ಸೈಲೋ ಘಟಕ ರೈತರಿಗೆ ಮುಕ್ತ

2-hvr-01a
Published on

ಹಾವೇರಿ: ಪೂರ್ವಜರು ತಾವು ಬೆಳೆದ ದವಸ ಧಾನ್ಯಗಳನ್ನು ವರ್ಷಗಳ ಕಾಲ ಕೆಡದಂತೆ ಸಂಗ್ರಹಿಸಿಡಲು ಬಳಸುತ್ತಿದ್ದ ಹಗೆವುಗಳೆಲ್ಲ ಇಂದು ನಾನಾ ಕಾರಣಗಳಿಂದ ಮಾಯವಾಗಿವೆ. ಇದೀಗ ಹಗೆವು ಮಾದರಿಯಲ್ಲಿ ಆಧುನಿಕ ಶೈಲಿಯ ವಿದೇಶಿ ತಂತ್ರಜ್ಞಾನದ ಸೈಲೋ ಘಟಕಗಳು ಸ್ಥಳೀಯ ಎಪಿಎಂಸಿಯಲ್ಲಿ ನಿರ್ವಣವಾಗಿದ್ದು, ಪ್ರಾಯೋಗಿಕ ಪರೀಕ್ಷೆಯೂ ಯಶಸ್ವಿಯಾಗಿದೆ.

ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯ ಹಾನಗಲ್ಲ ರಸ್ತೆಯಲ್ಲಿರುವ ಜಾನುವಾರು ಮಾರುಕಟ್ಟೆಯಲ್ಲಿ 2.11 ಕೋಟಿ ರೂ. ವೆಚ್ಚದಲ್ಲಿ ತಲಾ 200 ಮೆ.ಟನ್ ಸಾಮರ್ಥ್ಯದ 5 ಸೈಲೋ ಘಟಕಗಳು ನಿರ್ವಣಗೊಂಡಿವೆ. ಬುಧವಾರ ಪ್ರಾಯೋಗಿಕ ಪರೀಕ್ಷೆಯನ್ನು ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಹಾವೇರಿ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಸಲಾಯಿತು.

‘ಎಪಿಎಂಸಿ ಜಾನುವಾರು ಮಾರುಕಟ್ಟೆ ಪ್ರಾಂಗಣದಲ್ಲಿ 5 ಸೈಲೋ ಘಟಕಗಳನ್ನು ನಿರ್ವಿುಸಿ 1 ಸಾವಿರ ಮೆಟ್ರಿಕ್​ಟನ್ ಸಾಮರ್ಥ್ಯ ಧಾನ್ಯಗಳನ್ನು ಸಂಗ್ರಹಿಸಲು ಕೃಷಿ ಮಾರಾಟ ಇಲಾಖೆಗೆ 2016-17ನೇ ಸಾಲಿನ ಬಜೆಟ್​ನಲ್ಲಿ ಅನುಮೋದನೆ ನೀಡಲಾಗಿತ್ತು. ಆರಂಭದಲ್ಲಿ 5 ಘಟಕಗಳನ್ನು 1.85 ಕೋಟಿ ರೂ. ವೆಚ್ಚದಲ್ಲಿ ನಿರ್ವಿುಸಲು ಯೋಜನೆ ಸಿದ್ಧಗೊಳಿಸಲಾಗಿತ್ತು. ಸರ್ಕಾರ 1 ಕೋಟಿ ರೂ. ಅನುದಾನ ಮಂಜೂರು ಮಾಡಿತ್ತು. ಉಳಿದ 85 ಲಕ್ಷ ರೂ.ಗಳನ್ನು ಎಪಿಎಂಸಿಯಿಂದ ಭರಿಸಲಾಗಿದೆ. ಇದೀಗ ಘಟಕಗಳ ನಿರ್ಮಾಣ ವೆಚ್ಚ 2.11 ಕೋಟಿ ರೂ.ಗಳಷ್ಟಾಗಿದೆ. ರಾಜ್ಯದ ಕಲಬುರ್ಗಿ ಬಿಟ್ಟರೆ ಹಾವೇರಿಯಲ್ಲಿ 2ನೇ ಘಟಕ ಕಾರ್ಯಾರಂಭಗೊಂಡಿದೆ’ ಎಂದು ಮಲ್ಲಿಕಾರ್ಜುನ ಹಾವೇರಿ ತಿಳಿಸಿದರು.

ಘಟಕದಲ್ಲಿನ ವಿಶೇಷಗಳು: ಈ ಘಟಕಗಳನ್ನು ದೀರ್ಘಕಾಲದವರೆಗೆ ಸಗಟು ಧಾನ್ಯ ಸಂಗ್ರಹಣೆಗೆ ಬಳಸಬಹುದಾಗಿದೆ. ಗ್ಯಾಲ್ವನೈಸ್ಡ್ ಉಕ್ಕಿನಿಂದ ನಿರ್ವಿುಸಲಾಗಿದ್ದು, ಸುಲಭವಾಗಿ ಜೋಡಿಸಲು ಅನುಕೂಲವಾಗುವಂತೆ ಬೋಲ್ಟ್ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಲೆವಲ್ ಸ್ವಿಚ್, ವಾತಾನುಕೂಲ ವ್ಯವಸ್ಥೆ, ಉಷ್ಣಾಂಶ ಮೇಲ್ವಿಚಾರಣೆ, ಗಾಳಿ ವ್ಯವಸ್ಥೆ, ಸ್ವೀಪ್ ಅಗರ್​ಗಳೂ ಇರುವುದರಿಂದ ಸಂಗ್ರಹಿಸಿದ ಧಾನ್ಯ ಹಾಳಾಗುವ ಸಂಭವ ಕಡಿಮೆ ಇರುತ್ತದೆ. ಹೀಗಾಗಿ ಹಗೆವಿನ ಬದಲು ಸೈಲೋ ಘಟಕಗಳು ರೈತರಿಗೆ ಹಾಗೂ ವರ್ತಕರಿಗೆ ಧಾನ್ಯಗಳನ್ನು ಸಂಗ್ರಹಿಸಿಡಲು ಅನುಕೂಲಕರವಾಗಿವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net