ನಾಳೆ ಬಿರಿಯಾನಿ ತಿನ್ನಲು ಸಿದ್ದರಾಮಯ್ಯ ಬೆಳಗಾವಿಗೆ ಬರುತ್ತಿದ್ದಾರೆ

IMG_20251003_123801.jpg
Published on

ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ ಆರೋಪ

ಬೆಳಗಾವಿ: ಮಳೆಯಿಂದ ಮನೆ, ಬೆಳೆ ಹಾನಿಯಾದಾಗ ಬೆಳಗಾವಿಗೆ ಬಂದು ಜನರ ಸಂಕಷ್ಟ ಕೇಳದ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆ ವಿವಿಧ ಉದ್ಘಾಟನೆಗಳಿಗೆ ಬರುತ್ತಿದ್ದು, ಈಗ ಬಿರಿಯಾನಿ ತಿನ್ನುವುದಕ್ಕೆ ಬರುತ್ತಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಟೀಕೆ ಮಾಡಿದರು.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ನಾಗನೂರ ಗ್ರಾಮದಲ್ಲಿ ಮಳೆಯಿಂದ ಹಾನಿಯಾದ ಬೆಳೆಯ ಪರಿಶೀಲನೆ ಬಳಿಕ ರೈತರೊಂದಿಗಿನ ಸಭೆಯಲ್ಲಿ ಮಾತನಾಡಿದ ಅವರು, ನಾಳೆ ಬರುತ್ತಿರುವ ಸಿದ್ದರಾಮಯ್ಯನವರಿಗೆ ಜಿಲ್ಲೆಯ ರೈತರ ಪರಿಸ್ಥಿತಿ ಹೇಗಿದೆ ಎನ್ನುವುದನ್ನು ತಿಳಿಸಿಕೊಡಬೇಕಿದೆ. ಅದಕ್ಕಾಗಿಯೇ ನಾವು ರೈತರ ಸಂಕಷ್ಟ ಕೇಳಲು ಇವತ್ತು ಜಿಲ್ಲೆಯಲ್ಲಿ ಸಂಚರಿಸಿ ಪರಿಶೀಲನೆ ಮಾಡುತ್ತಿದ್ದೇವೆ ಎಂದು ಹೇಳಿದರು.
ಸದ್ಯ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಪ್ರವಾಹ ಬಂದಿದೆ. ಈ ಬಗ್ಗೆ ಚಿಂತಿಸಬೇಕಾದ ಸಿದ್ದರಾಮಯ್ಯ ಕೇವಲ ತಮ್ಮ ಕುರ್ಚಿ ಬಗ್ಗೆ ಕಾಳಜಿ ವಹಿಸಿದ್ದಾರೆ. ದಿನ ಬೆಳಗಾದರೆ ಕೇವಲ ಐದು ವರ್ಷದ ಅವಧಿಗೆ ನಾನೇ ಸಿಎಂ ಎಂದು ಹೇಳುತ್ತ, ಕೇವಲ ಅದೇ ಚರ್ಚೆ ಮಾಡುತ್ತಿದ್ದಾರೆ‌‌. ಬೆಳಗಾವಿ ಜಿಲ್ಲೆಯಲ್ಲಿ ಎರಡು ತಿಂಗಳಿನಿಂದ 52 ಸಾವಿರ ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿ ಈಗ ನಮಗೆ ಮಾಹಿತಿ ಹೇಳಿದ್ದಾರೆ. ಆದರೆ ಎರಡು ತಿಂಗಳಿನಿಂದ ಯಾರೂ ಬಂದಿಲ್ಲ ಯಾಕೆ? ಸಚಿವರು ಬಂದಿಲ್ಲ ಅಂತಾ ಶಾಸಕರು ಬಂದಿಲ್ಲ, ಶಾಸಕರು ಇಲ್ಲ ಎಂದು ಅಧಿಕಾರಿಗಳೂ ಬಂದಿಲ್ಲ. ಈಗ ನಾವು ಬಂದಿದ್ದೇವೆ ಎಂದು ಜಿಲ್ಲಾಧಿಕಾರಿ, ತಹಸೀಲ್ದಾರ ಬಂದಿದ್ದಾರಷ್ಟೇ. ಕೇಂದ್ರದಿಂದ ಈಗಾಗಲೇ ಎನ್‌ಡಿಆರ್‌ಎಫ್ ಪರಿಹಾರ ಬಂದಿದೆ. ಆದರೆ ಇವರು ಮಾತ್ರ ಅದನ್ನು ಹಾನಿಯಾದ ಜನರಿಗೆ ಕೊಡುತ್ತಿಲ್ಲ‌. ಬದಲಿಗೆ ತನ್ನ ಫ್ರಿ ಯೋಜನೆಗಳಿಗೆ ನೀಡಿದ್ದಾರೆ ಎಂದು ದೂರಿದರು.

ಈ ವೇಳೆ ತಮ್ಮ ಸಮಸ್ಯೆ ಹೇಳಿಕೊಂಡ ರೈತರು ಸೋಯಾಅವರೆ ಬೆಳೆ ಸಂಪೂರ್ಣ ಹಾನಿಯಾಗಿದೆ. ಕಳೆದ ಸಲಕ್ಕಿಂತ ಸಲ ಬೆಳೆಗೆ ಹೆಚ್ಚಗೆ ಖರ್ಚು ಮಾಡಿದ್ವಿ‌. ಎಕರೆಗೆ 12ರಿಂದ 15 ಕ್ವಿಂಟಾಲ್ ಇಳುವರಿ ಬರುತ್ತಿತ್ತು. ಈಗ ಕೇವಲ 2-3 ಕ್ವಿಂಟಾಲ್ ಮಾತ್ರ ಬರುತ್ತಿದೆ‌. ಯಾವೊಬ್ಬ ಅಧಿಕಾರಿಯೂ ಹಾನಿ ನೋಡಲು ಬಂದಿಲ್ಲ‌. ಶಾಸಕರೂ ಬಂದು ನೋಡಿಲ್ಲ ಎಂದು ಅಳಲು ತೋಡಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net