ಕೃಷಿ, ತೋಟಗಾರಿಕೆ ಉತ್ಪನ್ನಗಳ ವಹಿವಾಟು ಮುಕ್ತ

BC Patil
Published on

ಬೆಂಗಳೂರು: ಹಣ್ಣು, ತರಕಾರಿ ಸೇರಿ ಕೃಷಿ ಉತ್ಪನ್ನಗಳ ವಹಿವಾಟು ಹಾಗೂ ಕೃಷಿ ಚಟುವಟಿಕೆಗಳಿಗೆ ಲಾಕ್​ಡೌನ್ ನಿರ್ಬಂಧಗಳನ್ನು ತೆಗೆದು ಹಾಕಲಾಗಿದೆ. ಸಾಗಣೆ, ಮಾರಾಟ, ಖರೀದಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ರೈತರು ಆತಂಕಗೊಳ್ಳುವುದು ಬೇಡ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದಷ್ಟೇ ಮುಖ್ಯ.

ಕೃಷಿ ಸಚಿವ ಬಿ.ಸಿ.ಪಾಟೀಲ್ ಕಳಕಳಿಯ ಮಾತುಗಳಿವು. ದಿಗ್ವಿಜಯ 24ಗಿ7 ನ್ಯೂಸ್ ಹಾಗೂ ವಿಜಯವಾಣಿ ಆಯೋಜಿಸಿದ್ದ ರೈತರೊಂದಿಗೆ ಸಂವಾದ ‘ಹಲೋ ಮಿನಿಸ್ಟರ್’ ಕಾರ್ಯಕ್ರಮದಲ್ಲಿ ರೈತರು ಕೇಳಿದ ಪ್ರಶ್ನೆಗಳಿಗೆ ವಿಶ್ವಾಸ, ಆತ್ಮಸ್ಥೈರ್ಯ ತುಂಬುವ ಉತ್ತರಗಳನ್ನು ನೀಡಿದರು. ಅಲ್ಲದೆ, ಸರ್ಕಾರ ತುರ್ತು ಕೈಗೊಂಡ ಕ್ರಮಗಳು, ಸಿಎಂ ಬಿ.ಎಸ್. ಯಡಿಯೂರಪ್ಪ ನಿರ್ಧಾರಗಳನ್ನು ಮನವರಿಕೆ ಮಾಡಿಕೊಟ್ಟರು.

ಎಲ್ಲವೂ ಸಹಜ ಸ್ಥಿತಿಗೆ ಬರಲು ಕೆಲವು ದಿನಗಳು ಬೇಕಾಗಲಿದ್ದು, ರೈತರು ದಿಗಿಲುಗೊಂಡು ಬೆಳೆದ ತರಕಾರಿ, ಹಣ್ಷು ದವಸ ಧಾನ್ಯಗಳನ್ನು ಬೀದಿಗೆ ಚೆಲ್ಲಿ ಹಾಳು ಮಾಡಬಾರದು. ಮಾರುಕಟ್ಟೆಗೆ ಒಂದೇ ಬಾರಿ ಮುಗಿಬಿದ್ದರೆ ಬೆಲೆ ಕುಸಿಯಲೂಬಹುದು. ಸ್ವಲ್ಪ ತಾಳ್ಮೆ ವಹಿಸಿದರೆ, ಸರ್ಕಾರ ಕಲ್ಪಿಸಿದ ಪರಿಹಾರ ಕ್ರಮಗಳ ಪ್ರಯೋಜನ ಪಡೆಯಲು ಸಾಧ್ಯವಿದೆ ಎಂದು ಮನವಿ ಮಾಡಿದರು.

ಅಡೆತಡೆಯಿಲ್ಲ: ಎಪಿಎಂಸಿಗಳು ತೆರೆದಿರುತ್ತವೆ, ಚೆಕ್ ಪೋಸ್ಟ್​ಗಳಲ್ಲಿ ಅಡೆತಡೆಯಿಲ್ಲ, ಸಾಗಣೆಗೆ ಅಡ್ಡಿಯುಂಟು ಮಾಡದಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಕೇರಳ ಹೊರತುಪಡಿಸಿ ತರಕಾರಿ, ಹಣ್ಣುಗಳ ಅಂತಾರಾಜ್ಯ ಸಾಗಣೆಗೆ ಅವಕಾಶವಿದೆ. ಕೇಂದ್ರ ಸರ್ಕಾರದ ಸುತ್ತೋಲೆ ಗೂಡ್ಸ್ ರೈಲುಗಳಲ್ಲಿ ಬೇರೆ ರಾಜ್ಯಗಳಿಗೆ ಸಾಗಿಸುವುದಕ್ಕೆ ಅನುಮತಿ ದೊರೆತಿದೆ. ಲಾರಿಗಳಲ್ಲಿ ಲೋಡಿಂಗ್ ಅನ್​ಲೋಡಿಂಗ್​ನಿಂದ ಹಿಡಿದು ಕೃಷಿ, ತೋಟಗಾರಿಕೆ ಉತ್ಪನ್ನಗಳ ಸಾಗಣೆ, ಮಾರಾಟ, ಖರೀದಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ ಎಂದರು.

