ನವ ಅಯೋಧ್ಯಾ ನಗರದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ

Health Camp New
Published on

ಹುಬ್ಬಳ್ಳಿ : ಹುಬ್ಬಳ್ಳಿ-ಧಾರವಾಡ ಅವಳಿ ನಗರದ ತಜ್ಞ ವೈದ್ಯರುಗಳಿಂದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಜು. 23ರಂದು ಬೆಳಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಹಳೇ ಹುಬ್ಬಳ್ಳಿಯ ನವ ಅಯೋಧ್ಯ ನಗರದಲ್ಲಿನ ಸರ್ಕಾರಿ ಕನ್ನಡ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಆಯೋಜಿಸಲಾಗಿದೆ.

ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರೇರಿತ ಕ್ಷಮತಾ ಸೇವಾ ಸಂಸ್ಥೆ ಹಾಗೂ ಐಎಂಎ ಹುಬ್ಬಳ್ಳಿ, ಶ್ರೀ ಬಾಲಾಜಿ ನರರೋಗ ಅಸ್ಪತ್ರೆ ಮತ್ತು ತುರ್ತು ಚಿಕಿತ್ಸಾ ಕೇಂದ್ರ, ಡಾ. ನಾಲ್ವಾಡ ಆಸ್ಪತ್ರೆ, ಡಾ. ಸತ್ತೂರು ಅವರ ಆಶಾ ಹಾರ್ಟ್ ಫೌಂಡೇಷನ್ ಸಂಯುಕ್ತ ಆಶ್ರಯದಲ್ಲಿ ಈ ಶಿಬಿರ ಹಮ್ಮಿಕೊಳ್ಳಲಾಗಿದೆ.

ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ. ಸುಭಾಶ ಬಬ್ರುವಾಡ ಉದ್ಘಾಟಿಸುವರು. ಕ್ಷಮತಾ ಸಂಚಾಲಕ ಗೋವಿಂದ ಜೋಶಿ, ಡಾ. ಕ್ರಾಂತಿಕಿರಣ, ಡಾ. ಮಹೇಶ ನಾಲವಾಡ, ಡಾ. ಶಶಿಕಲಾ ಹೊಸಮನಿ, ಪಾಲಿಕೆ ಸದಸ್ಯೆ ಶೀಲಾ ಕಾಟಕರ, ಪ್ರಭು ನವಲಗುಂದಮಠ, ಪಾಲಿಕೆ ಮಾಜಿ ಸದಸ್ಯೆ ಹೊನ್ನವ್ವ ಅರಕೇರಿ ಉಪಸ್ಥಿತರಿರುವರು.

ಫಿಜಿಶಿಯನ್​ರು, ಹೃದಯ ರೋಗ ತಜ್ಞರು, ನರರೋಗ ತಜ್ಞರು, ಎಲುಬು -ಕೀಲು ತಜ್ಞರು, ಶಸ್ತ್ರ ಚಿಕಿತ್ಸಕರು, ನೇತ್ರ ಚಿಕಿತ್ಸಕರು, ಚರ್ಮರೋಗ ತಜ್ಞರು, ಕಿವಿ-ಮೂಗು- ಗಂಟಲು, ದಂತ ತಜ್ಞರು ಭಾಗವಹಿಸಿ, ರೋಗಿಗಳನ್ನು ತಪಾಸಣೆ ಮಾಡುವರು.

ಮೂತ್ರಪಿಂಡ ಮತ್ತು ಮೂತ್ರಾಂಗಗಳಲ್ಲಿ ಕಲ್ಲು, ಮಧುಮೇಹ ತಜ್ಞರು, ಶಸ್ತ್ರಕಿತ್ಸಾ ತಜ್ಞರು, ಗರ್ಭಿಣಿ ಮತ್ತು ಸ್ತಿ್ರರೋಗ, ಕೀಲು ಮತ್ತು ಮೂಳೆ ಗಂಟಲು, ಮಕ್ಕಳ ತಜ್ಞರು ಅತ್ಯಾಧುನಿಕ ಉಪಕರಣಗಳಿಂದ ರಕ್ತ, ಮೂತ್ರ ಪರೀಕ್ಷೆಗಳನ್ನು ಮಾಡುವ ಸುಮಾರು 30 ವೈದ್ಯರು ಮತ್ತು ಸಿಬ್ಬಂದಿ ತಂಡ ಭಾಗವಹಿಸುವರು.

ಆಯುಷ್ಮಾನ್ ಭಾರತ್ ಕಾರ್ಡ್ ನೋಂದಣಿ :

ವಿಶೇಷವಾಗಿ ಈ ಶಿಬಿರದಲ್ಲಿ ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಅರೋಗ್ಯ ಕರ್ನಾಟಕ ಕಾರ್ಡಿನ ಬಗ್ಗೆ ಮಾಹಿತಿ ನೀಡಿ, ನೋಂದಣಿ ಮಾಡಿಕೊಳ್ಳಲಾಗುವುದು. ಕಾರ್ಡ್ ಮಾಡಿಸಿಕೊಳ್ಳಲು ಆಸಕ್ತರು ತಮ್ಮ ರೇಷನ್ ಕಾರ್ಡ್ ಹಾಗೂ ಕುಟುಂಬ ಸದಸ್ಯರ ಆಧಾರ್ ಕಾರ್ಡ್ ತೆಗೆದುಕೊಂಡು ಬರಬೇಕೆಂದು ಗೋವಿಂದ ಜೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net