

ಮೂಡುಬಿದಿರೆ: ಮಹಾವೀರ ಜಯಂತಿಯ ಅಂಗವಾಗಿ ಎ.ಜೆ ಆಸ್ಪತ್ರೆ, ಜೈನ್ ಮೆಡಿಕಲ್ ಸೆಂಟರ್ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಹಭಾಗಿತ್ವದೊಂದಿಗೆ ಆರೋಗ್ಯ ತಪಾಸಣಾ ಉಚಿತ ಶಿಬಿರ ಗುರುವಾರ ಧವಲಾ ಕಾಲೇಜಿನಲ್ಲಿ ನಡೆಯಿತು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಉದ್ಘಾಟಿಸಿದರು. ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಾವೀರ ಸ್ವಾಮಿಬೋಧಿಸಿದ ಅಹಿಂಸೆ ಜಗತ್ತಿಗೆ ಇಂದೂ ಪ್ರಸ್ತುತವಾಗಿದೆ. ಪ್ರಾಣಿಗಳಿಗೆ ಮಾತ್ರವಲ್ಲ ಮನುಷ್ಯರಿಗೂ ಹಿಂಸೆಯಾಗಬಾರದು. ಹಿಂಸಾಮುಕ್ತ ಸಮಾಜ ನಿರ್ಮಾಣವಾಗಬೇಕು ಎಂದರು.
ಮೂಡಾ ಅಧ್ಯಕ್ಷ ಹರ್ಷವರ್ಧನ ಪಡಿವಾಳ್, ಡಿಜೆವಿವಿ ಸಂಘದ ಕಾರ್ಯದರ್ಶಿ ಅಭಿಜಿತ್ ಎಂ, ಎಪಿಎಂಸಿ ಮಾಜಿ ಅಧ್ಯಕ್ಷ ಕೆ.ಕೃಷ್ಣರಾಜ ಹೆಗ್ಡೆ, ರೋಟರಿ ಕ್ಲಬ್ ಟೆಂಪಲ್ ಟೌನ್ ಅಧ್ಯಕ್ಷ ಪೂರ್ಣಚಂದ್ರ ಜೈನ್, ಜೈನ್ ಮೆಡಿಕಲ್ ಸೆಂಟರ್‌ನ ಡಾ.ಮಹಾವೀರ ಜೈನ್, ಎ.ಜೆ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ದಿಶಾ ಅಜಿಲ, ದಂತ ವೈದ್ಯ ಡಾ.ರೇಷ್ಮಾ, ಬ್ಲಡ್ ಬ್ಯಾಂಕ್‌ನ ಮುಖ್ಯಾಧಿಕಾರಿ ಗೋಪಾಲಕೃಷ್ಣ, ಸರ್ವಮಂಗಳ ಮಹಿಳಾ ಸಂಘದ ಅಧ್ಯಕ್ಷೆ ಮಂಜುಳಾ ಉಪಸ್ಥಿತರಿದ್ದರು. ಪ್ರಭಾತ್ ಬಲ್ನಾಡ್ ನಿರೂಪಿಸಿದರು. ಡಾ.ಮಹಾವೀರ ಜೈನ್ ವಂದಿಸಿದರು.
ಜೈನ್ ಮಿಲನ್, ಮಹಾವೀರ ಸಂಘ, ತೌಳವ ಇಂದ್ರ ಸಮಾಜ, ತ್ರಿಭುವನ್ ಯೂತ್ ಅಸೋಸಿಯೇಶನ್, ರೋಟರಿ ಕ್ಲಬ್, ಟೆಂಪಲ್ ಟೌನ್, ಡಿಜೆವಿವಿ ಸಂಘ, ತ್ರಿಭುವನ್ ಹಾಗೂ ಬೆದ್ರ ಆಟೋ ಸ್ಪೋರ್ಟ್ಸ್ ಕ್ಲಬ್, ತ್ರಿಭುವನ್ ಟ್ರಸ್ಟ್, ಸರ್ವಮಂಗಳ ಮಹಿಳಾ ಸಂಘ ಸಹಭಾಗಿತ್ವದಲ್ಲಿ ನಡೆದ ಆರೋಗ್ಯ ತಪಾಸಣಾ ಶಿಬಿರದಲ್ಲಿ 195 ಮಂದಿ ಆರೋಗ್ಯ ತಪಾಸಣೆ, 50 ಮಂದಿ ದಂತ ತಪಾಸಣೆ ಮಾಡಿಸಿಕೊಂಡರು. 115 ಮಂದಿ ರಕ್ತದಾನ ಮಾಡಿದರು.