ಜೂ.25ಕ್ಕೆ ಸಹಚೇತನ ನಾಟ್ಯಾಲಯದಿಂದ ಉಚಿತ ಸಾಮೂಹಿಕ ರಂಗಪ್ರವೇಶ

sahachetana natyalaya
ರಂಗಪ್ರವೇಶಕ್ಕೆ ಸಜ್ಜಾದ ಹಿರಿಯ ವಿದ್ಯಾರ್ಥಿನಿಯರಾದ ಸಿಂಧುಶ್ರೀ ಅಡಿಗ, ಕಾಮಾಕ್ಷಿ ಆರ್. ಪ್ರಭು, ಡಿ.ಎ.ಸೇಜಲ್, ಎ.ಸಿ.ಶರಣ್ಯ, ಆರ್.ರಕ್ಷಿತಾ.
Published on

ಶಿವಮೊಗ್ಗ: ಶಿವಮೊಗ್ಗದ ಸಹಚೇತನ ನಾಟ್ಯಾಲಯದಿಂದ ನೃತ್ಯಕದಂಬಕಂ ಹೆಸರಿನಲ್ಲಿ ಹಿರಿಯ ಐವರು ವಿದ್ಯಾರ್ಥಿನಿಯರ ಉಚಿತ ಸಾಮೂಹಿಕ ರಂಗಪ್ರವೇಶ ಜೂ.25ರಂದು ಸಂಜೆ 5.30ಕ್ಕೆ ಕುವೆಂಪು ರಂಗಮಂದಿರದಲ್ಲಿ ನಡೆಯಲಿದೆ ಎಂದು ನಾಟ್ಯಾಲಯದ ಗೌರವಾಧ್ಯಕ್ಷ, ಶಾಸಕ ಎಚ್.ಎನ್.ಚನ್ನಬಸಪ್ಪ ತಿಳಿಸಿದರು.

