

ಬೇತಮಂಗಲ: ಒಂದು ಎಕರೆ ಭೂಮಿ ಇದ್ದರೆ ತೋಟಗಾರಿಕೆ ಇಲಾಖೆಯಿಂದ 110 ಮಾವಿನ ಗಿಡ ಅಥವಾ ಇತರೆ ಗಿಡಗಳನ್ನು ವಿತರಿಸಲಾಗುವುದು. ಅದಕ್ಕೆ ಗುಣಿ ತೆಗೆದು ನಾಟಿ ಮಾಡಲು ಒಟ್ಟು 30 ಸಾವಿರ ರೂ., ನಂತರ ಸುಮಾರು ಮೂರು ವರ್ಷಗಳ ಕಾಲ ಉತ್ತಮ ಪೋಷಣೆಗೆ ಬೇಕಾದ ಮಾರ್ಗದರ್ಶನ ನೀಡಲಾಗುವುದು ಎಂದು ತೋಟಗಾರಿಕೆ ಇಲಾಖೆ ಸಹಾಯಕ ಕೃಷಿ ಅಧಿಕಾರಿ ವಿಶ್ವನಾಥ್ ತಿಳಿಸಿದರು.
ನರೇಗಾ ಮತ್ತು ಪ್ರಧಾನ ಮಂತ್ರಿ ಸಮಗ್ರ ರೈತ ಅಭಿವೃದ್ಧಿ ಯೋಜನೆಗಳಿಗೆ ಸಂಬಂಧಪಟ್ಟಂತೆ ಕೆಜಿಎ್ ತಾಲೂಕು ಬೇತಮಂಗಲ ರೈತ ಸಂಪರ್ಕ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿ, ರೈತರಿಗೆ ಉಚಿತವಾಗಿ ಬಾದಾಮ್, ಮಲ್ಲಿಕಾ, ರಸಪೂರಿ ಸೇರಿ ಇತರೆ ತಳಿಯ ಮಾವಿನ ಗಿಡಗಳು, ಸೇಬು, ತೆಂಗು ಹಲಸು ದಾಳಿಂಬೆ, ಹಲವು ಜಾತಿಯ ಗಿಡಗಳನ್ನು ಉಚಿತವಾಗಿ ನೀಡುವುದರ ಜತೆಗೆ ಅವುಗಳನ್ನು ನಾಟಿ ಮಾಡಲು ಕನಿಷ್ಠ 20 ಸಾವಿರದಿಂದ 40 ಸಾವಿರವರೆಗೂ ಸಹಾಯಧನ ನೀಡಲಾಗುತ್ತಿದೆ ಎಂದು ತಿಳಿಸಿದರು.
ಪ್ರಧಾನಮಂತ್ರಿ ಸಮಗ್ರ ರೈತ ಅಭಿವೃದ್ಧಿ ಯೋಜನೆಯಡಿ ಹನಿ ನೀರಾವರಿ ಉಪಕರಣಗಳನ್ನು ಶೇ.90 ಸಹಾಯಧನ ನೀಡಲಾಗುವುದು. ಸೋಲಾರ್ ಪಂಪ್ಸೆಟ್ಗಳು ನೀಡುತ್ತಿದ್ದು, ಒಟ್ಟು 3 ಲಕ್ಷ ರೂ. ಬೆಲೆಯ ಉಪಕರಣವನ್ನು ಶೇ.50 ಸಹಾಯಧನದಲ್ಲಿ 1 ಲಕ್ಷ 50 ಸಾವಿರ ರೂ. ನೀಡಲಾಗುವುದು ಎಂದರು.