ಕರೊನಾ ತಡೆಗೆ ಉಚಿತ ಮಾಸ್ಕ್, ಲೀಲಾವತಿ ಸೇವೆಗೆ ಹಲವರ ಸಾಥ್, 6 ಸಾವಿರ ಮಾಸ್ಕ್ ಹಂಚಿಕೆ

10-vij-2-mask tayarike seva karya
Published on

ವಿಜಯಪುರ: ಲಾಕ್‌ಡೌನ್ ಆರಂಭದಿಂದ ನಿರಂತರವಾಗಿ ಮಾಸ್ಕ್‌ಗಳನ್ನು ತಯಾರಿಸಿ ಸಮಾನ ಮನಸ್ಕರ ನೆರವಿನಿಂದ ಉಚಿತವಾಗಿ ವಿತರಿಸುತ್ತಿರುವ ವಿಜಯಪುರದ ಲೀಲಾವತಿ ಅವರು ಇದನ್ನು ಸಮಾಜಸೇವೆಯ ಮಹತ್ವದ ಕಾಯಕವೆಂದೇ ಪರಿಗಣಿಸಿದ್ದಾರೆ.

ಪಟ್ಟಣದ ಮ್ಯಾಚಿಂಗ್ ಸೆಂಟರ್ ಮತ್ತು ಟೈಲರಿಂಗ್ ಅಂಗಡಿಯೊಂದರ ಮಾಲೀಕರಾಗಿರುವ ಲೀಲಾವತಿ ಕರೊನಾ ಮುಂಜಾಗ್ರತೆಯಾಗಿ ಜನರಿಗೆ ಉಚಿತ ಮಾಸ್ಕ್ ವಿತರಿಸುವ ಮೂಲಕ ಮಾದರಿಯಾಗಿದ್ದಾರೆ.

ಲೀಲಾ ಅವರು 15 ವರ್ಷದಿಂದ ಹಿರಿಯ ಗಾಂಧಿವಾದಿ ಡಾ.ಎಸ್.ಎನ್.ಸುಬ್ಬರಾವ್ ಅನುಯಾಯಿಯಾಗಿ ದೇಶ ವಿದೇಶಗಳಲ್ಲಿ ನಡೆದ ಭಾವೈಕ್ಯತಾ ಯುವಶಾಂತಿ ಶಿಬಿರಗಳಲ್ಲಿ ರಾಜ್ಯ ಪ್ರತಿನಿಧಿಸಿದ್ದಾರೆ. ರಾಜ್ಯದಲ್ಲಿ ಕರೊನಾ ಹೆಚ್ಚಾದಂತೆ ಸಮುದಾಯದ ಆರೋಗ್ಯ ರಕ್ಷಣಾ ಕಾರ್ಯಕ್ಕೆ ಮಾಸ್ಕ್ ತಯಾರಿಕೆಯಲ್ಲಿ ತೊಡಗಿಸಿಕೊಂಡು ಇಲ್ಲಿನವರೆಗೆ 6 ಸಾವಿರಕ್ಕೂ ಹೆಚ್ಚು ಮಾಸ್ಕ್ ತಯಾರಿಸಿ ಹಂಚಿದ್ದಾರೆ.

ಸ್ವಯಂ ಸೇವಕರ ಸಾಥ್: ಬೆಂಗಳೂರಿನ ಗಾಂಧಿಭವನದ ಕರ್ನಾಟಕ ಗಾಂಧಿಸ್ಮಾರಕ ನಿಧಿಯ ಕಾರ್ಯದರ್ಶಿ ಇಂದಿರಾಕೃಷ್ಣಪ್ಪ ಮಾರ್ಗದರ್ಶನದಲ್ಲಿ ಮರುಬಳಕೆ ಮಾಡಬಹುದಾದ ಮಾಸ್ಕ್‌ಗಳನ್ನು ತಯಾರಿಸುತ್ತಿದ್ದಾರೆ. ಈ ಕಾಯಕದಲ್ಲಿ ರಾಷ್ಟ್ರೀಯ ಸೇವಾಯೋಜನೆ, ರಾಷ್ಟ್ರೀಯ ಯುವಯೋಜನೆ ಸ್ವಯಂಸೇವಕರು ಕೈಜೋಡಿಸಿದ್ದಾರೆ.

