ಗ್ರಾಮೀಣ ಜನರಿಗೆ ಆರೋಗ್ಯ ಉಚಿತ ಶಿಬಿರ ಸಹಕಾರಿ

ಚನ್ನರಾಯಪಟ್ಟಣ ತಾಲೂಕಿನ ಮೂಕಿಗೆರೆ ಗ್ರಾಮದಲ್ಲಿ ಆಯೋಜಿಸಿದ್ದ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರದಲ್ಲಿ 30ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು.
ಚನ್ನರಾಯಪಟ್ಟಣ ತಾಲೂಕಿನ ಮೂಕಿಗೆರೆ ಗ್ರಾಮದಲ್ಲಿ ಆಯೋಜಿಸಿದ್ದ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರದಲ್ಲಿ 30ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು.
Published on

ಚನ್ನರಾಯಪಟ್ಟಣ: ಗ್ರಾಮೀಣ ಜನರ ಆರೋಗ್ಯ ದೃಷ್ಟಿಯಿಂದ ಆರೋಗ್ಯ ಉಚಿತ ಶಿಬಿರಗಳು ಸಹಕಾರಿ ಎಂದು ರೋಟರಿ ಸಂಸ್ಥೆ ಅಧ್ಯಕ್ಷ ಬಿ.ವಿ.ವಿಜಯ್ಕುಮಾರ್ ತಿಳಿಸಿದರು.

ತಾಲೂಕಿನ ಹಿರೀಸಾವೆ ಹೋಬಳಿಯ ಮೂಕಿಕೆರೆ ಗ್ರಾಮದಲ್ಲಿ ಉಡಿಸಲಮ್ಮ ದೇವಿಯ ಜಾತ್ರಾ ಮಹೋತ್ಸವ ಅಂಗವಾಗಿ ರೋಟರಿ ಕ್ಲಬ್ ವಿಷನ್ ಹಾಗೂ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಹಾಗೂ ಸ್ವಯಂ ಪ್ರೇರಿತ ರಕ್ತ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣಾ ಹಾಗೂ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಗ್ರಾಮಸ್ಥರು ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರದೆ ತಜ್ಞ ವೈದ್ಯರು ಲಭ್ಯವಿದ್ದಾಗ ಶಿಬಿರದಲ್ಲಿ ಪಾಲ್ಗೊಂಡು ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಈ ಹಿಂದಿನ ದಿನಗಳಲ್ಲಿ ನಮ್ಮಲ್ಲಿ ವಾಂತಿ-ಭೇದಿ, ಟೈಫಾಯಿಡ್, ಕ್ಷಯ, ಕಾಲರಾದಂತಹ ರೋಗಗಳು ಸಾಮಾನ್ಯವಾಗಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಬಿಪಿ, ಶುಗರ್, ಹೃದ್ರೋಗ ಹಾಗೂ ಕಿಡ್ನಿ ಕಾಯಿಲೆ ಸಾಮಾನ್ಯವಾಗಿದೆ. ಇವು ಶ್ರೀಮಂತ ಕಾಯಿಲೆಗಳಾಗಿದ್ದು, ಬಡಜನರು ಆರ್ಥಿಕವಾಗಿ ಭರಿಸಲು ಅಸಾಧ್ಯ. ಅಲ್ಲದೆ ಗ್ರಾಮೀಣ ಜನರಿಗೆ ಇಂತಹ ಉಚಿತ ಶಿಬಿರಗಳ ಮೂಲಕ ಚಿಕಿತ್ಸೆಗೊಳಪಡಿಸಿದಾಗ ಮಾತ್ರ ಅವರನ್ನು ಸಂಕಷ್ಟದಿಂದ ಪಾರು ಮಾಡಲು ಸಾಧ್ಯ ಎಂದರು.