ಹೆಚ್ಚುವರಿ ಖರೀದಿ: ತರಕಾರಿ ಹಾಗೂ ಹಣ್ಣುಗಳನ್ನು ಹೆಚ್ಚುವರಿಯಾಗಿ ಖರೀದಿಸಲು ಹಾಪ್​ಕಾಮ್ಸ್ಗೆ ಆದೇಶಿಸಿದ್ದು, ಸಾಗಣೆಗಾಗಿ ಪ್ರತಿ ಮಳಿಗೆಗೆ ತಲಾ ಒಂದು ವಾಹನದ ಬಾಡಿಗೆ, ಡೀಸೆಲ್ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಕೆಎಂಎಫ್​ನಲ್ಲಿ ಹೆಚ್ಚುವರಿ ಉಳಿಯುವ 8 ಲಕ್ಷ ಲೀಟರ್ ಹಾಲನ್ನು ಸರ್ಕಾರವೇ ಖರೀದಿಸಿ ಕೊಳಚೆ ಪ್ರದೇಶದ ನಿವಾಸಿಗಳು, ಬಡವರಿಗೆ ಉಚಿತವಾಗಿ ಪೂರೈಸಲಿದೆ. ಇದಕ್ಕಾಗಿ ತಗುಲುವ ವೆಚ್ವ 32 ಕೋಟಿ ರೂ. ಅನ್ನು ಬಿಡುಗಡೆ ಮಾಡಿದೆ ಎಂದು ಬಿ.ಸಿ.ಪಾಟೀಲ್ ತಿಳಿಸಿದರು. ಅವಕಾಶದ ದುರ್ಲಾಭ ಪಡೆಯುವ ಶಕ್ತಿಗಳ ವಿರುದ್ಧವೂ ಕಠಿಣ ಕ್ರಮಕೈಗೊಂಡು ಅನಗತ್ಯ ಬೆಲೆ ಏರಿಕೆಯಾಗದಂತೆ ಕ್ರಮವಹಿಸಲಾಗಿದೆ. ಹಾಪ್​ಕಾಮ್ಸ್ ಹೆಚ್ಚಿನ ದರಕ್ಕೆ ಮಾರುವುದರ ಬಗ್ಗೆ ನಿರ್ದಿಷ್ಟ ದೂರುಗಳನ್ನು ಕೊಟ್ಟರೆ ಕ್ರಮಕೈಗೊಳ್ಳಲಾಗುವುದು. ವಿಜಯಪುರ, ಬಾಗಲಕೋಟೆ ಹಾಗೂ ಹುಮನಾಬಾದ್ ವ್ಯಾಪ್ತಿಯ ಕೋಲ್ಡ್ ಸ್ಟೋರೇಜ್​ಗಳಲ್ಲಿ ಸ್ಥಳಾವಕಾಶವಿದ್ದು, ಆಸಕ್ತ ರೈತರು ಹಣ್ಣು-ತರಕಾರಿ ದಾಸ್ತಾನಿಡಬಹುದು, ಯಾವುದೇ ಬಾಡಿಗೆ ಶುಲ್ಕ ಪಾವತಿಸಬೇಕಿಲ್ಲ. ದ್ರಾಕ್ಷಿ ಬೆಳೆಗಾರರ ಸಮಸ್ಯೆಗೆ ಪರಿಹಾರವಾಗಿ ವೈನರಿಗಳನ್ನು ತೆರೆಯಲು ಪರವಾನಗಿ ನೀಡಲಾಗಿದೆ ಎಂದು ವಿವರಿಸಿದರು.

ಅಪಪ್ರಚಾರ: ಅಪಪ್ರಚಾರದಿಂದಾಗಿ ಕುಕ್ಕುಟೋದ್ಯಮ ಕುಸಿದು ಮೆಕ್ಕೆಜೋಳ ಖರೀದಿಗೆ ಹೊಡೆತ ಬಿತ್ತು. ಇದರಿಂದಾಗಿ ಮಾರುಕಟ್ಟೆಯಲ್ಲಿ ಮೆಕ್ಕೆಜೋಳ ಕ್ವಿಂಟಾಲ್​ಗೆ 1600ರಿಂದ 1000 ರೂ.ಗೆ ಕುಸಿದಿದೆ. ಹಕ್ಕಿ ಜ್ವರ ಅಥವಾ ಕರೊನಾಕ್ಕೂ ಚಿಕನ್ ತಿನ್ನುವುದಕ್ಕೂ ಸಂಬಂಧವಿಲ್ಲ. ಕಲ್ಲಂಗಡಿ ವಿಷಯದಲ್ಲೂ ಹೀಗೆ ತಪ್ಪು ಮಾಹಿತಿ ನೀಡಿದ್ದು, ಅದನ್ನೆಲ್ಲ ನಂಬಬಾರದು ಎಂದರು.

ಅಗ್ರಿ ವಾರ್ ರೂಮ್

ರೈತರು ಯಾವುದೇ ಸಮಸ್ಯೆಯನ್ನು ಇಲಾಖೆ ಉನ್ನತಾ ಧಿಕಾರಿಗಳ ಗಮನಕ್ಕೆ ತಂದು ಬಗೆಹರಿಸಿಕೊಳ್ಳಲು ಅಗ್ರಿ ವಾರ್ ರೂಮ್ ತೆರೆಯಲಾಗಿದೆ. ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ ಕರೆ ಮಾಡಿ ಸಲಹೆ ಪಡೆಯಬಹುದು. ಸಹಾಯವಾಣಿ ಸಂಖ್ಯೆ: 080 22242818 ಹಾಗೂ 080 22210237

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net