

ಔರಾದ್: ಇಂದಿನ ಆಧುನಿಕ ಜೀವನ ಶೈಲಿಯಿಂದ ಮನುಷ್ಯನಿಗೆ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಹೆಚ್ಚಾಗುತ್ತಿದ್ದು, ಆರೋಗ್ಯದಲ್ಲಿ ಏರುಪೇರು ಕಂಡು ಬಂದರೇ ತಕ್ಷಣವೇ ವೈದ್ಯರನ್ನು ಸಂಪರ್ಕಿಸಬೇಕು ಎಂದು ಬ್ರಿಮ್ಸ್ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಮಹೇಶ ಬಿರಾದಾರ್ ಹೇಳಿದರು.
ಭಾಲ್ಕಿ ಹಿರೇಮಠ ಸಂಸ್ಥಾನದ ಪೂಜ್ಯ ಡಾ.ಬಸವಲಿಂಗ ಪಟ್ಟದ್ದೇವರ ೭೪ನೇ ಜನ್ಮದಿನ ಪ್ರಯುಕ್ತ ಸಂತಪುರದ ಅನುಭವ ಮಂಟಪದಲ್ಲಿ ಸಿದ್ದರಾಮೇಶ್ವರ ಪದವಿಪೂರ್ವ ಕಾಲೇಜು ಹಾಗೂ ಪ್ರಸನ್ನ ಕಲೆ, ಸಾಂಸ್ಕೃತಿಕ ಟ್ರಸ್ಟ್ನಿಂದ ಆಯೋಜಿಸಿದ್ದ ಉಚಿತ ಹೃದಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ತಂಬಾಕು ಪದಾರ್ಥ ಮತ್ತು ಮದ್ಯ ಸೇವನೆಯಿಂದ ಹೃದಯ ಸಂಬಂಧಿ ಕಾಯಿಲೆಗಳು ಬರುವುದು ಸಹಜವಾಗಿದೆ. ಎದೆ ಉರಿತವಾದಾಗ ಎಸಿಡಿಟಿ ಎಂದು ತೋರಿಸದೇ ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ. ಪ್ರತಿದಿನ ಒಂದು ಗಂಟೆ ವ್ಯಾಯಾಮದ ಜತೆಗೆ ಆಹಾರದಲ್ಲಿ ಉಪ್ಪು ಕಡಿಮೆಗೊಳಿಸಿ, ತರಕಾರಿ, ಹಣ್ಣು ಹೆಚ್ಚು ಉಪಯೋಗಿಸಬೇಕು ಎಂದು ತಿಳಿಸಿದರು.
ಹೃದಯರೋಗ ತಜ್ಞ ಡಾ.ನಿತಿನ್ ಗುದಗೆ ಮಾತನಾಡಿ, ಫಾಸ್ಟ್ ಫುಡ್ ಸೇವನೆ ಮಾಡುವುದು ಹೃದಯ ಸಂಬಂಧಿ ರೋಗಗಳಿಗೆ ಆಹ್ವಾನ ನೀಡಿದಂತೆ. ಎಲ್ಲರೂ ದೇಶಿ ಊಟ ಬಳಸುವುದು ರೂಢಿ ಮಾಡಿಕೊಳ್ಳಬೇಕು. ಎದೆ ನೋವು, ಉಸಿರಾಟ ತೊಂದರೆ, ಆಯಾಸ, ಕುತ್ತಿಗೆ, ದವಡೆ, ಹೊಟ್ಟೆಯ ಮೇಲ್ಭಾಗ ಮತ್ತು ಬೆನ್ನಿನಲ್ಲಿ ನೋವು, ತಲೆ ತಿರುಗುವಿಕೆ, ಅನಿಯಮಿತ ಹೃದಯ ಬಡಿತ , ಕಾಲುಗಳಲ್ಲಿ ಊತ, ಆತಂಕ ಸೇರಿ ಇನ್ನಿತರ ಸಮಸ್ಯೆ ಇರುವವರು ಕೂಡಲೇ ವೈದ್ಯರನ್ನು ಭೇಟಿ ಆಗಿ ಸಮಸ್ಯೆ ಪರಿಹಾರ ಕಂಡುಕೊಳ್ಳಬೇಕು ಎಂದರು.
ಜಿಲ್ಲಾ ಭಾರತಿ ಬಸವ ಬಳಗ ಅಧ್ಯಕ್ಷ ಸಂಜುಕುಮಾರ ಜುಮ್ಮಾ , ಪ್ರಾಂಶುಪಾಲ ನವೀಲಕುಮಾರ ಉತ್ಕಾರ್, ಬಸವರಾಜ ಬಿರಾದಾರ್, ಪೊಲೀಸ್ ಪೇದೆ ಮೀನಾಕ್ಷಿ, ಶಿವಪುತ್ರ ಧರಣಿ, ಅಶ್ವಿನಿ, ವನದೇವಿ, ಕಿರಣ ಬಿರಾದಾರ್, ಸಂತೋಷ ಮೇತ್ರೆ, ಜಾನ್ಸನ್,ಪ್ರಶಾಂತ, ದ್ಯಾನೇಶ್ವರ, ಆಶಾ, ಶೀತಲ್, ರಾಜೇಶ್ವರಿ, ವೀರೇಶ ಹಾಲಹಳ್ಳಿ, ವಿಜಯಕುಮಾರ ಗುರು ಅಂಕಲಗಿ, ವೈಜಿನಾಥ್ ಚನ್ನಶೆಟ್ಟಿ ಇತರರಿದ್ದರು. ಶಿಬಿರದಲ್ಲಿ ೫೫ ಜನರು ತಪಾಸಣೆ ಮಾಡಿಸಿಕೊಂಡರು.