

ಮಂಗಳೂರು: ಸೈಕಲ್‌ನಲ್ಲಿ ವಿಶ್ವ ಪರ್ಯಟನೆ ಮೂಲಕ ಅಮೆರಿಕಕ್ಕೆ ಕಾಲಿಟ್ಟ ಕನ್ನಡಿಗ, ಈಗ ಅಲ್ಲಿ ಮೂರು ಉಡುಪಿ ಹೊಟೇಲ್‌ಗಳ ಮಾಲೀಕ. ಕರೊನಾ ಆಪತ್ಕಾಲದಲ್ಲಿ ಒಂದೂವರೆ ತಿಂಗಳಿನಿಂದ ಇನ್ನೂರಕ್ಕೂ ಹೆಚ್ಚು ನಿರ್ಗತಿಕರಿಗೆ ಪ್ರತೀ ದಿನ ಉಚಿತವಾಗಿ ಊಟ ವ್ಯವಸ್ಥೆ ಕಲ್ಪಿಸುವ ಮೂಲಕ ಭಾರತದ ಪತಾಕೆ ಹಾರಿಸಿದ್ದಾರೆ.
ಹೂಸ್ಟನ್‌ನಲ್ಲಿ 22 ವರ್ಷಗಳಿಂದ ಸಸ್ಯಾಹಾರಿ ಉಡುಪಿ ಹೊಟೇಲ್ ನಡೆಸುತ್ತಿರುವ ಸತೀಶ್ ವೈ.ರಾವ್(ಮರಾಠೆ) ಆರಂಭದಿಂದಲೂ ಬಡವರಿಗೆ, ನಿರ್ಗತಿಕರಿಗೆ ಉಚಿತವಾಗಿ ಆಹಾರವನ್ನು ಒದಗಿಸುವುದರಲ್ಲಿ ಮುಂದು. ಯಾವಾಗ ಕರೊನಾ ಅಮೆರಿಕಕ್ಕೆ ಕಾಲಿಟ್ಟಿತೋ, ಎಲ್ಲೆಡೆಯಂತೆ ವಸತಿರಹಿತರು, ನಿರ್ಗತಿಕರಿಗೆ ಸೇತುವೆ, ಓವರ್ ಬಿಡ್ಜ್‌ಗಳೇ ಆಸರೆ ತಾಣಗಳಾದವು. ಜೊತೆಗೆ ಎದುರಾದುದು ಆಹಾರ ಸಮಸ್ಯೆ. ಈ ದೃಶ್ಯಗಳನ್ನು ಕಂಡ ಸತೀಶ್ ತಮ್ಮ ಸೇವಾ ಕಾರ್ಯವನ್ನು ಸ್ವಲ್ಪ ವಿಸ್ತರಿಸಿ, ಅವರಿಗೂ ಪ್ರತೀದಿನ ತಮ್ಮ ಹೊಟೇಲ್‌ನಿಂದ ಉಚಿತವಾಗಿ ಆಹಾರ ತಲುಪಿಸುವ ವ್ಯವಸ್ಧೆ ಮಾಡಿದ್ದಾರೆ.
‘ವಿಜಯವಾಣಿ’ ಜತೆ ಅಲ್ಲಿನ ಪರಿಸ್ಥಿತಿ ವಿವರಿಸಿದ ಸತೀಶ್ ರಾವ್, ಆರು ವಾರಗಳಿಂದ ಊಟ ಒದಗಿಸಲಾಗುತ್ತಿದೆ. ಎಲ್ಲ ಕಡೆಗಳಲ್ಲಿ ರೆಸ್ಟೋರೆಂಟ್‌ಗಳು ಮುಚ್ಚಿದ್ದರೂ, ಸಹೋದ್ಯೋಗಿಗಳ ಬೆಂಬಲದಿಂದ ಈ ಆಹಾರ ಪೂರೈಕೆ ಸಾಧ್ಯವಾಗುತ್ತಿದೆ. ಆಗತ್ಯವಿರುವ ಇತರರಿಗೂ ಆಹಾರವನ್ನು ಪಾರ್ಸೆಲ್‌ನಲ್ಲಿ ನೀಡುತ್ತಿದ್ದೇವೆ ಎಂದು ವಿವರಿಸಿದರು.