ನಾವು ಆರೋಗ್ಯ ಲೆಕ್ಕಿಸದೆ ದುಡಿಯುತ್ತೇವೆ. ಆದರೆ ಆರೋಗ್ಯ ಕೈಕೊಟ್ಟಾಗ ದುಡಿದ ಹಣವನ್ನು ಸುರಿಯುತ್ತೇವೆ. ಅಧಿಕ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಹೃದಯಾಘಾತದಂತಹ ರೋಗಗಳು ಹೆಚ್ಚುತ್ತಿವೆ. ಆರೋಗ್ಯದತ್ತ ಪ್ರತಿಯೊಬ್ಬರೂ ಕಾಳಜಿ ವಹಿಸಬೇಕು. ಅನಾರೋಗ್ಯದಿಂದ ಬಳಲುತ್ತಿರುವ ಬಡಜನತೆಗೆ ಉತ್ತಮ ಆರೋಗ್ಯ ನೀಡಬೇಕೆಂಬ ದೃಷ್ಟಿಯಿಂದ ರೋಟರಿ ಸಂಸ್ಥೆ ಶಿಬಿರಗಳನ್ನು ಏರ್ಪಡಿಸಿ ಚಿಕಿತ್ಸೆ ನೀಡುತ್ತಿದೆ. ಅಲ್ಲದೆ ಸರ್ಕಾರ ಹಾಗೂ ಇತರ ಸಂಘ, ಸಂಸ್ಥೆಗಳ ನೇತತ್ವದಲ್ಲಿ ಪಲ್ಸ್ ಪೋಲಿಯೋ, ದಂತ ಚಿಕಿತ್ಸೆ, ನೇತ್ರ ಚಿಕಿತ್ಸೆ, ರಕ್ತದಾನದಂತಹ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದರು.

ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ತಾಲೂಕು ಘಟಕದ ಸಭಾಪತಿ ಎಚ್.ಜಿ.ಭರತ್ ಕುಮಾರ್ ಮಾತನಾಡಿ, ರಕ್ತದಾನದಿಂದ ರಕ್ತದೊತ್ತಡ, ಮಧುಮೇಹದಂತಹ ರೋಗಗಳು ನಿಯಂತ್ರಣಕ್ಕೆ ಬರುವುದರ ಜತೆಗೆ ಆತ್ಮತೃಪ್ತಿ ಸಿಗುತ್ತದೆ. ರಕ್ತದಾನ ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ದೇಶದಲ್ಲಿ ಪ್ರತಿವರ್ಷ 41 ದಶಲಕ್ಷ ಯುನಿಟ್ ರಕ್ತದ ಕೊರತೆ ಎದುರಾಗುತ್ತಿದೆ. ಸಮಯಕ್ಕೆ ಸರಿಯಾಗಿ ರಕ್ತ ಸಿಗದೆ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು, ಅಪಘಾತದ ಗಾಯಾಳುಗಳು ಮೃತಪಡುತ್ತಿದ್ದಾರೆ. ಅಮೂಲ್ಯ ಜೀವಗಳನ್ನು ಉಳಿಸಲು ರಕ್ತದಾನ ಮಾಡುವುದು ಅಗತ್ಯವಾಗಿದ್ದು, ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಬೇಕು ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ 250ಕ್ಕೂ ಹೆಚ್ಚು ಜನರಿಗೆ ಬಿಪಿ, ಮಧುಮೇಹ, ಕಣ್ಣಿನ ತಪಾಸಣೆ, ರಕ್ತ ಗುಂಪಿನ ವರ್ಗೀಕರಣ, ಹೃದಯ ಸಂಬಂಧಿ ಚಿಕಿತ್ಸೆ, ಇಸಿಜಿ ಪರೀಕ್ಷೆ ಮಾಡಿ ಸ್ಥಳದಲ್ಲಿಯೇ ಔಷಧ ನೀಡಲಾಯಿತು. ಸುಮಾರು ಮೂವತ್ತಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು. ಚನ್ನರಾಯಪಟ್ಟಣ ರೋಟರಿ ಕ್ಲಬ್ನ ಕಾರ್ಯದರ್ಶಿ ಡಾ.ಕುಮುದಾ, ಸದಸ್ಯರಾದ ಶಿವನಂಜೇಗೌಡ, ಕಿಶೋರ್ ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net