ಗ್ರಾಮೀಣ ಭಾಗದ ಮಕ್ಕಳಿಗೂ ಉಚಿತ ಬೇಸಿಗೆ ಶಿಬಿರ ಅವಶ್ಯ: ಶಾಸಕ ಜಿ.ಟಿ.ದೇವೇಗೌಡ ಹೇಳಿಕೆ

9
Published on

ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉಚಿತ ಬೇಸಿಗೆ ಶಿಬಿರಗಳನ್ನು ಆಯೋಜಿಸುವ ಬಗ್ಗೆ ಸಂಬಂಧಪಟ್ಟ ಸಚಿವರೊಂದಿಗೆ ಚರ್ಚೆ ನಡೆಸುವುದಾಗಿ ಶಾಸಕ ಜಿ.ಟಿ.ದೇವೇಗೌಡ ತಿಳಿಸಿದರು.

ವಿ-ಕೇರ್ ಸಂಸ್ಥೆಯು ಹೂಟಗಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಆಯೋಜಿಸಿದ್ದ ‘ಪರಿಸರ ಬೆಸುಗೆ ಮಕ್ಕಳ ಬೇಸಿಗೆ ಶಿಬಿರ’ ಸಮಾರೋಪ ಮತ್ತು ಕಲಿಕಾ ಪ್ರದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಗರ ಪ್ರದೇಶಗಳಿಗೆ ಸೀಮಿತವಾಗಿರುವ ಬೇಸಿಗೆ ಶಿಬಿರಗಳನ್ನು ಪ್ರತಿ ಹಳ್ಳಿಯಲ್ಲೂ ನಡೆಸಬೇಕು. ಇದರಿಂದ ಹಳ್ಳಿ ಮಕ್ಕಳಿಗೂ ಉತ್ತಮ ವೇದಿಕೆ ಸಿಗಲಿದೆ. ಹೀಗಾಗಿ ಸರ್ಕಾರ ಇಂತಹ ಯೋಜನೆಗಳನ್ನು ಕಾರ್ಯರೂಪಕ್ಕೆ ತರಬೇಕು ಎಂದು ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸುತ್ತೇನೆ ಎಂದು ಹೇಳಿದರು.

ಎಲ್ಲರಿಗೂ ತಮ್ಮ ಮಕ್ಕಳನ್ನು ಹಣ ನೀಡಿ ಶಿಬಿರಗಳಿಗೆ ಸೇರಿಸಲು ಆಗಲ್ಲ. ಗ್ರಾಮಾಂತರ ಬಡ ಮಕ್ಕಳ ಹಾಗೂ ನಿರ್ಲಕ್ಷಿತ ಸಮುದಾಯಗಳ ಮಕ್ಕಳ ಅಭಿವೃದ್ಧಿ ಸಂಬಂಧಿಸಿದಂತೆ ವಿ-ಕೇರ್ ಸಂಸ್ಥೆ ಬೇಸಿಗೆ ಶಿಬಿರ ಆಯೋಜಿಸುವ ಮೂಲಕ ಉತ್ತಮ ಕೆಲಸ ಮಾಡಿದೆ. ಇಂತಹ ಕೆಲಸಗಳನ್ನು ಎಲ್ಲರೂ ಮಾಡಬೇಕಾಗಿದೆ ಎಂದರು.

ಇತ್ತೀಚೆಗೆ ಪಾಲಕರು ತಮ್ಮ ಮಕ್ಕಳ ಮದುವೆಗೆ ದುಂದು ವೆಚ್ಚ ಮಾಡುತ್ತಿದ್ದಾರೆ. ಇದರಿಂದ ಅವರ ಸಾಲಗಾರರಾಗುತ್ತಿದ್ದಾರೆ. ಆದ್ದರಿಂದ ದುಂದು ವೆಚ್ಚದ ಮದುವೆಗಳನ್ನು ಬಿಟ್ಟು ಕುವೆಂಪು ಅವರ ಮಂತ್ರ ಮಾಂಗಲ್ಯವನ್ನು ಅನುಸರಿಸಬೇಕು. ಈ ಮೂಲಕ ದುಂದು ವೆಚ್ಚಗಳಿಗೆ ಕಡಿವಾಣ ಹಾಕಬೇಕು ಎಂದರು.

ತಂದೆ-ತಾಯಿಗಳು ಕೂಲಿ ಕೆಲಸ ಮಾಡಿ ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುತ್ತಿದ್ದಾರೆ. ಮಕ್ಕಳು ಉನ್ನತ ಶಿಕ್ಷಣ ಪಡೆದು ಉನ್ನತ ಹುದ್ದೆಗಳನ್ನು ಪಡೆಯುತ್ತಾರೆ ಎಂಬ ನಂಬಿಕೆ ಇರುತ್ತದೆ. ಮಕ್ಕಳು ಅವರ ನಂಬಿಕೆಗೆ ಘಾಸಿಗೊಳಿಸದೆ ಸಾಧನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಮಕ್ಕಳು ಶಿಸ್ತು, ಶಾಂತಿ, ಪ್ರೀತಿ ಇಂತಹ ಕೌಶಲ್ಯಗಳನ್ನು ಆಳವಡಿಸಿಕೊಂಡು ಉತ್ತಮ ಮಾರ್ಗದಲ್ಲಿ ನಡೆಯಬೇಕು. 14 ದಿನಗಳಿಂದ ಶಿಬಿರದಲ್ಲಿ ಕಲಿತ ಕೌಶಲಗಳನ್ನು ಆಳವಡಿಸಿಕೊಂಡು ಜೀವನದಲ್ಲಿ ಸಾಧನೆಯ ಕಡೆ ಗಮನಹರಿಸಬೇಕು ಎಂದರು.

ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಮಾತನಾಡಿ, ಹೆಣ್ಣು ಮಕ್ಕಳು ಸಾಮಾಜಿಕ ಜಾಲತಾಣ ಬಳಸುವಾಗ ಮುನ್ನೆಚ್ಚರಿಕೆಯ ಜತೆ ಅಪರಿಚಿತರ ಸ್ನೇಹ ಮಾಡುವ ಬಗ್ಗೆಯೂ ಎಚ್ಚರ ವಹಿಸಬೇಕು.

ಪ್ರಸ್ತುತ ಹೆಣ್ಣು ಮಕ್ಕಳಿಗೆ ಶಿಕ್ಷಣ ಅಗತ್ಯ. ಮದುವೆಗೂ ಮುನ್ನ ಶಿಕ್ಷಣ ಪಡೆದು ಉನ್ನತ ಸ್ಥಾನಮಾನ ಅಲಂಕರಿಸಿದರೆ ಯಾರ ಮೇಲು ಅವಲಂಬಿತರಾಗದೆ ಸ್ವಾವಲಂಬಿಗಳಾಗಿ ಬದುಕಬಹುದು. ಸರ್ಕಾರಿ ಹಾಗೂ ಕನ್ನಡ ಮಾಧ್ಯಮ ಶಾಲೆ ಎಂಬ ಕೀಳರಿಮೆ ಬೇಡ. ಸರ್ಕಾರಿ ಶಾಲೆಯಲ್ಲಿ ಓದಿ ಉನ್ನತ ಹುದ್ದೆಯಲ್ಲಿರುವವರು ನಮ್ಮ ನಡುವೆ ಇದ್ದಾರೆ. ಹೀಗಾಗಿ ಮಾಧ್ಯಮ ಹಾಗೂ ಶಾಲೆ ಯಾವುದೇ ಇರಲಿ ಶಿಕ್ಷಿತರಾಗುವುದು ಮುಖ್ಯ ಎಂದು ಕಿವಿಮಾತು ಹೇಳಿದರು.

ಮಕ್ಕಳಿಗೆ ಈಗಿನಿಂದಲೇ ಛಲ ಹಾಗೂ ಧೈರ್ಯ ಕಲಿಸಿಕೊಟ್ಟಾಗ ಮಾತ್ರ ಮುಂದೆ ಸಮಸ್ಯೆಗಳನ್ನು ಮೆಟ್ಟಿನಿಂತು ಸಾಧನೆ ಮಾಡಲು ಸಹಾಯವಾಗುವುದು. ಮಕ್ಕಳಿಗೆ ಯಾವುದೇ ಸಮಸ್ಯೆ ಎದುರಾದಲ್ಲಿ ಮಕ್ಕಳ ಸಹಾಯವಾಣಿಗೆ ಕರೆ ಮಾಡಿ ಸಮಸ್ಯೆಗಳನ್ನು ತಿಳಿಸಿದರೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದರು.

ವಿ-ಕೇರ್ ಸಂಸ್ಥೆಯು ಉತ್ತಮವಾದ ಸೇವೆ ಮಾಡುತ್ತಿದೆ. ಯಾವುದೇ ಸೌಲಭ್ಯಗಳನ್ನು ಪಡೆಯದೆ ವಂಚಿತರಾದ ಮಕ್ಕಳನ್ನು ಗುರುತಿಸಿ ಆವರಿಗೆ ಉತ್ತಮ ಕೌಶಲಗಳನ್ನು ನೀಡಿ ಸಮಾಜದಲ್ಲಿ ಉತ್ತಮ ನಾಗರಿಕರನ್ನಾಗಿ ಮಾಡುತ್ತಿರುವ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು. ಈ ಸಂದರ್ಭದಲ್ಲಿ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ಆದಿವಾಸಿ ಮಕ್ಕಳಿಗೆ ಗೌರವಿಸಲಾಯಿತು.

ಹಿರಿಯ ರಂಗಭೂಮಿ ಕಲಾವಿದೆ ಡಾ.ರಾಮೇಶ್ವರಿ ವರ್ಮಾ, ಮೈಸೂರು ಗ್ರಾಮಾಂತರ ವಿಭಾಗದ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಪ್ರಕಾಶ್, ಜೆಎಸ್‌ಎಸ್ ಆಸ್ಪತ್ರೆಯ ಮನೋವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ.ಎಂ.ಕಿಶೋರ್, ವಿ-ಕೇರ್ ಸಂಸ್ಥೆಯ ಸಂಸ್ಥಾಪಕ ಡಾ.ಕುಮುದಿನಿ ಅಚ್ಚಿ, ಮುಖ್ಯ ಶಿಕ್ಷಕ ಸತೀಶ್, ಜವರೇಗೌಡ, ಶ್ರೀಮತಿ ಪ್ರಸನ್ನ, ಸಿಂಚನಾ, ಡಾ.ರತಿ ರಾವ್, ಪ್ರೊ.ಲತಾ ಬಿದ್ದಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net