

ವಿಜಯವಾಣಿ ಸುದ್ದಿಜಾಲ ಹೊಸಕೋಟೆ
ನಗರದ ಶ್ರೀನಿವಾಸ ಸರ್ಸಿಂಗ್ ಹೋಂ ಹಾಗೂ ವಿಜಯವಾಣಿ ಸಹಯೋಗದಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಮಕ್ಕಳ ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿಯಾಯಿತು. ಆಸ್ಪತ್ರೆಯ ಮುಖ್ಯ ವೈದ್ಯ ಡಾ.ನಾಗರಾಜ್ ಹಾಗೂ ಮಕ್ಕಳ ತಜ್ಞ ಡಾ.ರಾಜಶೇಖರರೆಡ್ಡಿ ನೇತೃತ್ವದಲ್ಲಿ ಶಿಬಿರ ನಡೆಯಿತು. ಮಕ್ಕಳ ತಜ್ಞರು ಮಕ್ಕಳ ಆರೋಗ್ಯ ತಪಾಸಣೆ ನಡೆಸಿ ಪಾಲಕರಿಗೆ ಸಲಹೆ ಸೂಚನೆಗಳನ್ನು ನೀಡಿದರು. ನೂರಾರು ಮಕ್ಕಳು ಶಿಬಿರದಲ್ಲಿ ಪಾಲ್ಗೊಂಡಿದ್ದರು.
ಉತ್ತಮ ಆಹಾರ ಶೈಲಿ ಹಾಗೂ ಸ್ವಚ್ಛತೆ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಿದೆ ಎಂದು ಮಕ್ಕಳ ತಜ್ಞ ಡಾ.ರಾಜಶೇಖರ್ ರೆಡ್ಡಿ ಪಾಲಕರಿಗೆ ಸಲಹೆ ನೀಡಿದರು.
ಸಣ್ಣ ಮಕ್ಕಳಿಗೆ ಊಟ ಮಾಡಿಸುವಾಗ ಪಾಲಕರು ಸ್ವಚ್ಛವಾಗಿ ಕೈತೊಳೆಯುವುದನ್ನು ಮರೆಯಬಾರದು, ಮಕ್ಕಳೇ ಊಟ ಆಹಾರ ಸೇವನೆ ಮಾಡುವಂತಿದ್ದರೆ ಮೊದಲು ಕೈ ಹಾಗೂ ಕಾಲುಗಳನ್ನು ಸ್ವಚ್ಛವಾಗಿ ಸಾಬೂನಿನಿಂದ ತೊಳೆದುಕೊಳ್ಳುವಂತೆ ಮಕ್ಕಳಲ್ಲಿ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.
ತಜ್ಞರು ನೀಡಿದ ಟಿಪ್ಸ್: ಸಣ್ಣ ಮಕ್ಕಳು ಕೈಗೆ ಸಿಕ್ಕ ವಸ್ತುವನ್ನು ಬಾಯಿಗೆ ಇಟ್ಟುಕೊಳ್ಳುವ ಸ್ವಭಾವ ಹೊಂದಿರುತ್ತಾರೆ, ಹೀಗಾಗಿ ಪಾಲಕರು ಮಕ್ಕಳ ಕೈಗೆ ಕೊಡುವಂತಹ ಆಟಿಕೆಗಳನ್ನು ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು, ಸಣ್ಣ ಮಕ್ಕಳ ಕೈಗೆ ಬಿಸಿ ಹಾಗೂ ಕೆಮಿಕಲ್‌ಯುಕ್ತ ಪದಾರ್ಥಗಳು ಸಿಗದಂತೆ ದೂರ ಇಡಬೇಕು. ನಾಣ್ಯ, ನಟ್ಟು, ಬೋಲ್ಟ್, ಕತ್ತರಿ, ಚಾಕು, ಬ್ಲೇಡ್‌ಗಳನ್ನು ಕೈಗೆ ಸಿಗದಂತೆ ಎಚ್ಚರವಹಿಸಬೇಕು.
