

ಮಂಡ್ಯ: ಗ್ರಾಮೀಣ ಭಾಗದ ಮಹಿಳೆಯರು ಹೊಲಿಗೆ, ಕಸೂತಿ ತರಬೇತಿ ಪಡೆಯುವ ಮೂಲಕ ಸ್ವಾವಲಂಬಿ ಜೀವನ ನಿರ್ವಹಣೆ ಮಾಡಬೇಕೆಂದು ಮಂಡ್ಯ ಶುಗರ್ ಸಿಟಿ ಲಯನ್ಸ್ ಸರ್ವಿಸ್ ಫೌಂಡೇಷನ್ ಕಾರ್ಯದರ್ಶಿ ಲಯನ್ ಪ್ರತಿಮಾ ರಮೇಶ್ ಸಲಹೆ ನೀಡಿದರು.
ತಾಲೂಕಿನ ಕೀಲಾರ ಗ್ರಾಮದ ಕ್ಷೀರಸಾಗರ ಸಾಂಸ್ಕೃತಿಕ ಭವನದಲ್ಲಿ ಕ್ಷೀರಸಾಗರ ಮಿತ್ರಕೂಟ ಹಾಗೂ ಮಂಡ್ಯ ಶುಗರ್ ಸಿಟಿ ಲಯನ್ಸ್ ಸರ್ವಿಸ್ ಫೌಂಡೇಷನ್ ವತಿಯಿಂದ ನಡೆಯುತ್ತಿರುವ ಉಚಿತ ಹೊಲಿಗೆ ತರಬೇತಿ ಪಡೆದ 3ನೇ ತಂಡದ ಮಹಿಳೆಯರಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು. ಮಹಿಳೆಯರು ತಮ್ಮ ಬಿಡುವಿನ ವೇಳೆಯನ್ನು ಸದುಪಯೋಗ ಪಡಿಸಿಕೊಂಡು ಹೊಲಿಗೆ ತರಬೇತಿ ಸೇರಿದಂತೆ ಇನ್ನಿತರ ಕರಕುಶಲ ವಸ್ತುಗಳ ತಯಾರಿಕೆಯ ತರಬೇತಿಗಳನ್ನು ಪಡೆದು ಆರ್ಥಿಕ ಪ್ರಗತಿಗೆ ನಾಂದಿಯಾಡಬೇಕು. ಇಲ್ಲಿ ತರಬೇತಿ ಪಡೆದಿರುವವರು ತಮ್ಮ ಹಾಗೂ ತಮ್ಮ ಮಕ್ಕಳ ಬಟ್ಟೆಗಳನ್ನು ಹೊಲಿದುಕೊಳ್ಳುತ್ತಿರುವುದನ್ನು ಕೇಳಿ ಸಂತೋಷವಾಗಿದೆ. ನಮ್ಮ ಸಂಸ್ಥೆಯ ಮೂಲಕ ಈ ಕೇಂದ್ರಕ್ಕೆ ಇನ್ನೂ ಹೆಚ್ಚಿನ ನೆರವು ನೀಡುವುದಾಗಿ ತಿಳಿಸಿದರು.
ಅಧ್ಯಕ್ಷತೆ ವಹಿಸಿದ ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಡಿ.ಶಿವರಾಜು ಮಾತನಾಡಿ, ಚಿಕ್ಕದಾಗಿ ಪ್ರಾರಂಭವಾದ ನಮ್ಮ ಮಿತ್ರಕೂಟ ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಇಡೀ ಜಿಲ್ಲೆಯಲ್ಲಿ ಮನೆ ಮಾತಾಗಿದೆ. ಪ್ರಸ್ತುತ ಬೆಳ್ಳಿ ಹಬ್ಬ ಆಚರಣೆಯ ಸಂದರ್ಭದಲ್ಲಿ ಇಡೀ ವರ್ಷಪೂರ್ತಿ ಹಲವು ಜನೋಪಯೋಗಿ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ. ಇದಕ್ಕೆ ಎಲ್ಲರೂ ಸಹಕಾರ ಅಗತ್ಯ ಎಂದು ಮನವಿ ಮಾಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಆರ್.ಶಿವಶಂಕರ್, ಲಯನ್ ನಿತ್ಯಾನಂದ, ಕೆ.ಆರ್.ರಾಧಾ ಪುರುಷೋತ್ತಮ, ಬಿಜೆಪಿ ಮುಖಂಡ ಕೆ.ಚಂದ್ರಶೇಖರ್, ಮಿತ್ರಕೂಟದ ಗೌರವಾಧ್ಯಕ್ಷ ಕೆ.ಪಿ.ವೀರಪ್ಪ, ಅಧ್ಯಕ್ಷ ಕೆ.ಜಯಶಂಕರ್, ಕಾರ್ಯದರ್ಶಿ ನಾಗೇಶ್, ಸಂಚಾಲಕ ಕೆ.ಎಂ.ಕೃಷ್ಣೇಗೌಡ, ಕೆ.ಆರ್.ರಮೇಶ್, ಕೆ.ವಿ.ಮಂಚೇಗೌಡ, ಚೌಡೇಗೌಡ, ಕೆ.ಎಚ್.ರಮೇಶ್, ಕೆ.ಎಂ.ಶಿವಣ್ಣ, ಹೊಲಿಗೆ ತರಬೇತಿ ಶಿಕ್ಷಕಿ ವಿನುತಾ ಇದ್ದರು.
ಇದೇ ಸಂದರ್ಭದಲ್ಲಿ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಸ್ನಾತಕೋತ್ತರ ಪದವಿಯಲ್ಲಿ ಉನ್ನತ ಸ್ಥಾನ ಪಡೆದ ಡಾ.ತನ್ಮಯಿಕೃಷ್ಣ ಹಾಗೂ ಕ್ಷೀರಸಾಗರ ಮಿತ್ರಕೂಟದ ಸಂಸ್ಥಾಪಕ ಸದಸ್ಯರೂ ಆದ ನಿವೃತ್ತ ಮುಖ್ಯ ಶಿಕ್ಷಕ ಕೆ.ಸಿ.ಉಪೇಂದ್ರಕುಮಾರ್ ಅವರನ್ನು ಸನ್ಮಾನಿಸಲಾಯಿತು.