23ರಂದು ಕೃತಕ ಕೈಕಾಲು ಜೋಡಣೆ ಶಿಬಿರ

IMG_20230720_111329_471-1.jpg
Published on

ಹುಬ್ಬಳ್ಳಿ: ಇಲ್ಲಿಯ ಮಜೇಥಿಯಾ ಫೌಂಡೇಷನ್ ಆಶ್ರಯದಲ್ಲಿ ಕೃತಕ ಕೈ&ಕಾಲು ಜೋಡಣೆ ಉಚಿತ ಶಿಬಿರವನ್ನು ಜು. 23ರಂದು ಬೆಳಗ್ಗೆ 10ಕ್ಕೆ ನಗರದ ಮೂರುಸಾವಿರ ಮಠದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಶಿಬಿರದ ಮುಖ್ಯ ಸಂಚಾಲಕ ಮಂಜುನಾಥ ಭಟ್ಟ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೈದರಾಬಾದನ ಭಾರತ ವಿಕಾಸ ಪರಿಷತ್ ಚಾರಿಟಬಲ್ ಟ್ರಸ್ಟ್‌ನ ನುರಿತ ವೈದ್ಯರು ಶಿಬಿರ ನಡೆಸಿಕೊಡುವರು. ರಾಜ್ಯದ ವಿವಿಧ ಕಡೆಗಳಿಂದ ಈಗಾಗಲೇ 280ಕ್ಕೂ ಹೆಚ್ಚು ಜನರು ಹೆಸರು ನೋಂದಣಿ ಮಾಡಿದ್ದಾರೆ.

ಸಾವಿರಾರು ಜನರು ಕರೆ ಮಾಡಿ ವಿಚಾರಣೆ ಮಾಡಿದ್ದಾರೆ. ಈ ಶಿಬಿರದ ನಂತರ ಆಗಸ್ಟ್ 20ರಂದು ಮತ್ತೊಂದು ಶಿಬಿರ ಆಯೋಜನೆ ಮಾಡಿ ಅಗತ್ಯ ಇರುವ ಎಲ್ಲರಿಗೂ ನೆರವು ನೀಡುವ ಉದ್ದೇಶ ಹೊಂದಲಾಗಿದೆ ಎಂದರು.

ಮಜೇಥಿಯಾ ಸಂಸ್ಥೆಯಿಂದ ಈ ಹಿಂದೆ ಕೃತಕ ಕಾಲು ಹಾಕಿಸಿಕೊಂಡವರು ತಮ್ಮ ವೃತ್ತಿಗೆ ಮರಳಿದ್ದಾರೆ. ಸಹಜ ಜೀವನ ನಡೆಸುತ್ತಿದ್ದಾರೆ. ಕೆಲವು ವಿದ್ಯಾಥಿರ್ಗಳು ಸ್ಪರ್ಧಾತ್ಮಕ ಪರೀಕ್ಷೆ ಬರೆದು ಜೀವನ ರೂಪಿಸಿಕೊಂಡಿದ್ದಾರೆ ಎಂದರು.

ಅಪಘಾತ ಮತ್ತು ಇತರ ಕಾರಣಗಳಿಂದಾಗಿ ಕೈ ಕಾಲು ಕಳೆದುಕೊಳ್ಳುವ ಸಂದರ್ಭಗಳು ಇರುತ್ತವೆ. ಹೀಗೆ ಕಳೆದುಕೊಂಡವರಿಗೆ ಶಸ್ತ್ರಚಿಕಿತ್ಸೆ ಆಗಿರುವ ಜಾಗದಲ್ಲಿ ಗಾಯಗಳಿರಬಾರದು, ಗಾಯವಾದ ಜಾಗದಲ್ಲಿ ನೀರು ತುಂಬಿಕೊಳ್ಳುತ್ತದೆ. ಹಾಗಾಗಿ ಒಂದು ವರ್ಷ ಕಳೆದ ನಂತರ ಕೈ ಕಾಲು ಹಾಕಿಸಬಹುದು. ಅಂಥವರಿಗೆ ಪರಿಶೀಲಿಸಿ ಚಿಕಿತ್ಸೆ ನೀಡಲಾಗುತ್ತದೆ ಎಂದು ಡಾ. ವಿ.ಟಿ. ನಿಟಾಲಿ ತಿಳಿಸಿದರು.

ಮೂರು ತಿಂಗಳಿಗೊಮ್ಮೆ ಇಂತಹ ಶಿಬಿರ ನಡೆಸಲಾಗುವುದು. ಅಕ್ಟೋಬರ್ನಲ್ಲಿ ಶಿಬಿರ ಆಯೋಜಿಸಲು ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net