ನಂಜನಗೂಡಿನಲ್ಲಿ ಮೇ 22 ರಂದು ಉಚಿತ ಸಾಮೂಹಿಕ ವಿವಾಹ : ನೋಂದಣಿಗೆ ಮೇ 15 ಕಡೆಯ ದಿನ

nanjanagudu
Published on

ಮೈಸೂರು: ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನದಲ್ಲಿ ಮೇ 22 ರಂದು ಉಚಿತ ಸಮೂಹಿಕ ವಿವಾಹ ಆಯೋಜಿಸಲಾಗಿದ್ದು, ಅರ್ಹ ಜೋಡಿಗಳು ಮೇ 15 ರೊಳಗೆ ನೋಂದಾಯಿಸಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ. ಪಿ ಶಿವರಾಜು ಮನವಿ ಮಾಡಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ‘ಮಾಂಗಲ್ಯ ಭಾಗ್ಯ’ ಯೋಜನೆಯ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರಳ ಹಾಗೂ ಸಾಮೂಹಿಕ ವಿವಾಹದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಆಡಂಬರ ರಹಿತವಾಗಿ ‘ಮಾಂಗಲ್ಯ ಭಾಗ್ಯ’ ಸರಳ ಸಾಮೂಹಿಕ ಉಚಿತ ವಿವಾಹವನ್ನು ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ನಡೆಸಲು ಸರ್ಕಾರ ತೀರ್ಮಾನಿ ಸಿದೆ. ಈ ಯೋಜನೆಯನ್ನು ಅರ್ಹರು ಪಡೆದುಕೊಳ್ಳಬೇಕು ಎಂದರು.

ವಧುವಿಗೆ ಚಿನ್ನದ ತಾಳಿ ಮತ್ತು ಎರಡು ಚಿನ್ನದ ಗುಂಡು(ಅಂದಾಜು 8 ಗ್ರಾಂ ತೂಕ)ನೀಡಲಾಗುವುದು. ಈ ಯೋಜನೆಯಡಿ ವಿವಾಹವಾಗಲು ಬಯಸುವವರು ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಾಲಯ, ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನ, ತಲಕಾಡಿನ ವೈದ್ಯನಾಥೇಶ್ವರಸ್ವಾಮಿ ಹಾಗೂ ಸಮೂಹ ದೇವಾಲಯಗಳು, ಜಿಲ್ಲಾಧಿಕಾರಿಗಳ ಕಚೇರಿಯ ಧಾರ್ಮಿಕ ದತ್ತಿ ತಹಶೀಲ್ದಾರ್ ಕಚೇರಿ, ಅರಮನೆ ಮುಜರಾಯಿ ದೇವಾಲಯಗಳ ವ್ಯವಸ್ಥಾಪಕರ ಬಳಿ ಹಾಗೂ ಜಿಲ್ಲೆಯ ಎಲ್ಲ ತಾಲೂಕು ತಹಶೀಲ್ದಾರ್ ಕಚೇರಿಯಲ್ಲಿ ಅರ್ಜಿ ಪಡೆದುಕೊಳ್ಳಬಹುದು ಎಂದು ತಿಳಿಸಿದರು.

ಅರ್ಜಿ ಪಡೆದ ವಧು-ವರರು ಅಗತ್ಯ ದಾಖಲೆಗಳನ್ನು ನೀಡಿ ನೋಂದಾಯಿಸಿಕೊಳ್ಳಬೇಕು. ವಧು-ವರರ ತಂದೆ ತಾಯಿಯವರು ವಿವಾಹಕ್ಕೆ ಒಪ್ಪಿ ವಿವಾಹ ದಿನದಂದು ಉಪಸ್ಥಿತರಿರಬೇಕು. ಜತೆಗೆ ವರನ ಸಾಕ್ಷಿದಾರರು ಇದ್ದಲ್ಲಿ ಮಾತ್ರ ವಿವಾಹವನ್ನು ನಡೆಸಲಾಗುವುದು. ತಂದೆ ತಾಯಿ ನಿಧನರಾಗಿದ್ದಲ್ಲಿ ಅವರ ವಾರಸುದಾರರರ ಸಂಪೂರ್ಣ ಒಪ್ಪಿಗೆ ಇದ್ದು, ಅವರ ವಿವಾಹ ದಿನದಂದು ಕಡ್ಡಾಯವಾಗಿ ಹಾಜರಿರಬೇಕು ಹಾಗೂ ತಂದೆ ತಾಯಿ ನಿಧನದ ಬಗ್ಗೆ ಕಡ್ಡಾಯವಾಗಿ ಮರಣ ಪ್ರಮಾಣ ಪತ್ರವನ್ನು ಹಾಜರುಪಡಿಸಬೇಕೆಂದು ಎಂದರು.

ಸರ್ಕಾರದ ನಿಯಮದಂತೆ ವರನಿಗೆ ಕನಿಷ್ಠ 21 ವರ್ಷ ವಧುವಿಗೆ ಕನಿಷ್ಠ 18 ವರ್ಷ ತುಂಬಿರಬೇಕು. ಮೊದಲನೇ ಮದುವೆಗೆ ಮಾತ್ರ ಅವಕಾಶವಿದ್ದು, ಎರಡನೇ ಮದುವೆಗೆ ಅವಾಕಾಶ ವಿರುವುದಿಲ್ಲ. ಅಂತರ್ಜಾತಿಯವರಾಗಿದ್ದರೆ ಧೃಢೀಕೃತ ಜಾತಿ ಪ್ರಮಾಣವನ್ನು ಕಡ್ಡಾಯವಾಗಿ ಹಾಜರುಪಡಿಸಬೇಕು ಎಂದು ಹೇಳಿದರು.

ವಧು-ವರರ ಕಡೆಯಿಂದ ಕಡ್ಡಾಯವಾಗಿ ಯಾವುದೇ ವರದಕ್ಷಿಣೆಯನ್ನು ಪಡೆಯುವಂತಿಲ್ಲ. ಸರ್ವಾಜನಿಕರಿಂದ ಯಾವುದೇ ದೂರು ಬಂದಲ್ಲಿ ಅಂತಹ ವಿವಾಹವಾಗುವ ವಧುವರರ ಬಗ್ಗೆ ಪುನರ್ ಪರಿಶೀಲಿಸಲಾಗುತ್ತದೆ ಹಾಗೂ ವಿವಾಹಕ್ಕೆ ಸಲ್ಲಿಸಿದ ದಾಖಲೆಗಳು ಸುಳ್ಳು ದಾಖಲೆಗಳೆಂದು ಧೃಡಪಟ್ಟಲ್ಲಿ ಅಂತಹವರ ಮೇಲೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.

ಸಭೆಯಲ್ಲಿ ನಂಜನಗೂಡು ಶ್ರೀಕಂಠೇಶ್ವರ ಸ್ವಾಮಿ ದೇವಾಯಲಯ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ್ ಕುಮಾರ್, ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಟಿ.ಕೆ.ಹರೀಶ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net