

ಕುಷ್ಟಗಿ: ಪಟ್ಟಣದ ಇನ್ನರ್ ವೀಲ್ ಕ್ಲಬ್ ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಂಡಿದ್ದು, ಬಡ ಹಾಗೂ ನಿರ್ಗತಿಕ ಕುಟುಂಬಗಳಿಗೆ ಆರ್ಥಿಕ ನೆರವು ನೀಡುತ್ತಿದೆ. ಪುನೀತ್ ರಾಜಕುಮಾರ ಅವರ ಪುಣ್ಯಸ್ಮರಣೆ ನಿಮಿತ್ತ ಪ್ರತಿ ವರ್ಷ ಅಸಹಾಯಕ ವೃದ್ಧರಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆ ಶಿಬಿರ ಆಯೋಜಿಸಲಾಗುತ್ತಿದೆ. ಇವರ ಕಾರ್ಯಕ್ಕೆ ಪಟ್ಟಣದ ಸುಭಾಷ್ ಕಾಖಂಡಕಿ ಕಣ್ಣಿನ ಆಸ್ಪತ್ರೆಯ ತಜ್ಞ ವೈದ್ಯ ಸುಶೀಲೇಂದ್ರ ಕಾಖಂಡಕಿ ಹಾಗೂ ಶ್ರೀ ರಾಘವೇಂದ್ರ ಚಾರಿಟಬಲ್ ಟ್ರಸ್ಟ್ ಸಾಥ್ ನೀಡುತ್ತಿರುವುದು ಶ್ಲಾಘನೀಯ.
ವೃದ್ಧಾಶ್ರಮಗಳಿಗೆ ಬಟ್ಟೆ, ದಿನಸಿ ವಸ್ತುಗಳು, ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್‌ಬುಕ್, ಪೆನ್ ಇನ್ನಿತರ ಸಾಮಗ್ರಿ ನೀಡಲಾಗುತ್ತಿದೆ. ದುರ್ಬಲರ ಸಂಕಷ್ಟಗಳಿಗೆ ಸ್ಪಂದಿಸುತ್ತಿರುವ ಕ್ಲಬ್ ಸದಸ್ಯರು, ಪುನೀತ್ ರಾಜಕುಮಾರ ಹೆಸರಿನಲ್ಲಿ ಪ್ರತಿ ವರ್ಷ ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆ ಮಾಡಿಸುತ್ತಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ 25 ಜನರ ಕಣ್ಣಿನ ಶಸ್ತ್ರಚಿಕಿತ್ಸೆ ನೀಡಲಾಗಿದೆ. ಈ ವರ್ಷ ನಾಲ್ವರು ವೃದ್ಧರನ್ನು ಆಯ್ಕೆ ಮಾಡಿ ಮಂಗಳವಾರ ಶಸ್ತ್ರ ಚಿಕಿತ್ಸೆ ಕೊಡಿಸಿದ್ದಾರೆ. ಈ ವರ್ಷ ಚಿಕಿತ್ಸೆಯ ವೆಚ್ಚವನ್ನು ಕ್ಲಬ್ ನಿಕಟಪೂರ್ವ ಅಧ್ಯಕ್ಷೆ ವಂದನಾ ಗೋಗಿ ಭರಿಸಿದ್ದಾರೆ. ಆಧುನಿಕ ಸೌಕರ್ಯ ಇರುವ ಕಣ್ಣಿನ ಆಸ್ಪತ್ರೆ ಆರಂಭಿಸಿ ನಿತ್ಯ ನೂರಾರು ಶಸ್ತ್ರ ಚಿಕಿತ್ಸೆ ಮಾಡುತ್ತಿರುವ ಡಾ.ಸುಶೀಲೇಂದ್ರ ಕಾಖಂಡಕಿ ವಿಶೇಷ ಸಂದರ್ಭಗಳಲ್ಲಿ ಬಡವರಿಗಾಗಿ ಶಿಬಿರ ಆಯೋಜಿಸುವ ಮೂಲಕ ಉಚಿತ ಶಸ್ತ್ರ ಚಿಕಿತ್ಸೆ ನೀಡುತ್ತಿದ್ದಾರೆ. ಇನ್ನರ್ ವೀಲ್ ಕ್ಲಬ್ ಕಾರ್ಯಕ್ಕೆ ಡಾ.ಸುಶೀಲೇಂದ್ರ ಅವರು ಸಾಥ್ ನೀಡುತ್ತಿದ್ದಾರೆ.