ಸಬಲೀಕರಣಕ್ಕೆ ಸ್ವ ಉದ್ಯೋಗ ಅತ್ಯಗತ್ಯ: ರೋಟರಿ ಅಧ್ಯಕ್ಷೆ ಬಿ.ಎಸ್.ಅನುಪಮಾ ಅಭಿಮತ

1 (2)
Published on

ಮಂಡ್ಯ: ಸ್ವಾವಲಂಬಿಯಾಗಿ ಆರ್ಥಿಕ ಸಬಲೀಕರಣಕ್ಕೆ ಸ್ವ ಉದ್ಯೋಗ ಅತ್ಯಗತ್ಯ ಎಂದು ರೋಟರಿ ಸಂಸ್ಥೆ ಅಧ್ಯಕ್ಷೆ ಬಿ.ಎಸ್.ಅನುಪಮಾ ಹೇಳಿದರು.
ನಗರದ ಗಾಂಧಿಭವನದಲ್ಲಿ ರೋಟರಿ ಸಂಸ್ಥೆ, ಭಾರತ ಸರ್ಕಾರದ ನೆಹರು ಯುವ ಕೇಂದ್ರ, ಅನನ್ಯ ಹಾರ್ಟ್ ಸಂಸ್ಥೆ, ಅಕ್ಷಯಸಿರಿ ಚಾರಿಟಬಲ್ ಟ್ರಸ್ಟ್, ರೂಪಶ್ರೀ ಮಹಿಳಾ ಮತ್ತು ಗ್ರಾಮೀಣ ಅಭಿವೃದ್ದಿ ಸಂಘದ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಬ್ಯೂಟಿ ಪಾರ್ಲರ್ ಮತ್ತು ಟೈಲರಿಂಗ್ ಉಚಿತ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿನ ವಿದ್ಯಾವಂತ ಮಹಿಳೆಯರು ಉದ್ಯೋಗ, ಸ್ವ ಉದ್ಯೋಗ, ಉದ್ಯಮಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದು ಶ್ಲಾಘನೀಯ. ಆರ್ಥಿಕ ಸಬಲೀಕರಣಕ್ಕೆ ಮಹಿಳೆಯರ ಪಾತ್ರ ಪ್ರಮುಖವಾಗಿರುತ್ತದೆ. ಗ್ರಾಮೀಣ ಮಹಿಳೆಯರ ಜೀವನ ಸುಧಾರಣೆಯ ಮಟ್ಟವನ್ನು ಹೆಚ್ಚಿಸಿಕೊಳ್ಳಲು ಸ್ವ ಉದ್ಯೋಗ ಮತ್ತು ಉದ್ಯಮಗಳ ತರಬೇತಿ ಅಗತ್ಯವಿದೆ. ಈ ನಿಟ್ಟಿನಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಮಹಿಳೆಯರಿಗೆ ಬ್ಯೂಟಿ ಪಾರ್ಲರ್ ಮತ್ತು ಟೈಲರಿಂಗ್ ಸೇರಿದಂತೆ ಕೌಶಲವೃತ್ತಿಗಳ ತರಬೇತಿಗಳನ್ನು ನೀಡಲಾಗುತ್ತಿದೆ. ಇದನ್ನು ಸದುಪಯೋಗಪಡಿಸಿಕೊಂಡವರು ಆರ್ಥಿಕ ಸುಧಾರಣೆ ಕಾಣುತ್ತಿದ್ದಾರೆ ಎಂದರು.
ಪ್ರಗತಿಪರ ಚಿಂತಕಿ ಆಶಾಲತಾ ಪುಟ್ಟೇಗೌಡ ಮಾತನಾಡಿ, ಸ್ವಉದ್ಯೋಗಗಳು ಮಹಿಳೆಯರ ಆರ್ಥಿಕ ಮಟ್ಟವನ್ನು ಸುಧಾರಿಸುವುದರ ಜತೆಗೆ ಆತ್ಮವಿಶ್ವಾಸ ಹೆಚ್ಚಿಸಿ ಪ್ರಗತಿಯತ್ತ ನಡೆಯಲು ದಾರಿಯಾಗಿದೆ. ಹೊಲಿಗೆ ತರಬೇತಿ, ಬ್ಯೂಟಿಪಾರ್ಲರ್ ಕಲಿಕೆಗಳು ಬಹಳ ವರ್ಷದಿಂದ ದೇಶದಲ್ಲಿದೆ. ಕೆಲ ವರ್ಷದಿಂದ ಬ್ಯೂಟಿಷನ್ ಪ್ರತಿ ನಗರ-ಹಳ್ಳಿ ಹಳ್ಳಿಗೂ ಬಂತು. ಬ್ಯೂಟಿಪಾರ್ಲರ್ ಬಂದ ಮೇಲೆ ಮಹಿಳೆಯರ ಸೌಂದರ್ಯ ಪ್ರಜ್ಞೆ, ಉಡುಗೆ ತೊಡುಗೆಗಳು, ಸಾಂಪ್ರದಾಯಿಕ ಸೌಂದರ್ಯ ಕೌಶಲತೆಗಳು ಹೆಚ್ಚಾಯಿತು, ಉದ್ಯೋಗಗಳು ಸೃಷ್ಟಿಯಾದವು ಎಂದು ಸ್ಮರಿಸಿದರು.
ರೋಟರಿ ಸಂಸ್ಥೆ ಸದಸ್ಯೆ ಸುಜಾತಾ ಸಿದ್ದಯ್ಯ, ಸಮಾಜಸೇವಕಿ ರಾಜೇಶ್ವರಿ, ಕೆಎಸ್‌ಒಯು ಪ್ರಾದೇಶಿಕ ನಿರ್ದೇಶಕ ಮಿಲನ್ ಸುಧಾಕರ್, ರೂಪಶ್ರೀ ತರಬೇತಿ ಸಂಸ್ಥೆ ರಾಜೇಶ್, ಅಕ್ಷಯಸಿರಿ ಸಂಸ್ಥೆಯ ಅಧ್ಯಕ್ಷ ಲೋಕೇಶ್, ರೋಟರಿ ಕಾರ್ಯದರ್ಶಿ ರಾಜೇಶ್, ಶಿಕ್ಷಕಿಯರಾದ ಸುವರ್ಣ, ಪವಿತ್ರಾ ಇತರರಿದ್ದರು.
ಇದೇ ಸಂದರ್ಭದಲ್ಲಿ ಒಂದು ತಿಂಗಳು ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಪಡೆದ  100ಕ್ಕೂ ಹೆಚ್ಚು ಫಲಾನುಭವಿಗಳು ತಾವು ಕಲಿತ ಕೌಶಲ ಪ್ರದರ್ಶಿಸಿದರು. ಬಳಿಕ ಗಣ್ಯರು ಪ್ರಮಾಣಪತ್ರ ವಿತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net