ಅಗತ್ಯ ವಸ್ತುಗಳಿಗೆ ಮುಕ್ತ ಅವಕಾಶ

9-gdg-7
Published on

ವಿಜಯವಾಣಿ ಸುದ್ದಿಜಾಲ ಗದಗ

ಕೋವಿಡ್-19 ನಿಯಂತ್ರಣಕ್ಕಾಗಿ ದೇಶಾದ್ಯಂತ ಲಾಕ್​ಡೌನ್ ಜಾರಿಯಲ್ಲಿದೆ. ಅದರೂ ಆಹಾರ ಪೂರೈಕೆ ನಿರಂತರವಾಗಿ ಇರಬೇಕೆಂದು ರಾಜ್ಯ ಸರ್ಕಾರ ಕೃಷಿ ಚಟುವಟಿಕೆಗಳು ಮತ್ತು ಅಗತ್ಯ ವಸ್ತುಗಳಿಗೆ ಮುಕ್ತ ಅವಕಾಶವನ್ನು ಕಲ್ಪಿಸಿದೆ. ಆರೋಗ್ಯ ರಕ್ಷಣೆಗೆ ರೈತರು ಮತ್ತು ಸಾರ್ವಜನಿಕರು ಸಾಮಾಜಿಕ ಅಂತರ ಮತ್ತು ಕೋವಿಡ್-19 ಕುರಿತು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಕೋವಿಡ್ 19 ನಿಯಂತ್ರಣ ಪರಿಸ್ಥಿತಿಯಲ್ಲಿ ಕೃಷಿ ಚಟುವಟಿಕೆ ಮತ್ತು ಅವರ ಬೆಳೆಗಳ ಮಾರಾಟಕ್ಕೆ ಕೈಗೊಂಡಿರುವ ಕ್ರಮಗಳು ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಸರ್ಕಾರದ ನಿರ್ದೇಶನದಂತೆ ಅವಶ್ಯಕ ವಸ್ತುಗಳ ಸಾಗಾಣಿಕೆ ನಿಲ್ಲಿಸಬಾರದು. ರೈತರು ಮತ್ತು ಗ್ರಾಹಕರು ತೊಂದರೆ ಅನುಭವಿಸಬಾರದು. ಕೃಷಿ ಚಟುವಟಿಕೆಗಳು, ಬಿತ್ತನೆ ಕಾರ್ಯ, ಕೃಷಿಗೆ ಪೂರಕವಾದ ಉಪಕರಣಗಳ ರಿಪೇರಿ, ಕಾರ್ಯಗಳಿಗೆ ಯಾವುದೇ ನಿರ್ಬಂಧವಿರುವುದಿಲ್ಲ. ರೈತರು ಕೃಷಿ ಚಟುವಟಿಕೆಗಳನ್ನು ಮುಕ್ತವಾಗಿ ನಡೆಸಲು ಅವಕಾಶ ಕಲ್ಪಿಸಲಾಗಿದೆ ಎಂದರು.

ಸಾರ್ವಜನಿಕರು ಜೀವನಾವಶ್ಯಕ ವಸ್ತುಗಳನ್ನು ಪಡೆಯುವ ಸಂದರ್ಭದಲ್ಲಿ ಸಾಮಾಜಿಕ ಅಂತರ ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ. ಕೃಷಿ ಮಾರುಕಟ್ಟೆಗೆ ಬಂದ ರೈತರಿಗೆ, ಹಮಾಲರಿಗೆ, ಕುಡಿಯುವ ನೀರು, ಊಟೋಪಹಾರ ಹಾಗೂ ಮೂಲಭೂತ ಸೌಕರ್ಯದ ವ್ಯವಸ್ಥೆಯನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯವರು ಕ್ರಮ ಕೈಗೊಳ್ಳಬೇಕು ಎಂದರು.

ಗದಗ ಎಪಿಎಂಸಿಯ ಪ್ರವೇಶ ದ್ವಾರದಲ್ಲಿ ಕೋವಿಡ್-19 ನಿಯಂತ್ರಣಕ್ಕಾಗಿ ಸುರಕ್ಷಾ ಸುರಂಗ ವ್ಯವಸ್ಥೆ ಅಳವಡಿಕೆ ಉತ್ತಮ ಕಾರ್ಯವಾಗಿದೆ ಎಂದು ಸಚಿವ ಬಿ.ಸಿ.ಪಾಟೀಲ ಮೆಚ್ಚುಗೆ ವ್ಯಕ್ತಪಡಿಸಿದರು.

