ಅಳುಕು ಬೇಡ, ಕನ್ನಡ ಓದಿದವರು ಸರ್ವಾಂತರ್ಯಾಮಿಗಳು

UDP-24-5-Award
ಉಡುಪಿಯಲ್ಲಿ ಪತ್ರಕರ್ತ ರಾಜೇಶ್​ ಶೆಟ್ಟಿ ಅವರಿಗೆ ಯಶೋ ಮಾಧ್ಯಮ ಪ್ರಶಸ್ತಿ ಪ್ರದಾನ ಮಾಡಲಾಯಿತು. ಡಾ.ಅಶೋಕ್​, ಜನಾರ್ದನ್​ ಕೊಡವೂರು, ಡಾ. ಮರಿಯಾ ಪಾಯಸ್​, ವೆಂಕಟೇಶ್​ ಪೈ, ರಜನಿ ವಿ. ಪೈ, ಸಂತೋಷ್​ ಶೆಟ್ಟಿ ಇತರರಿದ್ದರು.
Published on

ಡಾ.ಅಶೋಕ್​ ಅಭಿಪ್ರಾಯ | ಯಶೋ ಮಾಧ್ಯಮ ಪ್ರಶಸ್ತಿ ಪ್ರದಾನ

ವಿಜಯವಾಣಿಸುದ್ದಿಜಾಲ ಉಡುಪಿ
ಕನ್ನಡ ಮಾಧ್ಯಮದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ತಾವು ಕನ್ನಡ ಮಾಧ್ಯಮದವರು ಎನ್ನಲು ಯಾವುದೇ ಅಳುಕು ಬೇಡ. ಏಕೆಂದರೆ, ಕನ್ನಡ ಮಾಧ್ಯಮದಲ್ಲಿ ಓದಿದವರು ಇಂದು ಸರ್ವಾಂತರ್ಯಾಮಿ ಆಗಿದ್ದಾರೆ ಎಂದು ಉಡುಪಿ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಅಶೋಕ್​ ಹೇಳಿದರು.

ಕಲ್ಯಾಣಪುರದ ಹಿಂದು ಹಿ.ಪ್ರಾ. ಶಾಲೆಯಲ್ಲಿ ಇತ್ತೀಚೆಗೆ ಸ್ಪಂದನ ಸೇವಾ ಸಂಸ್ಥೆ ಆಯೋಜಿಸಿದ್ದ ಮಕ್ಕಳಿಗೆ ಉಚಿತ ನೋಟ್​ ಬುಕ್​ ವಿತರಣೆ ಹಾಗೂ ಯಶೋ ಮಾಧ್ಯಮ-2024 ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶಿಕ್ಷಕರಿಗಿದೆ ಹೆಚ್ಚಿನ ಜವಾಬ್ದಾರಿ

ಶಿಕ್ಷಕರು ಎಷ್ಟು ಹೊತ್ತು ಕೆಲಸ ಮಾಡಿದ್ದಾರೆ ಎನ್ನುವುದು ಮುಖ್ಯವಲ್ಲ, ಎಷ್ಟು ಗುಣಮಟ್ಟದ ಕೆಲಸ ಮಾಡಿದ್ದೀರಿ ಎನ್ನುವುದು ಮುಖ್ಯವಾಗುತ್ತದೆ. ಉತ್ತಮ ಸಮಾಜ ಹಾಗೂ ಭವ್ಯ ಭಾರತ ನಿರ್ಮಿಸುವ ಜವಾಬ್ದಾರಿ ಪಾಲಕರಿಗಿಂತ ಹೆಚ್ಚು ಶಿಕ್ಷಕರ ಜವಾಬ್ದಾರಿಯಾಗಿದೆ. ರೈತಾಪಿ ಬಳಗದಿಂದಾಗಿ ನಾವೆಲ್ಲ ಅನ್ನ ತಿನ್ನುತ್ತಿದ್ದು, ಅವರ ಏಳಿಗೆಗಾಗಿ ಕೆಲಸ ಮಾಡಬೇಕು ಎಂದರು.

ಪ್ರಶಸ್ತಿ ಪ್ರದಾನ

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್​ ಶೆಟ್ಟಿ ಅವರಿಗೆ ಯಶೋ ಮಾಧ್ಯಮ-2024 ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿಗೆ ಆಯ್ಕೆ ಮಾಡಿ ನನ್ನ ಜವಾಬ್ದಾರಿ ಹೆಚ್ಚಿಸಿದ್ದಾರೆ ಎಂದು ರಾಜೇಶ್​ ಶೆಟ್ಟಿ ಹೇಳಿದರು.

ಇನ್ನೂ ಉತ್ತಮ ಕೆಲಸಗಳಲ್ಲಿ ತೊಡಗಲಿ

ಹಿರಿಯ ಪತ್ರಕರ್ತ ಜನಾರ್ದನ್​ ಕೊಡವೂರು ಮಾತನಾಡಿ, ಸಂಸ್ಥೆಯು ಈ ಶಾಲೆಗೆ ಪ್ರತಿವರ್ಷ ಉಚಿತವಾಗಿ ನೋಟ್​ ಬುಕ್​ ನೀಡುತ್ತಿದೆ. ಅಲ್ಲದೆ, ಇದರ ಅಧ್ಯಕ್ಷರಾದ ವೆಂಕಟೇಶ್​ ಪೈ ಅವರೂ ಸಹ ಪತ್ರಕರ್ತರಾಗಿದ್ದು, ಜಿಲ್ಲೆಯ ಓರ್ವ ಪತ್ರಕರ್ತರನ್ನು ಗುರುತಿಸಿ ಯಶೋ ಮಾಧ್ಯಮ ಪ್ರಶಸ್ತಿ ನೀಡಿ ಗೌರವಿಸುತ್ತಿದ್ದಾರೆ. ಸಂಸ್ಥೆಯು ಇನ್ನೂ ಉತ್ತಮ ಕೆಲಸಗಳಲ್ಲಿ ತೊಡಗಿಕೊಳ್ಳಲಿ ಎಂದರು.

ಮಣಿಪಾಲ ಕಾಲೇಜು ಆಫ್​ ನರ್ಸಿಂಗ್​ನ ಸಹಾಯಕ ಪ್ರಾಧ್ಯಾಪಕಿ ಡಾ. ಮರಿಯಾ ಪಾಯಸ್​ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ವೆಂಕಟೇಶ್​ ಪೈ, ಖಜಾಂಚಿಗಳಾದ ರಜನಿ ವಿ. ಪೈ ಅವರು ಸಂಸ್ಥೆಯ ಕಾರ್ಯ ಯೋಜನೆಗಳ ಬಗ್ಗೆ ತಿಳಿಸಿದರು.

ಶಾಲಾ ಆಡಳಿತ ಮಂಡಳಿಯ ಪ್ರಕಾಶ್​ ಶೆಟ್ಟಿ, ಡಾ. ಶೇಷಪ್ಪ ರೈ, ಮುಖ್ಯೋಪಾಧ್ಯಾಯ ಸಂತೋಷ್​ ಶೆಟ್ಟಿ, ಸಂಸ್ಥೆಯ ಕಾರ್ಯದರ್ಶಿ ಸಂತೋಷ್​ ಕಾಮತ್​ ಹಾಗೂ ಶಿಕ್ಷಕರು, ವಿದ್ಯಾರ್ಥಿಗಳು, ಪಾಲಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net