

ಬೈಂದೂರು: ಕಠಿಣ ಪ್ರಯತ್ನ ಮತ್ತು ನಿರ್ದಿಷ್ಟ ಗುರಿ ಇದ್ದಾಗ ಯಶಸ್ಸು ಪಡೆಯಲು ಸಾಧ್ಯವಾಗುತ್ತದೆ. ಅತಿ ಹೆಚ್ಚು ಪೈಪೋಟಿಯಿರುವ ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಾಮಾಣಿಕ ಪ್ರಯತ್ನ ಇದ್ದಾಗ ಮಾತ್ರ ಯಶಸ್ವಿಯಾಗಬಹುದು ಎಂದು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಹೇಳಿದರು.
ಕಾಲೇಜು ಶಿಕ್ಷಣ ಇಲಾಖೆ ಹಾಗೂ ಸರ್ಕಾರಿ ಪ್ರಥಮದರ್ಜೆ ಕಾಲೇಜು ಬೈಂದೂರು ವತಿಯಿಂದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಎಲ್ಲ ವಿಭಾಗದ ಪ್ರಥಮ ವರ್ಷದ 148 ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್ ವಿತರಿಸಿ ಮಾತನಾಡಿದರು. ಕಾಲೇಜುಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಬೇಕಾದ ಜವಾಬ್ದಾರಿ ಪ್ರಾಧ್ಯಾಪಕರದ್ದು. ಸರ್ಕಾರ ಕೂಡ ಸರ್ಕಾರಿ ಶಿಕ್ಷಣ ಸಂಸ್ಥೆಗಳಿಗೆ ಉತ್ತಮ ಸಹಕಾರ ನೀಡುತ್ತಿದೆ. ಬೈಂದೂರು ಪ್ರಥಮದರ್ಜೆ ಕಾಲೇಜಿನಲ್ಲಿ 1.5 ಕೋಟಿ ರೂ. ಅನುದಾನದ ಕಟ್ಟಡ ಕಾಮಗಾರಿ ನಡೆಯುತ್ತಿದೆ ಎಂದು ಹೇಳಿದರು.
ಪ್ರಾಂಶುಪಾಲ ಡಾ.ರಘು ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ನೆಲ್ಯಾಡಿ ದೀಪಕ್ ಕುಮಾರ್ ಶೆಟ್ಟಿ, ಹಳೇ ವಿದ್ಯಾರ್ಥಿ ಸಂಘ ಉಪಾಧ್ಯಕ್ಷ ಮುತ್ತಯ್ಯ ಪೂಜಾರಿ, ನಿವೃತ್ತ ಉಪನ್ಯಾಸಕ ಎಸ್.ಜನಾರ್ದನ ಮರವಂತೆ, ಸದಸ್ಯರಾದ ಜೈಸನ್ ಎಂ.ಡಿ, ಎಂ.ಎನ್.ಶೇರುಗಾರ್, ಚಂದ್ರ ಹಳಗೇರಿ, ಸಂಚಾಲಕ ನಾಗರಾಜ ಶೆಟ್ಟಿ ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕ ನವೀನ್ ಸ್ವಾಗತಿಸಿದರು. ಉಪನ್ಯಾಸಕಿ ಮೀನಾಕ್ಷಿ ಕಾರ್ಯಕ್ರಮ ನಿರ್ವಹಿಸಿದರು. ಶಿವಕುಮಾರ್ ಪಿ.ವಿ. ವಂದಿಸಿದರು. ಆರಂಭದಲ್ಲಿ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ, ಕಾಲೇಜಿನ ವಾರ್ಷಿಕ ಕ್ರೀಡಾಕೂಟದ ಕ್ರೀಡಾಜ್ಯೋತಿ ಬೆಳಗಿ ಧ್ವಜಾರೋಹಣಗೈದರು.
ವಿದ್ಯಾರ್ಥಿಗಳು ಕೇವಲ ಸವಲತ್ತು ಪಡೆದರೆ ಸಾಲದು, ಸಾಧನೆ ಮಾಡಿ ತೋರಿಸಬೇಕು. ಇಂದಿನ ಕಾಲದಲ್ಲಿ ಪ್ರಕೃತಿಯ ಮಕ್ಕಳಾಗದೆ ಫೇಸ್‌ಬುಕ್, ವಾಟ್ಸಾಪ್‌ಗಳಂಥ ಮಾಧ್ಯಮದ ಮಕ್ಕಳಾಗಿ ಬೆಳೆಯುತ್ತಿರುವುದು ದುರಂತ. ಮಕ್ಕಳ ಭವಿಷ್ಯ ಹಾಳು ಮಾಡುವ, ಭಾವನೆಗಳಿಗೆ ಚೂರಿ ಹಾಕುವ ಇಂಥ ಮಾಧ್ಯಮಗಳಿಂದ ಒಳಿತು ಕಾಣಲು ಸಾಧ್ಯವಿಲ್ಲ. ಈ ನೆಲೆಯಲ್ಲಿ ಶಿಕ್ಷಕರು ಹಾಗೂ ಪಾಲಕರು ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಿ ಉತ್ತಮ ಮಾರ್ಗದರ್ಶನ ನೀಡುವ ಮೂಲಕ ಒಳಿತು, ಕೆಡುಕುಗಳ ಬಗ್ಗೆ ಮನವರಿಕೆ ಮಾಡಿಕೊಡಬೇಕು.
-ಬಿ.ಎಂ ಸುಕುಮಾರ ಶೆಟ್ಟಿ, ಬೈಂದೂರು ಶಾಸಕ