ಫೆ.೭ರಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ

arogya shibiira
Published on

ಮಡಿಕೇರಿ: ಸೇವಾ ಭಾರತಿ ಮತ್ತು ಸೇವಾಧಾಮ ಇವರ ವತಿಯಿಂದ ಫೆ.೭,೮,೯ ರಂದು ನಗರದ ಅಶ್ವಿನಿ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಮತ್ತು ಗಾಲಿಕುರ್ಚಿ ಜಾಥಾ ನಡೆಯಲಿದೆ ಎಂದು ಸೇವಾಧಾಮದ ಸಂಸ್ಥಾಪಕ ಕೆ.ವಿನಾಯಕ್ ರಾವ್ ತಿಳಿಸಿದರು.


ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಫೆ.೭ರಂದು ವಿಕಾಸ ಜನಸೇವಾ ಟ್ರಸ್ಟ್, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಶ್ರೀ ಕಾವೇರಿ ಕೃಪಾ ವಿಶ್ವ ಸೇವಾ ಸಮಿತಿ, ಅಶ್ವಿನಿ ಆಸ್ಪತ್ರೆಯ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದೆ. ಅಂದು ಬೆಳಗ್ಗೆ ೯ ಗಂಟೆಗೆ ಮಡಿಕೇರಿ ಶಾಸಕ ಮಂತರ್‌ಗೌಡರವರು ಶಿಬಿರವನ್ನು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ವಿಕಾಸ ಜನಸೇವಾ ಟ್ರಸ್ಟ್ ಗೌರವಾಧ್ಯಕ್ಷ ಡಾ.ರಾಣಿ ಮಾಚಯ್ಯ, ಡಾ.ವಿಶಾಲ್ ಕುಮಾರ್, ಡಾ.ನಂಜುಂಡಯ್ಯ, ಆರಕ್ಷಕ ಉಪ ನಿರೀಕ್ಷಕ ಲೋಕೇಶ್, ಅಂಗವಿಕಲರ ಕಲ್ಯಾಣಾಧಿಕಾರಿ ವಿಮಲ, ಪ್ರಮುಖರಾದ ಮೋಹನ್‌ದಾಸ್ ಇತರರು ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.


ಶಿಬಿರದಲ್ಲಿ ಫಲಾನುಭವಿಗಳಿಗೆ ಉಚಿತ ವೈದ್ಯಕೀಯ ತಪಾಸಣೆಯ ಸೌಲಭ್ಯ ನೀಡುವುದರ ಜತೆಗೆ, ಯೋಗ, ಪ್ರಾಣಯಾಮ, ಆಪ್ತ ಸಮಾಲೋಚನೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಅರ್ಹ ಫಲಾನುಭವಿಗಳಿಗೆ ೮ ಗಾಲಿಕುರ್ಚಿ, ೧೧ ಮೆಡಿಕಲ್ ಕಿಟ್, ೧೬ ನೀರಿನ ಹಾಸಿಗೆಗಳನ್ನು ಹಸ್ತಾಂತರಿಸಲಾಗುತ್ತದೆ. ಫೆ.೯ರಂದು ಗಾಲಿಕುರ್ಚಿ ಜಾಥಾ ನಡೆಸುವ ಮೂಲಕ ಬೆನ್ನುಹುರಿ ಅಪಘಾತಕ್ಕೆ ಒಳಗಾದ ದಿವ್ಯಾಂಗರನ್ನು ಮುಖ್ಯವಾಹಿನಿಗೆ ಕರೆತರುವ ಕೆಲಸ ಮಾಡಲಾಗುತ್ತದೆ. ಅಂದು ಬೆಳಗ್ಗೆ ೯ ಗಂಟೆಗೆ ಅಶ್ವಿನಿ ಆಸ್ಪತ್ರೆಯಿಂದ ಜಾಥಾ ಆರಂಭವಾಗಿ ಜನರಲ್ ತಿಮ್ಮಯ್ಯ ವೃತ್ತದಿಂದ ಮರಳಿ ಅಶ್ವಿನಿ ಆಸ್ಪತ್ರೆಯವರೆಗೆ ಜಾಥಾ ನಡೆಯಲಿದೆ ಎಂದು ವಿವರಿಸಿದರು.


ರಾಜ್ಯ, ಜಿಲ್ಲೆ ಸೇರಿದಂತೆ ಎಲ್ಲೆಡೆ ಬೆನ್ನುಹುರಿ ಅಪಘಾತಕ್ಕೆ ಒಳಗಾದವರು ಸಾಕಷ್ಟು ಜನರಿದ್ದಾರೆ. ಆದರೆ, ಇಲಾಖೆಗಳಲ್ಲಿ ಅವರ ಸಂಖ್ಯೆ ಸರಿಯಾಗಿ ಸಿಗುತ್ತಿಲ್ಲ. ಆದರೂ ಸೇವಾ ಭಾರತಿ ಮತ್ತು ಸೇವಾಧಾಮಕ್ಕೆ ಸಿಕ್ಕಿದ ಮಾಹಿತಿ ಆಧಾರಿಸಿ ಅವರಿಗೆ ಬದುಕು ಕಟ್ಟಿಕೊಡವ ಸಲುವಾಗಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದೇವೆ. ವ್ಯಕ್ತಿಯಿಂದ ಶಕ್ತಿಯಾಗುವ ಕೆಲಸಕ್ಕೆ ಸಂಸ್ಥೆ ಮುಂದಾಗಿದೆ ಎಂದು ಹೇಳಿದರು.


ಸುದ್ದಿಗೋಷ್ಠಿಯಲ್ಲಿ ಸೇವಾ ಭಾರತಿಯ ಹಿರಿಯ ಕ್ಷೇತ್ರ ಸಂಯೋಜಕ ಆರ್.ಮನು, ವಿಕಾಸ ಜನಸೇವಾ ಟ್ರಸ್ಟ್ ಗೌರವಾಧ್ಯಕ್ಷ ಡಾ.ರಾಣಿ ಮಾಚಯ್ಯ, ಅಧ್ಯಕ್ಷ ಮಂಜುನಾಥ್, ಖಜಾಂಚಿ ಬಿ.ಕೆ.ನವೀನ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net