ಕೌಶಲವಿದ್ದರೆ ಉದ್ಯೋಗದಲ್ಲಿ ಯಶಸ್ಸು: ಎಂಎಲ್‌ಸಿ ಮಧು ಜಿ.ಮಾದೇಗೌಡ ಅಭಿಮತ

Mlc Madhu-Madegowda Mandya
Published on

ಮಂಡ್ಯ: ನಮ್ಮಲ್ಲಿ ನುರಿತ ಕೌಶಲವಿದ್ದರೆ ಉದ್ಯೋಗದಲ್ಲಿ ಯಶಸ್ಸು ಲಭಿಸಲಿದೆ ಎಂದು ಮಹಾತ್ಮ ಗಾಂಧಿ ಸ್ಮಾರಕ ಟ್ರಸ್ಟ್ ಅಧ್ಯಕ್ಷರೂ ಆದ ವಿಧಾನಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಹೇಳಿದರು.

ನಗರದ ಗಾಂಧಿಭವನದಲ್ಲಿ ಮಹಾತ್ಮ ಗಾಂಧಿ ಸ್ಮಾರಕ ಟ್ರಸ್ಟಿನ ಕಸ್ತೂರಿ ಬಾ ಮಹಿಳೆಯರಿಗೆ ಉಚಿತ ಹೊಲಿಗೆ ತರಬೇತಿ ಕೇಂದ್ರ ವತಿಯಿಂದ ಆಯೋಜಿಸಿದ್ದ 49ನೇ ಶಿಬಿರದ ಸಮಾರೋಪ ಹಾಗೂ 50ನೇ ಹೊಸ ಬ್ಯಾಚ್ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯಶಸ್ಸು ನಿರಂತರವಾಗಿರಬೇಕೆಂದರೆ ನಮ್ಮಲ್ಲಿರುವ ಕಾರ್ಯ ಕುಶಲತೆ ಕೊನೆಯಾಗಬಾರದು. ಉಡುಪು ಸಿದ್ಧಗೊಳಿಸುವ ಉದ್ಯಮ ಕ್ಷೇತ್ರದಲ್ಲಿ ವಿಫುಲ ಅವಕಾಶಗಳಿವೆ. ಹಾಗಾಗಿ, ಶಿಬಿರದಲ್ಲಿ ಕಲಿತದ್ದನ್ನು ಮರೆಯದೆ, ವೃತ್ತಿಯಲ್ಲಿ ನೈಪುಣ್ಯ ಸಾಧಿಸಿ, ಆರ್ಥಿಕವಾಗಿ ಸಬಲರಾಗಿ, ಸ್ಫೂರ್ತಿಯುತ ಬದುಕು ಕಟ್ಟಿಕೊಳ್ಳಿ ಎಂದು ತಿಳಿಸಿದರು.

ಟ್ರಸ್ಟ್ ವತಿಯಿಂದ ವರ್ಗ ಮತ್ತು ಧರ್ಮ ಭೇದವಿಲ್ಲದೆ ಮಹಿಳೆಯರಿಗೆ ಉಚಿತವಾಗಿ ಹೊಲಿಗೆ ತರಬೇತಿ ನೀಡುತ್ತಾ ಬಂದಿದ್ದೇವೆ. ಈವರೆಗೂ ಸುಮಾರು 3 ಸಾವಿರ ಮಹಿಳೆಯರು ತರಬೇತಿ ಪಡೆದಿದ್ದಾರೆ. ನೀವು ಹೊಲಿಗೆ ವೃತ್ತಿಯಲ್ಲಿ ನೈಪುಣ್ಯ ಸಾಧಿಸಿದರೆ ನಮ್ಮ ಸಂಸ್ಥೆ ವತಿಯಿಂದಲೇ ಉದ್ಯೋಗ ಅವಕಾಶವನ್ನು ಕಲ್ಪಿಸಲಾಗುವುದು ಎಂದರು.

ಟ್ರಸ್ಟ್ ಕಾರ್ಯದರ್ಶಿ ನಂಜೇಗೌಡ ಮಾತನಾಡಿ, ಮಹಿಳೆಯರು ಮನೆಗೆಲಸ, ಮಕ್ಕಳ ಪೋಷಣೆ, ಕುಟುಂಬ ನಿರ್ವಹಣೆಯಂತಹ ಜವಾಬ್ದಾರಿಗಳ ನಡುವೆ ತರಬೇತಿ ಶಿಬಿರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಆರ್ಥಿಕ ಸ್ವಾವಲಂಬನೆಯತ್ತ ಹೆಜ್ಜೆ ಹಾಕುತ್ತಿರುವುದು ಉತ್ತಮ ಬೆಳವಣಿಗೆ ಎಂದರು.

ಮಹಾತ್ಮ ಗಾಂಧಿ ಟ್ರಸ್ಟಿನ ಲಿಂಗಣ್ಣ ಬಂಧುಕಾರ್, ಹೊಲಿಗೆ ತರಬೇತಿ ಶಿಕ್ಷಕಿ ಅನಿತಾ, ನಾಗರತ್ನಾ, ಕೆ.ಎಸ್.ರಾಜು ಇದ್ದರು. ಇದೇ ಸಂದರ್ಭದಲ್ಲಿ ಹೊಲಿಗೆ ಉಚಿತ ತರಬೇತಿ ಪೂರೈಸಿದ 49ನೇ ಬ್ಯಾಚಿನ 83 ಕಲಿಕಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net