ಮಕ್ಕಳಿಗೆ ಉಚಿತವಾಗಿ ನೋಟ್ ಬುಕ್ ವಿತರಣೆ

30KMD-1
Published on

ಕೆ.ಎಂ.ದೊಡ್ಡಿ: ಅಣ್ಣೂರು ಗ್ರಾಮದ ಪಂಚಾಯಿತಿ ವ್ಯಾಪ್ತಿಯ ಬಸವೇಶ್ವರನಗರದ ವಿದ್ಯುತ್ ಸಂಪರ್ಕವಿಲ್ಲದ ನಿವಾಸಿಗಳಿಗೆ ಬೆಂಗಳೂರಿನ ಬಸವನಗುಡಿ ರೋಟರಿ ವತಿಯಿಂದ ಉಚಿತವಾಗಿ ಸೋಲಾರ್ ಬಲ್ಬ್ ಹಾಗೂ ಶಾಲಾ ಮಕ್ಕಳಿಗೆ ನೋಟ್ ಬುಕ್‌ಗಳನ್ನು ವಿತರಣೆ ಮಾಡಲಾಯಿತು.

ಬೆಂಗಳೂರಿನ ಬಸವನಗುಡಿ ರೋಟರಿ ಸಂಸ್ಥೆಯ ಅಧ್ಯಕ್ಷ ವಿಜಯ್ ರಾಜ್ ನೇತೃತ್ವದಲ್ಲಿ ಸುಮಾರು 25ಕ್ಕೂ ಹೆಚ್ಚಿನ ಕುಟುಂಬಗಳಿಗೆ ಉಚಿತವಾಗಿ ಸೋಲಾರ್ ಬಲ್ಬ್‌ಗಳು ಹಾಗೂ 50ಕ್ಕೂ ಹೆಚ್ಚಿನ ಶಾಲಾ ಮಕ್ಕಳಿಗೆ ಉಚಿತವಾಗಿ ನೋಟ್ ಬುಕ್‌ಗಳು ಹಾಗೂ ಶಾಲಾ ಪರಿಕರಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಅಣ್ಣೂರು ಗ್ರಾಮ ಪಂಚಾಯಿತಿ ಸದಸ್ಯ ಸತೀಶ್ ಮಾತನಾಡಿ, ಬೆಂಗಳೂರಿನ ರೋಟರಿ ಸಂಸ್ಥೆಯ ಸಾಮಾಜಿಕ ಸೇವೆಯನ್ನು ಅಭಿನಂದಿಸುತ್ತಾ ಅವರ ನಿಸ್ವಾರ್ಥ ಸೇವೆಯನ್ನು ನಾವು ಮನತುಂಬಿ ಶ್ಲಾಘಿಸುತ್ತೇವೆ. ಸದಾ ಜನಪರವಾದ ಸಮಾಜ ಮುಖಿ ಸೇವೆಗಳಲ್ಲಿ ಮುಂಚೂಣಿಯಲ್ಲಿರುವ ರೋಟರಿ ಸಂಸ್ಥೆ ರಾಜ್ಯಾದ್ಯಂತ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಕೈಗೊಂಡಿದ್ದಾರೆ ಎಂದರು.

ನಮ್ಮ ಅಣ್ಣೂರು ಗ್ರಾಮದ ಬಸವೇಶ್ವರನಗರದ ನಿವಾಸಿಗಳಿಗೆ ಬೆಳಕಾಗಿ ಹಾಗೂ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವಾಗುವುದರ ಮೂಲಕ ತಮ್ಮ ಸಾಮಾಜಿಕ ಬದ್ಧತೆಯನ್ನು ಮೆರೆದಿದ್ದಾರೆ. ಇಂತಹ ಸಮಾಜಮುಖಿ ಕಾರ್ಯಗಳಿಗೆ ಅಣ್ಣೂರು ಗ್ರಾಮ ಪಂಚಾಯಿತಿ ಸದಾ ಕೈ ಜೋಡಿಸುತ್ತದೆ ಎಂದು ತಿಳಿಸಿದರು.

ಬೆಂಗಳೂರು ರೋಟರಿ ಸಂಸ್ಥೆಯ ಉಪಾಧ್ಯಕ್ಷೆ ಆಶಾ ರಾಜೇಶ್, ಯುವ ಸೇವಾ ನಿರ್ದೇಶಕ ಅರುಣ್ ಕುಮಾರ್ , ಅಂತಾರಾಷ್ಟ್ರೀಯ ಸೇವಾ ನಿರ್ದೇಶಕ ರಾಜಶೇಖರ್ ಕೃಷ್ಣ, ಅಣ್ಣೂರು ಗ್ರಾಮ ಪಂಚಾಯಿತಿ ಪಿಡಿಒ ಅಶ್ವಿನಿ ಸೇರಿದಂತೆ ಸ್ಥಳೀಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net