

ಶಿಗ್ಗಾಂವಿ: ಕೆಎಲ್ಇ ಜಗದ್ಗುರು ಗಂಗಾಧರ ಮಹಾಸ್ವಾಮೀಜಿ ವೈದ್ಯಕೀಯ ಮಹಾವಿದ್ಯಾಲಯ ಹುಬ್ಬಳ್ಳಿ, ಕೆಎಲ್ಇ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರ ಗಬ್ಬೂರ ಆಶ್ರಯದಲ್ಲಿ ಪಟ್ಟಣದಲ್ಲಿ ಹೊಸ ಬಸ್ ನಿಲ್ದಾಣ ಪಕ್ಕದಲ್ಲಿ ನೂತನವಾಗಿ ಪ್ರಾರಂಭವಾದ ಕೆಎಲ್ಇ ಸ್ಪೇಷಲಿಸ್ಟ್ ಸ್ಯಾಟ್ಲೈಟ್ ಪಾಲಿಕ್ಲಿನಿಕ್ ಆಸ್ಪತ್ರೆಯಲ್ಲಿ ಉಚಿತ ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸೆ ಶಿಬಿರ ಮಾ. 28ರಂದು ಬೆಳಗ್ಗೆ 10 ರಿಂದ ಸಂಜೆ 4 ರವರೆಗೆ ನಡೆಯಲಿದೆ ಎಂದು ಹುಬ್ಬಳ್ಳಿಯ ಕೆಎಲ್ಇ ಜೆಜಿಎಂಎಂಸಿ ಪ್ರಾಚಾರ್ಯ ಡಾ. ಎಂ.ಜಿ. ಹಿರೇಮಠ ಹೇಳಿದರು.
ಪಟ್ಟಣದ ಪಾಲಿಕ್ಲಿನಿಕ್ ಆಸ್ಪತ್ರೆಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಶಿಬಿರದ ವೇದಿಕೆ ಕಾರ್ಯಕ್ರಮದ ಉದ್ಘಾಟನೆಯನ್ನು ಕೆಎಲ್ಇ ಚೇರ್ಮನ್ ಡಾ. ಪ್ರಭಾಕರ ಕೋರೆ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಶಂಕ್ರಣ್ಣ ಮುನವಳ್ಳಿ, ಡಾ. ಪ್ರೊ. ನಿತಿನ್ ಗಂಗಾನೆ, ಡಾ. ಪ್ರೊ. ವಿ.ಡಿ. ಪಾಟೀಲ ಆಗಮಿಸಲಿದ್ದಾರೆ ಎಂದರು.
ಹುಬ್ಬಳ್ಳಿಯ ಗಬ್ಬೂರ ಹತ್ತಿರ ನೂತನವಾಗಿ ನಿರ್ವಣವಾಗಿರುವ ಕೆಎಲ್ಇ ಜಗದ್ಗುರು ಗಂಗಾಧರ ಮಹಾಸ್ವಾಮೀಜಿ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಂದ ಮುಂದಿನ ಎರಡು ತಿಂಗಳಲ್ಲಿ ಉದ್ಘಾಟನೆಗೊಳ್ಳಲಿದೆ. ಉದ್ಘಾಟನೆಗೂ ಪೂರ್ವದಲ್ಲಿಯೇ ಜನವರಿಯಿಂದಲೇ ನಿರಂತರವಾಗಿ ಅಲ್ಲಿ ಉಚಿತ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ವೈದ್ಯಕೀಯ ಸಂಶೋಧನಾ ಕೇಂದ್ರವನ್ನು ಜನರಿಗೆ ಪರಿಚಯಿಸಲು ಹಾಗೂ ಈ ಭಾಗದಲ್ಲಿ ಜನರಿಗೆ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಪಟ್ಟಣದಲ್ಲಿ ಹೊಸದಾಗಿ ಕೆಎಲ್ಇ ಸ್ಪೇಷಲಿಸ್ಟ್ ಸ್ಯಾಟ್ಲೈಟ್ ಪಾಲಿಕ್ಲಿನಿಕ್ ತೆರೆಯಲಾಗುತ್ತಿದೆ ಎಂದರು.
ಪಾಲಿಕ್ಲಿನಿಕ್ ಆಸ್ಪತ್ರೆಯಲ್ಲಿ ಉಚಿತವಾಗಿ ವಾರದ ಐದು ದಿನಗಳ ಕಾಲ ವೈದ್ಯಕೀಯ ಸೇವೆ ದೊರೆಯಲಿದೆ. ಸೋಮವಾರ ಮತ್ತು ಗುರುವಾರ ಸಾಮಾನ್ಯ ಆರೋಗ್ಯ ತಪಾಸಣೆ, ಸಾಮಾನ್ಯ ಶಸ್ತ್ರಚಿಕಿತ್ಸೆ ನಡೆಯಲಿದೆ. ಮಂಗಳವಾರ ಚಿಕ್ಕಮಕ್ಕಳ ತಪಾಸಣೆ, ಚರ್ಮರೋಗ ಮಾನಸಿಕ ರೋಗಿಗಳ ತಪಾಸಣೆ ನಡೆಯಲಿದೆ. ಬುಧವಾರ ಪ್ರಸೂತಿ ಮತ್ತು ಸ್ತ್ರೀರೋಗ, ಎಲುಬು ಮತ್ತು ಕೀಲುಗಳ ತಪಾಸಣೆ, ಫಿಸಿಯೋಥೆರಪಿ, ಹೃದಯ ರೋಗ ತಪಾಸಣೆ, ಶುಕ್ರವಾರ ಕಣ್ಣು, ಕಿವಿ, ಮೂಗು, ಗಂಟಲು, ದಂತ ತಪಾಸಣೆ ನಡೆಯಲಿದೆ. ಪ್ರತಿದಿನವೂ ಹುಬ್ಬಳ್ಳಿಯ ಕೆಎಲ್ಇ ವೈದ್ಯಕೀಯ ಸಂಸ್ಥೆಯ ತಜ್ಞ ವೈದ್ಯರ ತಂಡ ತಪಾಸಣೆಗೆ ಬರಲಿದೆ. ಬೆಳಗ್ಗೆ 10 ರಿಂದ ಸಂಜೆ 4ರವರೆಗೆ ಉಚಿತವಾಗಿ ಆರೋಗ್ಯ ತಪಾಸಣೆ ನಡೆಯಲಿದೆ. ರೋಗಿಗಳಿಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯಬಿದ್ದಲ್ಲಿ ಸಂಸ್ಥೆಯ ವಾಹನಗಳ ಮೂಲಕವೇ ಹುಬ್ಬಳ್ಳಿಯ ಗಬ್ಬೂರ ಹತ್ತಿರ ಇರುವ ಕೆಎಲ್ಇ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ಉಚಿತವಾಗಿ ಸೇವೆ ಒದಗಿಸಲಿದೆ ಎಂದು ಹೇಳಿದರು.
ಶಿಗ್ಗಾಂವಿ ಕೆಎಲ್ಇ ಸ್ಪೇಷಲಿಸ್ಟ್ ಸ್ಯಾಟ್ಲೈಟ್ ಪಾಲಿಕ್ಲಿನಿಕ್ ಆಡಳಿತಾಧಿಕಾರಿ ಬಸವರಾಜ ಸಜ್ಜನ ಇದ್ದರು.