

ಯಲ್ಲಾಪುರ: ಪಟ್ಟಣದ ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಶನಿವಾರ ವಿಶ್ವದರ್ಶನ ಸೇವಾ ಮತ್ತು ಕೆ.ಎಸ್. ಹೆಗ್ಡೆ ಆಸ್ಪತ್ರೆ, ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ಎಲುಬು ಮತ್ತು ಕೀಲು ತಜ್ಞ ಡಾ.ಸನತ್ ಕುಮಾರ್ ಶೆಟ್ಟಿ , ಚರ್ಮರೋಗ ತಜ್ಞ ಡಾ. ಸ್ನಿಗ್ಧ ಹೆಗ್ಡೆ, ಕಿವಿ ಮೂಗು ಗಂಟಲು ತಜ್ಞ ಡಾ.ಶ್ರವಣ್ ಆಳ್ವ, ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞ ಡಾ. ವರ್ಷ ವಿ. ಕಾಮತ್ ಮತ್ತು ವೈದ್ಯಕೀಯ ತಜ್ಞ ಡಾ.ಪೌಲ್ ನೆಡುಂಪುರಾತ್ ಸೇರಿದಂತೆ 22ಕ್ಕೂ ಹೆಚ್ಚು ವೈದ್ಯಾಧಿಕಾರಿಗಳು ಚಿಕಿತ್ಸೆ ನೀಡಿದರು.
ಶಿಬಿರದಲ್ಲಿ ವೈದ್ಯರು ಸೂಚಿಸಿದವರಿಗೆ ರಕ್ತದ ಒತ್ತಡ ಮತ್ತು ಮಧುಮೇಹ ಪರೀಕ್ಷೆ ಹಾಗೂ ಇಸಿಜಿ ಪರೀಕ್ಷೆಗಳನ್ನು ಉಚಿತವಾಗಿ ಮಾಡಲಾಯಿತು. ಸಾಮಾನ್ಯ ಔಷಧಗಳನ್ನು ಉಚಿತವಾಗಿ ನೀಡಲಾಯಿತು. ಶಿಬಿರದಲ್ಲಿ ವೈದ್ಯಕೀಯ ಚಿಕಿತ್ಸೆ, ಶ್ವಾಸಕೋಶ ಸಂಬಂಧಿ ಚಿಕಿತ್ಸೆ, ಹೃದಯ ಚಿಕಿತ್ಸೆ, ಸ್ತ್ರೀ ರೋಗ ಚಿಕಿತ್ಸೆ, ಚರ್ಮ ರೋಗ ಚಿಕಿತ್ಸೆ, ಎಲುಬು ಮತ್ತು ಕೀಲು ಚಿಕಿತ್ಸೆ, ಕಿವಿ ಮೂಗು ಗಂಟಲು ಚಿಕಿತ್ಸೆ, ಬೆನ್ನುಮೂಳೆ ಚಿಕಿತ್ಸೆ, ಮೊಣಕಾಲಿನ ಚಿಕಿತ್ಸೆ, ಥೈರಾಯಿಡ್, ಗರ್ಭಕೋಶದ ಗಡ್ಡೆ, ನರ ಸಂಬಂಧಿ ರೋಗಗಳ ತಪಾಸಣೆ ನಡೆಸಲಾಯಿತು.
ಶಿಬಿರದಲ್ಲಿ 119 ರೋಗಿಗಳು ಶಿಬಿರದ ಸದುಪಯೋಗ ಪಡೆದುಕೊಂಡರು. ಶಿಬಿರದಲ್ಲಿ ಕ್ಷೇಮ ಹೆಲ್ತ್ ಕಾರ್ಡ್ ನೋಂದಣಿಗೆ ಅವಕಾಶ ಕಲ್ಪಿಸಲಾಗಿತ್ತು. ವಿಶ್ವದರ್ಶನ ಸೇವಾದ ಸಂಚಾಲಕ ಗೋಪಾಲಕೃಷ್ಣ ಗಾಂಕರ್, ಸಹ ಸಂಚಾಲಕ ಶ್ರೀರಾಮ ಲಾಲಾಗುಳಿ, ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಜಯ್ ಭಾರತೀಯ, ಪ್ರಮುಖರಾದ ಶೇಖರ ಬೆಳಾಲ ಉಪಸ್ಥಿತರಿದ್ದರು.