ಅಂದು ನಾಟ್ಯಾಲಯದ ಹಿರಿಯ 5 ವಿದ್ಯಾರ್ಥಿಗಳಿಂದ ಗುರುವಂದನೆ ನಡೆಯಲಿದೆ. ಹಿರಿಯ ವಿದ್ಯಾರ್ಥಿನಿಯರಾದ ಸಿಂಧುಶ್ರೀ ಅಡಿಗ, ಕಾಮಾಕ್ಷಿ ಆರ್.ಪ್ರಭು, ಡಿ.ಎ.ಸೇಜಲ್, ಎ.ಸಿ.ಶರಣ್ಯ, ಆರ್.ರಕ್ಷಿತಾ ಅವರು ಏಕಕಾಲಕ್ಕೆ ರಂಗಪ್ರವೇಶ ಮಾಡುವವರಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮೈಸೂರಿನ ಹಿರಿಯ ನೃತ್ಯ ವಿದ್ವಾಂಸ ಡಾ.ತುಳಸಿ ರಾಮಚಂದ್ರ ಕಾರ್ಯಕ್ರಮ ಉದ್ಘಾಟಿಸುವರು. ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಎಂಎಲ್‌ಸಿ ಡಿ.ಎಸ್.ಅರುಣ್, ವಾಸವಿ ಪಬ್ಲಿಕ್ ಶಾಲೆ ಕಾರ್ಯದರ್ಶಿ ಎಸ್.ಕೆ.ಶೇಷಾಚಲ, ಜಿಪಂ ಮಾಜಿ ಸದಸ್ಯ ಕೆ.ಈ.ಕಾಂತೇಶ್ ಮುಖ್ಯ ಅತಿಥಿಯಾಗಿರುವರು. ನಾಟ್ಯಾಲಯದ ಅಧ್ಯಕ್ಷ ಎನ್.ಆರ್.ಪ್ರಕಾಶ್(ಆಚಿ) ಹಾಗೂ ನೃತ್ಯ ಗುರು ಸಹನಾ ಚೇತನ್ ಉಪಸ್ಥಿತರಿರುವರು ಎಂದರು.
ಭರತನಾಟ್ಯ ಕಲಿಕಾ ನಿರತ ವಿದ್ಯಾರ್ಥಿಗಳಿಗೆ ತಮ್ಮ ನೃತ್ಯ ಜೀವನದ ಅತ್ಯಂತ ಮಹತ್ವದ ಘಟ್ಟವೇ ಈ ರಂಗಪ್ರವೇಶವಾಗಿದ್ದು ಇದುವರೆಗೂ ಗುರುಗಳ ನೃತ್ಯ ಗರಡಿಯಲ್ಲಿ ಪಳಗಿ ನೃತ್ಯ ಶಾಸ್ತ್ರಗಳ ಅಧ್ಯಯನವನ್ನು ಶಿಸ್ತುಬದ್ಧವಾಗಿ ಕಲಿತು ಅವರ ಮಾರ್ಗದರ್ಶನದಲ್ಲಿ ಅನೇಕ ಕಾರ್ಯಕ್ರಮಗಳನ್ನು ನೀಡಿ ಮುಂದಿನ ಹಂತಕ್ಕೆ ತಯಾರಾಗುವ ಪ್ರಕ್ರಿಯೆ ಇದಾಗಿದೆ. ಸಕಲವೂ ಆರ್ಥಿಕತೆಯ ಭಾಗವಾಗಿ ಹೊರಹೊಮ್ಮುತ್ತಿರುವ ಇಂದಿನ ಕಾಲಘಟ್ಟದಲ್ಲಿ ನೃತ್ಯ ಕಲೆಯು ಸರ್ವರ ಸ್ವತ್ತಾಗಲಿ ಎಂಬ ಸದುದ್ದೇಶದಿಂದ ಹಮ್ಮಿಕೊಂಡಿರುವ ಒಂದು ವಿಭಿನ್ನ ಯೋಚನೆಯ ಮೂಲವೇ ಸಾಮೂಹಿಕ ಉಚಿತ ರಂಗಪ್ರವೇಶವಾಗಿದೆ ಎಂದು ಹೇಳಿದರು.
ನೃತ್ಯಗುರು ಸಹನಾ ಚೇತನ್ ಮಾತನಾಡಿ, ಹಾಡುಗಾರಿಕೆಗೆ ಮೈಸೂರು ಹಾಗೂ ಬೆಂಗಳೂರಿನ ಕಲಾ ವಿದ್ವಾಂಸರ ತಂಡ ಆಗಮಿಸುತ್ತಿದ್ದು ಹಾಡುಗಾರಿಕೆಯಲ್ಲಿ ವಿದ್ವಾನ್ ವಿನಯ್ ರಾಜಮಾನ್ಯ, ಮೃದಂಗವಾದನದಲ್ಲಿ ವಿದ್ವಾನ್ ಶಿವಶಂಕರಸ್ವಾಮಿ, ಕೊಳಲುವಾದನದಲ್ಲಿ ವಿದ್ವಾನ್ ಬಿ.ಭರತ್ ರಾಜ್, ರಿದಂ ಪ್ಯಾಡ್‌ನಲ್ಲಿ ವಿದ್ವಾನ್ ರಾಘವೇಂದ್ರ ರಂಗಧೋಳ್, ಬೆಳಕಿನ ಸಹಕಾರದಲ್ಲಿ ತೀರ್ಥಹಳ್ಳಿಯ ಶಿವಕುಮಾರ್ ಸಹಕಾರ ನೀಡಲಿದ್ದಾರೆ ಎಂದರು.
ಇದೊಂದು ವಿಶ್ವ ವಿನೂತನ ವಿಶ್ವಮಾನ್ಯ ಕಾರ್ಯಕ್ರಮ. ಅವರವರ ಶಕ್ತಿಗನುಸಾರವಾಗಿ ರಂಗಪ್ರವೇಶ ಮಾಡುವುದು ಸಾಮಾನ್ಯ. ಆದರೆ ಸಾಮೂಹಿಕವಾಗಿ ರಂಗಪ್ರವೇಶ ಆಗುವುದು ಅತಿ ವಿರಳ. ಅದರಲ್ಲೂ ಉಚಿತವಾಗಿ ರಂಗಪ್ರವೇಶ ಆಗುತ್ತಿರುವುದು ಇಡೀ ದೇಶದಲ್ಲೇ ಇದೇ ಮೊದಲು ಎಂದರು.
ಎಂಎಲ್‌ಸಿ ಡಿ.ಎಸ್.ಅರುಣ್, ಆನಂದ್ ರಾಮ್, ಹರೀಶ್ ಕಾರ್ಣಿಕ್, ಜಾಧವ್, ಮಾಲತೇಶ್, ಕೌಶಿಕ್ ಪಂಡಿತ್, ರೇಣುಕಯ್ಯ, ಪ್ರಜ್ವಲ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ನೃತ್ಯವೆಂದರೆ ಅದೊಂದು ಆತ್ಮಾನುಭಾವದ ಅಭಿವ್ಯಕ್ತಿ. ಆನಂದದ ಪರಾಕಾಷ್ಠೆಯ ಅನುಭೂತಿ. ರಂಗಪ್ರವೇಶ ಒಂದು ಸಂಸ್ಕಾರಯುತ ಶಿಕ್ಷಣ. ಕಲೆ ಸರ್ವರ ಸ್ವತ್ತಾಗುವುದರ ಜತೆಗೆ ಮುಂದಿನ ಪೀಳಿಗೆಗೂ ಅದು ಅತ್ಯಂತ ಪರಿಶುದ್ಧವಾಗಿ ತಲುಪಬೇಕಾಗಿರುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.ಎಸ್.ಎನ್.ಚನ್ನಬಸಪ್ಪಸಹಚೇತನ ನಾಟ್ಯಾಲಯ ಗೌರವಾಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net