ಮಕ್ಕಳ ದಿನಚರಿ ಹೇಗಿರಬೇಕು: ಮಕ್ಕಳು ಮಾನಸಿಕವಾಗಿ ಹೆಚ್ಚು ಕಲಿಯುವ ಹಂತ ಆಗಿರುವುದರಿಂದ ಪ್ರತಿಯೊಂದು ವಿಷಯದಲ್ಲಿಯೂ ಹೆಚ್ಚು ಉತ್ಸುಕತೆ ಹೊಂದಿರುತ್ತಾರೆ, ಟಿವಿಯಲ್ಲಿ ಬರುವ ಕಾರ್ಟೂನ್‌ಗಳು, ಮೊಬೈಲ್‌ನಲ್ಲಿನ ಹಾಡು ವಿಡಿಯೋ ಗೇಮ್‌ಗಳು ಹೀಗೆ ಹಲವು ವಿಚಾರಕ್ಕೆ ಆಕರ್ಷಣೆಯಾಗುತ್ತಾರೆ, ಆದರೆ ಮಕ್ಕಳಿಗೆ ಮಾನಸಿಕ ವಿಕಸನದ ಜತೆಗೆ ದೈಹಿಕ ವಿಕಸನಕ್ಕೆ ಪಾಲಕರು ಪ್ರಾಮುಖ್ಯತೆ ನೀಡಬೇಕು. ಪುಸ್ತಕ ಓದಿಸುವುದು, ಪ್ರತಿ ದಿನ ಮುಂಜಾನೆ ಹಾಗೂ ಸಂಜೆ ಸಮಯದಲ್ಲಿ ಕನಿಷ್ಠ ಅರ್ಧಗಂಟೆ ವಾಯುವಿಹಾರ ಮಾಡಿಸುವುದು, ಆಟವಾಡುವಂತೆ ಪ್ರೇರೇಪಿಸುವುದು, ಇದರ ನಂತರ ಸ್ವಲ್ಪ ವ್ಯಾಯಾಮ ಮಾಡುವುದು, ದೇವರ ಪ್ರಾರ್ಥನೆ ಹೀಗೆ…ಮಕ್ಕಳು ಸದಾ ಲವಲವಿಕೆಯಿಂದ ಇರುವಂಥ ವಾತಾವರಣ ಸೃಷ್ಟಿ ಮಾಡಿಕೊಡಬೇಕು. ಅವರು ಮಾಡಿತ ತಪ್ಪುಗಳನ್ನು ಸರಳವಾಗಿ ತಿದ್ದಬೇಕು. ಮಕ್ಕಳ ಬುದ್ದಿಶಕ್ತಿಗೆ ಅನುಸಾರ ಅರ್ಥ ಮಾಡಿಸುವ ಪ್ರಯತ್ನ ಮಾಡಬೇಕು.
ತಕ್ಷಣ ವೈದ್ಯರನ್ನು ಭೇಟಿ ಮಾಡಿ: ಮಕ್ಕಳಲ್ಲಿ ಅತಿ ಬೇಗ ಶೀತ ನೆಗಡಿ ಹಾಗೂ ಜ್ವರದ ಸಮಸ್ಯೆ ಜತೆಗೆ ಚರ್ಮ ಸಂಬಂಧಿ ಸಮಸ್ಯೆಗಳು ಕಾಡುತ್ತದೆ, ಹವಾಮಾನ ವೈಪರೀತ್ಯದಿಂದ ಈ ಸಮಸ್ಯೆಗಳು ಬರಬಹುದಾಗಿದ್ದು ಇಂಥ ಸಂದರ್ಭದಲ್ಲಿ ಮನೆ ಮದ್ದಿಗೆ ಮೊರೆ ಹೋಗದೆ ವೈದ್ಯರನ್ನು ಸಂಪರ್ಕಿಸಬೇಕು. ಸಣ್ಣ ವೈರಾಣುವಿನಿಂದಲೂ ಮಕ್ಕಳಿಗೆ ಕಾಯಿಲೆ ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ಮನೆಯಲ್ಲಿ ಯಾರಿಗಾದರೂ ಜ್ವರ ಅಥವಾ ನೆಗಡಿಯಂತಹ ಸಮಸ್ಯೆ ಇದ್ದಲ್ಲಿ ಮನೆಯಲ್ಲಿ ಮಕ್ಕಳಿಂದ ಕೊಂಚ ಅಂತರ ಕಾಯ್ದುಕೊಳ್ಳಬೇಕು.