

ಮಾಂಜರಿ: ಗ್ರಾಮದ ಹಿರಿಯ ಸಹಕಾರಿ ಹಾಗೂ ಛತ್ರಪತಿ ಶಿವಾಜಿ ಕ್ರೆಡಿಟ್ ಸೌಹಾರ್ದ ಸಂಸ್ಥೆಯ ಸಂಸ್ಥಾಪಕ ದಿ.ಅಣ್ಣಾಸಾಹೇಬ್ ಯಶವಂತ ಯಾದವ ಪ್ರಥಮ ಪುಣ್ಯಸ್ಮರಣೆ ಅಂಗವಾಗಿ ಸೆ.3ರಂದು ಬೆಳಗ್ಗೆ 9 ರಿಂದ 2 ಗಂಟೆಯವರೆಗೆ ಬೆಳಗಾವಿಯ ಕೆಎಲ್ಇ ಸಂಸ್ಥೆಯ ಜವಾಹರಲಾಲ ನೆಹರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಡಾ.ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಘಟಕ ಮಹಾಂತೇಶ ಕವಟಗಿಮಠ ಸೋಷಿಯಲ್ ಫೌಂಡೇಷನ್ ಹಾಗೂ ಶಿವಾಜಿ ಕ್ರೆಡಿಟ್ ಸಂಸ್ಥೆ ಮತ್ತು ವಿವಿಧ ಉದ್ದೇಶ ಸಹಕಾರಿ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಮತ್ತು ರಕ್ತದಾನ ಶಿಬಿರ ಆಯೋಜಿಸಲಾಗಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಹೇಳಿದರು. ಗ್ರಾಮದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೆಎಲ್ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ತಜ್ಞ ವೈದ್ಯರಿಂದ ತಪಾಸಣೆ ಹಾಗೂ ಉಚಿತ ಔಷಧ ವಿತರಣೆ ಮಾಡಲಾಗುವುದು ಎಂದರು. ದತ್ತ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಗಣಪತರಾವ್ ಪಾಟೀಲ ಉದ್ಘಾಟಿಸಲಿದ್ದಾರೆ. ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅಧ್ಯಕ್ಷತೆ ವಹಿಸಲಿದ್ದಾರೆ. ಅತಿಥಿಯಾಗಿ ಮಹಾಂತೇಶ ಕವಟಗಿಮಠ, ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಿಕಾರ್ಜುನ ಕೋರೆ, ಮಾಜಿ ಶಾಸಕ ಕಲ್ಲಪ್ಪ ಮಗೆನ್ನವರ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. ಅಜಿತರಾಜ್ ದೇಸಾಯಿ, ಅಮರ ಯಾದವ, ವಿವಿಧ ಉದ್ದೇಶಗಳ ಸಹಕಾರಿ ಸಂಘದ ಅಧ್ಯಕ್ಷ ಮೋಹನ್ ಲೋಕರೆ ಇತರರಿದ್ದರು.