ಚಿಕ್ಕಮಕ್ಕಳ ಅಳತೆಗೆ ಪ್ರತ್ಯೇಕ ಮಾಸ್ಕ್‌ಗಳು, ಗಾಂಧಿವಾದಿಗಳಿಗೆ ಖಾದಿಬಟ್ಟೆ ಮಾಸ್ಕ್, ಸರ್ಕಾರಿ ನೌಕರರು, ಪೌರಕಾರ್ಮಿಕರಿಗೆ ಹಸಿರು ಬಟ್ಟೆ, ನಾಗರಿಕರಿಗೆ ಪ್ರತ್ಯೇಕ ಬಣ್ಣದ ಬಟ್ಟೆಯಲ್ಲಿ ಮಾಸ್ಕ್‌ಗಳನ್ನು ತಯಾರಿಸಿ ವಿತರಿಸುತ್ತಿರುವುದು ವಿಶೇಷ.

ಸ್ವಾಮೀಜಿಗಳ ನೆರವು: ಪಟ್ಟಣದ ಬಸವಕಲ್ಯಾಣದ ಮಠಾಧ್ಯಕ್ಷ ಶ್ರೀ ಮಹದೇವ ಸ್ವಾಮೀಜಿ ಮಾಸ್ಕ್ ತಯಾರಿಕೆಗೆ ಬೇಕಾದ ಬಟ್ಟೆಯನ್ನು ಉಚಿತವಾಗಿ ಒದಗಿಸುತ್ತಿದ್ದಾರೆ. ಪ್ರಗತಿ ಪ್ರಥಮದರ್ಜೆ ಕಾಲೇಜಿನ ಎನ್‌ಎಸ್‌ಎಸ್ ಸ್ವಯಂಸೇವಕ ಜಿತೇಂದ್ರಗುಜರ್ ಮಾಸ್ಕ್ ತಯಾರಿಕೆಗೆ ಬಟ್ಟೆ ಅಳತೆ ಮಾಡಿ ಕತ್ತರಿಸಿಕೊಡುವಲ್ಲಿ ಸಹಕರಿಸುತ್ತಿದ್ದಾರೆ. ಮಾಸ್ಕ್ ತಯಾರಿಕೆ ಮೇಲ್ವಿಚಾರಣೆಯನ್ನು ರಾಷ್ಟ್ರೀಯ ಯುವಯೋಜನೆ ರಾಜ್ಯಸಂಯೋಜಕ ವಿ.ಪ್ರಶಾಂತ್ ವಹಿಸಿಕೊಂಡಿದ್ದು, ತಯಾರಿಸಿದ ಮಾಸ್ಕ್‌ಗಳ ಗುಣಮಟ್ಟವನ್ನು ಶಿಕ್ಷಕ ಎಚ್.ಎಸ್.ರುದ್ರೇಶಮೂರ್ತಿ ಪರಿಶೀಲಿಸುತ್ತಿದ್ದು, ಜಿಲ್ಲಾ ನೆಹರು ಯುವಕೇಂದ್ರದ ರಾಷ್ಟ್ರೀಯ ಸೇವಾಕರ್ತ ಎಚ್.ಸಿ.ಶ್ರೀಧರ್ ಮಾಸ್ಕ್‌ಗಳ ವಿತರಣಾ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ.

ಪ್ರಗತಿ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎಸ್.ಎಸ್.ಪ್ರದಿಪ್ ಹಾಗೂ ಯುವ ಯೋಜನೆಯ ಸ್ವಯಂಸೇವಕ ತಂಡ ಮಾಸ್ಕ್‌ಗಳನ್ನು ವಿತರಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net