ಅಮೆರಿಕ ಅಭಿವೃದ್ಧಿ ಹೊಂದಿದ ದೇಶ ನಿಜ. ಆದರೆ ನಮ್ಮಲ್ಲಿಯೂ ವಸತಿರಹಿತರೂ, ನಿರ್ಗತಿಕರು ಸಾಕಷ್ಟು ಮಂದಿ ಇದ್ದಾರೆ. ಕರೊನಾ ಸಂದರ್ಭ ಅವರಿಗೆ ಸಹಾಯ ಮಾಡುವುದು ನಮ್ಮ ಅದ್ಯ ಕರ್ತವ್ಯ. ನಾನು ಸಾಯಿ ಬಾಬಾ ಭಕ್ತ. ‘ಎಲ್ಲರನ್ನೂ ಪ್ರೀತಿಸು. ಎಲ್ಲರ ಸೇವೆ ಮಾಡು’ ಎಂಬ ಅವರ ಮಾರ್ಗದರ್ಶನದಂತೆ, ಮುನ್ನಡೆಯುತ್ತಿದ್ದೇನೆ ಎಂದರು.
ಸತೀಶ್ ರಾವ್ ಹಾಗೂ ಅವರ ಸಂಗಡಿಗರ ಸಮಾಜಮುಖಿ ಕಾರ್ಯ ಗುರುತಿಸಿ ಜಡ್ಜ್ ಆಫ್ ಹೂಸ್ಟನ್ ಅವರು ಪ್ರಶಂಸಾಪತ್ರ ನೀಡಿ, ಗೌರವಿಸಿದ್ದಾರೆ. ಅಮೆರಿಕಾದ ಪತ್ರಿಕೆಗಳಲ್ಲಿ ಶ್ಲಾಘನೆ ವ್ಯಕ್ತವಾಗಿದೆ.
ಛಲದ ಬೆನ್ನೇರಿ
ಸತೀಶ್ ರಾವ್ ಹುಟ್ಟಿದ್ದು ಉಡುಪಿಯ ಹಿರಿಯಡ್ಕದಲ್ಲಿ. ಬಡ ಕುಟುಂಬ. ಪ್ರಾಥಮಿಕ ಶಿಕ್ಷಣ ಮುಗಿದ ಬಳಿಕ ತಂದೆ ಜೊತೆಯಲ್ಲಿ ಬೆಂಗಳೂರಿನಲ್ಲಿ ಬೆಳೆದರು. ಕಷ್ಟಪಟ್ಟು ಓದುತ್ತಿದ್ದಾಗ, ಸೈಕಲ್ ಓಡಿಸುವ ಹುಚ್ಚು ಹಿಡಿಯಿತು. ಆಸಕ್ತಿಯನ್ನು ಬೆನ್ನಟ್ಟಿ, ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದರು. ಪದಕಗಳ ಮೇಲೆ ಪದಕಗಳು ಬಂದವು. ರಾಜ್ಯ ಚಾಂಪಿಯನ್, ರಾಷ್ಟೀಯ ಚಾಂಪಿಯನ್ ಎನಿಸಿ, 1982ರಲ್ಲಿ ಏಷ್ಯಾಡ್‌ಗೂ ಆಯ್ಕೆಯಾದರು. ಕಾಲು ನೋವಿನ ಕಾರಣದಿಂದ ಸ್ಪರ್ಧೆಯಿಂದ ಹಿಂದುಳಿಯಬೇಕಾಯಿತು. ಆದರೆ, ಛಲ ಬಿಡದೆ 1983ರಲ್ಲಿ ಸೈಕಲ್‌ನಲ್ಲಿ ವಿಶ್ವ ಪರ್ಯಟನೆ ಆರಂಭಿಸಿ, 52 ದೇಶ ದಾಟಿ ಒಂದೂವರೆ ವರ್ಷಗಳ ಬಳಿಕ 