ದೇಶ ಎದುರಿಸುತ್ತಿರುವ ಕೋವಿಡ್-19 ಪಿಡುಗು ನಿಯಂತ್ರಣ ಹೋರಾಟದ ಈ ಸಂದರ್ಭದಲ್ಲಿ ಇದರಿಂದ ಹೊರಬರಲು ಎಲ್ಲರ ಸಹಕಾರ ಅಗತ್ಯವಿದೆ. ರೈತರ ಸಮಸ್ಯೆಗಳಿಗೆ ಸ್ಪಂದಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರ ಸದಾ ಸಿದ್ಧವಿದ್ದು ಯಾವುದೇ ಕಾರಣಕ್ಕೂ ರೈತ ಸಮುದಾಯವು ಆತ್ಮ ಸ್ಥೈರ್ಯ ಕಳೆದುಕೊಳ್ಳಬಾರದು ಎಂದು ಸಚಿವರು ಮನವಿ ಮಾಡಿದರು. ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಜಿಲ್ಲೆಯಲ್ಲಿ ಮಹಾಮಾರಿ ಕರೊನಾ ತಡೆಗಟ್ಟಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.

ಎಪಿಎಂಸಿಯಲ್ಲಿ ಟೆಂಡರ್​ಗೆ ಅನುಮತಿ ನೀಡಲಾಗಿದ್ದು ಅಲ್ಲಿನ ಸಿಬ್ಬಂದಿ ಹಾಗೂ ಹಮಾಲರಿಗೆ ಪಾಸ್ ವಿತರಿಸಬೇಕು. ಟ್ರ್ಯಾಕ್ಟರ್​ಗೆ ಡೀಸೆಲ್ ಪೂರೈಕೆಗಾಗಿ ಕ್ರಮ ಕೈಗೊಳ್ಳಬೇಕು. ಹಾಪ್​ಕಾಮ್್ಸ ಕೇಂದ್ರಗಳ ಮೂಲಕ ತರಕಾರಿ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದರು.

ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮಾತನಾಡಿ, ಕಳೆದ 10 ದಿನಗಳಿಂದ ಜಿಲ್ಲೆಯ ಎಲ್ಲ ಎಪಿಎಂಸಿಗಳು ಪ್ರಾರಂಭವಾಗಿದ್ದು, ರೈತರು ಬೆಳೆ ತೆಗೆದುಕೊಂಡು ಹೋಗಲು, ಮಾರುಕಟ್ಟೆಗೆ ಸಾಗಿಸಲು, ಕೃಷಿ ಪರಿಕರಗಳ ಖರೀದಿ ಹಾಗೂ ಕೃಷಿ ಸಂಬಂಧಿತ ಇನ್ನಿತರ ವಸ್ತುಗಳೊಂದಿಗೆ ಮುಕ್ತವಾಗಿ ಸಂಚಾರ ಮಾಡುವುದಕ್ಕಾಗಿ ರೈತರಿಗೆ ಗ್ರೀನ್ ಪಾಸು ನೀಡಲು ಕ್ರಮ ಜರುಗಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ಕರೊನಾ ಪಾಸಿಟಿವ್ ಪತ್ತೆಯಾದ ಹಿನ್ನೆಲೆಯಲ್ಲಿ ಪೆಟ್ರೋಲ್ ಬಂಕ್ ಮಾಲೀಕರ ಸಭೆ ಕರೆಯಲಾಗಿತ್ತು. ಗದಗ ಬೆಟಗೇರಿ ನಗರದ ಕೋವಿಡ್ 19 ಘೊಷಿತ ನಿಯಂತ್ರಿತ ಪ್ರದೇಶದಲ್ಲಿ ಸ್ವಯಂ ಪ್ರೇರಿತವಾಗಿ ಬಂಕ್​ನವರೇ ಪೆಟ್ರೊಲ್ ಮಾರಾಟ ಬಂದ್ ಮಾಡಿದ್ದಾರೆ. ಅದರೂ ಗದಗ ಹಾಗೂ ಬೆಟಗೇರಿಯಲ್ಲಿ ತಲಾ ಒಂದು ಪೆಟ್ರೋಲ್ ಬಂಕ್​ಗಳು ಕಾರ್ಯಾರಂಭ ಮಾಡಲು ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು. ಜಂಟಿ ಕೃಷಿ ನಿರ್ದೇಶಕ ರುದ್ರೇಶಪ್ಪ ಮಾತನಾಡಿದರು. ಗದಗ ಜಿಪಂ ಅಧ್ಯಕ್ಷ ಸಿದ್ಧಲಿಂಗೇಶ್ವರ ಪಾಟೀಲ, ಶಾಸಕ ರಾಮಣ್ಣ ಲಮಾಣಿ, ಜಿಪಂ ಉಪಾಧ್ಯಕ್ಷೆ ಮಲ್ಲವ್ವ ಬಿಚ್ಚೂರ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net