

ಕಿಕ್ಕೇರಿ: ಮಹಿಳೆಯರು ಸ್ವಾವಲಂಬಿಗಳಾಗಿ ಬದುಕಲು ಟೈಲರಿಂಗ್ ವೃತ್ತಿ ಉತ್ತಮವಾದುದು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಮಹಾಬಲ ಕುಲಾಲ್ ಹೇಳಿದರು.
ಹೋಬಳಿಯ ಮಾದಾಪುರ ಗ್ರಾಮದಲ್ಲಿ ಮಂದಗೆರೆ ವಲಯದವರಿಗೆ ಜ್ಞಾನವಿಕಾಸ ಕಾರ್ಯಕ್ರಮದಲ್ಲಿ ಹೊಲಿಗೆ ಉಚಿತ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಮಹಿಳೆಯರು ಸ್ವಾವಲಂಬಿಗಳಾಗಿ ಮನೆಯಲ್ಲಿ ಕುಳಿತು ಟೈಲರಿಂಗ್ ಮಾಡಬಹುದು. ಹೀಗಾಗಿ ರಾಜ್ಯವ್ಯಾಪಿ ತರಬೇತಿ ನೀಡಲಾಗುತ್ತಿದೆ. ಮಹಿಳೆಯರು ವಿಚಲಿತರಾಗದೆ ಶ್ರದ್ಧೆಯಿಂದ ಕಸುಬು ಕಲಿಯಬೇಕು ಎಂದರು.
ಸಂಸ್ಥೆಯಿಂದ ಪ್ರಶಸ್ತಿ ಪತ್ರ ನೀಡಲಾಗುತ್ತಿದ್ದು, ಈ ಪತ್ರದಿಂದ ನಗರ ಪ್ರದೇಶದಲ್ಲಿ ಸುಲಭವಾಗಿ ಗಾರ್ಮೆಂಟ್ಸ್, ಮತ್ತಿತರ ಸಂಸ್ಥೆಗಳಲ್ಲಿ ನೌಕರಿ ಪಡೆಯಬಹುದಾಗಿದೆ ಎಂದರು.
ಸಂಸ್ಥೆಯ ತಾಲೂಕು ಯೋಜನಾಧಿಕಾರಿ ವೀರೇಶಪ್ಪ ಸಂಸ್ಥೆಯ ವಿವಿಧ ಯೋಜನೆಗಳ ಮಾಹಿತಿ ನೀಡಿದರು. ತರಬೇತಿ ಪಡೆದ ಅರ್ಹ 25ಮಹಿಳೆಯರಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.
ಸಹಕಾರ ಬ್ಯಾಂಕ್ ಅಧ್ಯಕ್ಷ ದೇವೇಗೌಡ, ವಲಯ ಮೇಲ್ವಿಚಾರಕ ಚೇತನ್, ಜ್ಞಾನವಿಕಾಸ ಸಮನ್ವಯಾಧಿಕಾರಿ ಮಾದಲಾಂಬಿಕಾ, ಸೇವಾ ಪ್ರತಿನಿಧಿ ಪವಿತ್ರಾ ಹಾಜರಿದ್ದರು.