

ಬೆಂಗಳೂರು: ರಾಜ್ಯದಲ್ಲಿ ಆಮ್ಲಜನಕದ ಕೊರತೆಯಿಂದ ಕೋವಿಡ್ ಸೋಂಕಿತರು ಚಿಕಿತ್ಸೆಗೆ ಪರದಾಡುತ್ತಿದ್ದಾರೆ. ಹಾಗಾಗಿ ಸೋಂಕಿಗೆ ಒಳಗಾಗಿರುವ ಬಡ ರೋಗಿಗಳ ನೆರವಿಗೆ ಮುಂದಾಗಿರುವ ನಗರದ ಆರ್.ವಿ.ರಾಕ ಚಾರಿಟಬಲ್ ಟ್ರಸ್ಟ್ ವತಿಯಿಂದ ವಿಜಯನಗರ ಬಡಾವಣೆಯ ಜನರಿಗೆ ಉಚಿತವಾಗಿ ಆಮ್ಲಜನಕ ಪೂರೈಕೆ ಮಾಡುತ್ತಿದೆ.
ವಿಜಯನಗರದಲ್ಲಿ ಮಂಗಳವಾರವಷ್ಟೇ ಈ ಸೇವೆ ಪ್ರಾರಂಭಿಸಿರುವ ಟ್ರಸ್ಟ್ ಈವರೆಗೂ ವಿಜಯನಗರ ಬಡಾವಣೆಯ ಅರ್ಹ ಐವರಿಗೆ ಸಕಾಲದಲ್ಲಿ ಉಚಿತವಾಗಿ ಆಮ್ಲಜನಕ ಪೂರೈಸುವ ಮೂಲಕ ನೆರವಾಗಿದೆ. ಆಸ್ಪತ್ರೆಯಲ್ಲಿ ಹಾಸಿಗೆ ದೊರೆಯದೆ ಮನೆಯಲ್ಲಿರುವ ಅದರಲ್ಲೂ ಆಮ್ಲಜನಕದ ಅಗತ್ಯ ಇರುವ ಸೋಂಕಿತರಿಗೆ 140 ಲೀಟರ್ ಬೃಹತ್ ಆಕ್ಸಿಜನ್ ಸಿಲಿಂಡರ್ ಅನ್ನು ಮನೆಗೆ ಪೂರೈಸುತ್ತಿದೆ.
ಬಿಡದಿಯಲ್ಲಿ ಆಮ್ಲಜನಕ ಉತ್ಪಾದಿಸುತ್ತಿರುವ ಬೆಂಟ್ಲಿ ರನ್ನಿಂಗ್ ಪ್ರೈ. ಲಿ. ಟ್ರಸ್ಟ್ ಮೂಲಕ ಬಡ ಸೋಂಕಿತರಿಗೆ ಉಚಿತವಾಗಿ ಆಮ್ಲಜನಕ ಪೂರೈಸುತ್ತಿದೆ.
ಬಡ ರೋಗಿಗಳ ಅನುಕೂಲಕ್ಕಾಗಿ ಈ ಸೇವೆ ಮಾಡುತ್ತಿದ್ದೇವೆ. ಹಾಗಾಗಿ ಕರೆ ಮಾಡಿದವರಿಗೆಲ್ಲ ಆಮ್ಲಜನಕ ಪೂರೈಸುವುದಿಲ್ಲ ಕೇವಲ ವಿಜಯ ನಗರ ಬಡಾವಣೆ ನಿವಾಸಿಗಳಿಗೆ ಮಾತ್ರ ನೀಡಲಾಗುವುದು ಎನ್ನುತ್ತಾರೆ ಸಂಸ್ಥೆಯ ಸಂಚಾಲಕ ನಿರ್ವಾಹಕ ಅನಿಲ್ ಕುಮಾರ್. ವಿಜಯನಗರ ಬಡಾವಣೆಯ ನಿವಾಸಿಗಳು ಆಮ್ಲಜನಕಕ್ಕಾಗಿ ವಿಳಾಸ: ಆರ್. ವಿ. ರಾಕ ಚಾರಿಟಬಲ್ ಟ್ರಸ್ಟ್ , 1ನೇ ಕ್ರಾಸ್, ಮ್ಯಾಕ್ ಡೊನಾಲ್ಡ್ ಎದುರು, ಹಂಪಿನಗರ. ಮೊ. 8197012513.