿ ಸ್ಮಾರ್ಟ್​ಕಾರ್ಡ್ ಆಧಾರಿತ ಬಸ್ ಪಾಸ್ ಪಡೆಯಲು ವಿದ್ಯಾರ್ಥಿಗಳಿಗೆ ಸೂಚಿಸಲಾಗಿತ್ತು. ಆದರೆ, ತಾಂತ್ರಿಕ ದೋಷದಿಂದಾಗಿ ಬಸ್ ಪಾಸ್ ಮುದ್ರಣದಲ್ಲಿ ತೊಂದರೆಯುಂಟಾಗಿದೆ. ಈ ಸಮಸ್ಯೆ ನಿವಾರಣೆಯಾಗುವವರೆಗೆ ಅಥವಾ ಇಂದಿನಿಂದ ಗರಿಷ್ಠ ಒಂದು ತಿಂಗಳವರೆಗೆ ವಿದ್ಯಾರ್ಥಿಗಳು ಸೇವಾಸಿಂಧು ಮುಖೇನ ಸಂಸ್ಥೆಯ ಬಸ್ ಪಾಸ್ ಪಡೆಯಲು ಸಲ್ಲಿಸಲಾದ ಸಕಾಲ ಅರ್ಜಿ ಸ್ವೀಕೃತಿ ಮತ್ತು ವಿದ್ಯಾರ್ಥಿ ಮೂಲ ಗುರುತಿನ ಚೀಟಿ (ಉದಾ: ಆಧಾರ್, ಶಾಲಾ ಪ್ರಾಂಶುಪಾಲರ ಸಹಿ ಒಳಗೊಂಡ ಪೋಟೊ ಹೊಂದಿರುವ ಗುರುತಿನ ಚೀಟಿ) ತೋರಿಸಿ, ಸಕಾಲ ಸ್ವೀಕೃತಿಯಲ್ಲಿ ನಮೂದಿಸಿದ ಮಾರ್ಗದಲ್ಲಿ ಕಾರ್ಯಾಚರಿಸುವ ಸಂಸ್ಥೆಯ ನಗರ, ಉಪನಗರ, ಸಾಮಾನ್ಯ, ವೇಗದೂತ ಸಾರಿಗೆಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net