1984ರಲ್ಲಿ ಅಮೆರಿಕ ತಲುಪಿದರು. ಅಲ್ಲಿ ಜೀವನಕ್ಕಾಗಿ ಹೊಟೇಲ್‌ನಲ್ಲಿ ಪಾತ್ರೆ ತೊಳೆಯಲು ಸೇರಿ, ರಾತ್ರಿ ಕಲಿಕೆ ಮುಂದುವರಿಸಿದರು. ಏರೋನಾಟಿಕ್ಸ್ ಪದವಿ ಬಳಿಕ ವಿಮಾನ ಕಂಪನಿಯೊಂದರಲ್ಲಿ ಕೆಲಸ. ಅದೇ ಹೊತ್ತಿಗೆ ಹೊಳೆದದ್ದು ಸಸ್ಯಾಹಾರಿ ಹೊಟೇಲ್ ಆರಂಭಿಸುವ ಐಡಿಯಾ. ಭಾರತೀಯರ ಸ್ವಾತಿಕ ಸಸ್ಯಾಹಾರದ ಅಗತ್ಯತೆ ಕಂಡು ಆರಂಭಿಸಿದ ಉಡುಪಿ ಕಫೆಗಳು ಐದರ ಸಂಖ್ಯೆ ತಲುಪಿದವು. ಭಾರತದ ಮಾಜಿ ರಾಷ್ಟ್ರಪತಿ ಡಾ. ಅಬ್ದುಲ್ ಕಲಾಂ ಸೇರಿದಂತೆ ಗಣ್ಯರು, ಕಲಾವಿದರು, ಸಿನಿ ತಾರೆಯರು ಉಡುಪಿ ಕಫೆಯ ಊಟೋಪಾಚಾರ ಸ್ವೀಕರಿಸಿದ್ದಾರೆ.
ಮೋದಿ ಔತಣಕೂಣಕ್ಕೂ ಸಿದ್ಧತೆ ಪ್ರಧಾನಿ ನರೇಂದ್ರ ಮೋದಿ ಮೊದಲ ಬಾರಿಗೆ ಅಮೆರಿಕ ಭೇಟಿ ನೀಡಿದಾಗ ಅಂದಿನ ಅಧ್ಯಕ್ಷ ಒರಾಕ್ ಒಬಾಮ ಎರ್ಪಡಿಸಿದ್ದ ಔತಣಕೂಣಕ್ಕೆ ಸಿದ್ಧತೆ ನಡೆಸಿದ ಬಾಣಸಿಗರ ತಂಡದಲ್ಲಿ ಸತೀಶ್ ರಾವ್ ಒಬ್ಬರು. ಇದು ತನ್ನ ಪಾಲಿಗೆ ಅತೀ ದೊಡ್ಡ ಗೌರವ ಎನ್ನುತ್ತಾರೆ ಅವರು. ಅಮೆರಿಕಾದಲ್ಲಿ ಈ ಹಿಂದೆ ನಡೆದ ಅಕ್ಕ ಸಮ್ಮೇಳನ, ವಿಶ್ವ ಕೊಂಕಣಿ ಸಮ್ಮೋಳನಕ್ಕೂ ಇದರದ್ದೇ ಔತಣ ಉಸ್ತುವಾರಿ.
ಎಷ್ಟು ಸಾಧ್ಯವೋ ಅಷ್ಟು ದಿನ ಜನರಿಗೆ ಆಹಾರ ಒದಗಿಸುವ, ಸೇವೆ ಸಲ್ಲಿಸುವ ನಿರ್ಧಾರ ಮಾಡಿದ್ದೇವೆ. ಇಷ್ಟೇ ಜನರಿಗೆ ಕೊಡುವುದು ಅಂತ ಲೆಕ್ಕ ಇಲ್ಲ. ಅದರೆ ಗುಣಮಟ್ಟದ ಆಹಾರ ನೀಡುವುದು ಮುಖ್ಯ. - ಸತೀಶ್ ರಾವ್ ಮುಖ್ಯಸ್ಥ, ಉಡುಪಿ ಕಫೆ, ಹೂಸ್ಟನ್