

ಮೈಸೂರು : ಶೃಂಗೇರಿ ಮಠದ ಭಾರತಿ ತೀರ್ಥ ಸ್ವಾಮೀಜಿ ಸನ್ಯಾಸ ಸ್ವೀಕಾರದ ಸುವರ್ಣ ಮಹೋತ್ಸವ ಪ್ರಯುಕ್ತ ಶೃಂಗೇರಿಯ ಶಾರದಾ ಪೀಠ ಹಾಗೂ ಜಿಲ್ಲಾ ಮತ್ತು ನಗರ ಬ್ರಾಹ್ಮಣ ಸಂಘದಿಂದ ವರ್ಷ ಪೂರ್ತಿ ಸುವರ್ಣ ಭಾರತಿ ಸಂಭ್ರಮಾಚರಣೆ, ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶಂಕರಾಲಯದ ಗೌರವ ವ್ಯವಸ್ಥಾಪಕ ಶೇಷಾದ್ರಿ ಭಟ್ ತಿಳಿಸಿದರು.
ಶಂಕರ ಜಯಂತ್ಯುತ್ಸವದ ಪ್ರಯುಕ್ತ ಮೇ 19ರಂದು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಫೋರ್ಟ್ ಮೊಹಲ್ಲದ ಶಂಕರಮಠ ಆವರಣದಲ್ಲಿ ಎಎಸ್‌ಜಿ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಕಣ್ಣಿನ ತಪಾಸಣೆ ಹಾಗೂ ಸುವರ್ಣ ಮಹೋತ್ಸವ ಪ್ರಯುಕ್ತ ಡಿಆರ್‌ಎಂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸಹಯೋಗದಲ್ಲಿ ಆರೋಗ್ಯ ತಪಾಸಣೆ ಉಚಿತವಾಗಿ ಆಯೋಜಿಸಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಕ್ತದೊತ್ತಡ, ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಗರ್ಭಕೋಶದ ಕ್ಯಾನ್ಸರ್ ಪತ್ತೆ ತಪಾಸಣೆಗಳು ನಡೆಯಲಿವೆ. ಸಾರ್ವಜನಿಕರು ಈ ಅವಕಾಶ ಸದುಪಯೋಗಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಬ್ರಾಹ್ಮಣರ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್, ಮಠದ ಭಕ್ತರಾದ ಎಸ್. ರಂಗನಾಥ, ಹರೀಶ್, ಎಂ.ಆರ್.ಬಾಲಕೃಷ್ಣ, ಗೋಪಾಲರಾವ್, ಸುಚೇಂದ್ರ ತೀರ್ಥ ಇದ್ದರು.