

ಮೈಸೂರು: ಅನಾರೋಗ್ಯಕ್ಕೆ ಈಡಾಗಿ ಆಸ್ಪತ್ರೆಗೆ ದಾಖಲಾಗುವ ಬದಲು ಜಾಗ್ರತೆ ವಹಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಬನ್ನೂರು ರಸ್ತೆಯ ನಾಗಲಕ್ಷ್ಮೀ ಫ್ಯೂಯಿಲ್ ಸ್ಟೇಷನ್ ಮಾಲೀಕ ಡಿ.ಎನ್.ತ್ಯಾಗರಾಜು ಹೇಳಿದರು.
ಬನ್ನೂರು ರಸ್ತೆಯ ನಾಗಲಕ್ಷ್ಮೀ ಫ್ಯೂಯಲ್ ಸ್ಟೇಷನ್ ವತಿಯಿಂದ ಶನಿವಾರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಬಿ ಬ್ಲಾಕ್ ವರ್ತಕರ ಸಂಘದಲ್ಲಿ ಆಯೋಜಿಸಿದ್ದ ‘ಉಚಿತ ಆರೋಗ್ಯ ತಪಾಸಣಾ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಚೈತನ್ಯ ಮತ್ತು ಮನಸ್ಸು ನಮ್ಮ ದೇಹದಲ್ಲಿ ಅಡಗಿವೆ. ದಿನನಿತ್ಯದ ಅವಸರದ ಕಾರ್ಯ ಚಟುವಟಿಕೆಯಿಂದಾಗಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರುವುದು ಮೇಲ್ನೊಟಕ್ಕೆ ಕಂಡುಬರುವುದಿಲ್ಲ. ಗುಪ್ತವಾಗಿ ರಕ್ತದೊತ್ತಡ (ಬಿಪಿ), ಸಕ್ಕರೆ ಕಾಯಿಲೆ ಅವಿತುಕೊಂಡಿರುತ್ತವೆ. ವೈದ್ಯರ ಬಳಿ ತಪಾಸಣೆ ಮಾಡಿದಾಗ ರೋಗಗಳು ಕಾಣಿಸುತ್ತವೆ ಎಂದರು.
ಆರೋಗ್ಯ ಚೆನ್ನಾಗಿದ್ದರೆ ನಮ್ಮ ಕಾರ್ಯಗಳು ಸರಿಯಾಗಿರುತ್ತವೆ. ಆದ್ದರಿಂದ ಆರೋಗ್ಯ ತಪಾಸಣೆಗಾಗಿ ಸಮಯ ನಿಗದಿಪಡಿಸಿ ಕಾರ್ಯ ಚಟುವಟಿಕೆ ಹಾಕಿಕೊಳ್ಳಬೇಕು. ಇಂತಹ ಉಚಿತ ಶಿಬಿರಗಳನ್ನು ನಮ್ಮ ಪೆಟ್ರೋಲ್‌ಬಂಕ್‌ನಲ್ಲಿ ಮುಂದೆಯೂ ಆಯೋಜಿಸುವ ಮೂಲಕ ಹಿರಿಯರು ಮತ್ತು ಸಾರ್ವಜನಿಕರ ಆರೋಗ್ಯದ ಬಗ್ಗೆ ಕಾಳಜಿ ವಹಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಬಿ ಬ್ಲಾಕ್ ವರ್ತಕರ ಸಂಘ ಅಧ್ಯಕ್ಷ ಕೆ.ಟಿ.ಶ್ಯಾಮ ಸುಂದರ್, ಕಾರ್ಯದರ್ಶಿ ಎ.ರಮೇಶ್, ಖಜಾಂಚಿ ಎ.ಎಸ್.ಗೋವಿಂದರಾಜು, ನಿರ್ದೇಶಕ ಬಾಲಚಂದ್ರ ಬಿಪಿಸಿಎಲ್ ಸೇಲ್ಸ್ ಮ್ಯಾನೇಜರ್ ಜಾನ್‌ಸನ್ ದಾಸ್ ಇತರರಿದ್ದರು.
ವೈದ್ಯರಾದ ಡಾ.ಪೃಥ್ವಿ, ಡಾ.ಕೆ.ಎಂ.ತೇಜಸ್ವಿನಿ ನೇತೃತ್ವದಲ್ಲಿ ಆರೋಗ್ಯ ತಪಾಸಣಾ ಶಿಬಿರ ನೆರವೇರಿತು. ಶಿಬಿರದಲ್ಲಿ ನೂರಕ್ಕೂ ಹೆಚ್ಚು ಸಾರ್ವಜನಿಕರು ಭಾಗವಹಿಸಿ ತಪಾಸಣೆಗೆ ಒಳಗಾದರು. ರಕ್ತ ಪರೀಕ್ಷೆ, ರಕ್ತದೊತ್ತಡ (ಬಿಪಿ) ತಪಾಸಣೆ, ಕಣ್ಣಿನ ಪರೀಕ್ಷೆ ಸೇರಿದಂತೆ ವಿವಿಧ ಆರೋಗ್ಯ ತಪಾಸಣೆ ನಡೆಯಿತು. ಜತೆಗೆ ತಜ್ಞರು ಆಹಾರ ಸೇವನೆ ಬಗ್ಗೆಯೂ ಅಗತ್ಯ ಸಲಹೆ ನೀಡಿದರು.