ಮುಕ್ತ ಅಭಿವ್ಯಕ್ತಿ ಸೃಜನಶೀಲತೆಗೆ ರಹದಾರಿ: ಡಾ.ಧರಣಿದೇವಿ ಮಾಲಗತ್ತಿ

mysore
Published on

ಮೈಸೂರು: ಕ್ರಿಯಾಶೀಲತೆ, ಸೃಜನಶೀಲತೆಗೆ ಮುಕ್ತ ಅಭಿವ್ಯಕ್ತಿಯೇ ರಹದಾರಿಯಾಗಿದೆ. ಈ ನಿಟ್ಟಿನಲ್ಲಿ ಮಕ್ಕಳನ್ನು ರೂಪಿಸಬೇಕಾಗಿದೆ ಎಂದು ಲೇಖಕಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಡಾ.ಧರಣಿದೇವಿ ಮಾಲಗತ್ತಿ ಹೇಳಿದರು.


ನಟನ ರಂಗಶಾಲೆಯ ವತಿಯಿಂದ ಕಲಾಮಂದಿರದಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ‘ರಜಾ ಮಜಾ’ ಬೇಸಿಗೆ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು.


ಈಗಿನ ಪಠ್ಯಕ್ರಮ ಮತ್ತು ಸಮಾಜದ ಕಟ್ಟುಪಾಡುಗಳಿಂದ ಮುಕ್ತ ಅಭಿವ್ಯಕ್ತಿ ಸಾಧ್ಯವಾಗುತ್ತಿಲ್ಲ. ನಾಟಕ, ಜಾನಪದ ಸೇರಿದಂತೆ ಇನ್ನಿತರ ಪ್ರದರ್ಶನ ಕಲೆಗಳ ಮೂಲಕ ಮುಕ್ತ ಅಭಿವ್ಯಕ್ತಿ ಮಕ್ಕಳಲ್ಲಿ ಹೊರಹೊಮ್ಮಲು ಸಾಧ್ಯವಾಗುತ್ತದೆ. ಬಾಲ್ಯದಲ್ಲಿ ಕಲಿತ ಅಭಿರುಚಿಯೇ ಕೊನೆಯವರೆಗೂ ಉಳಿಯಲಿದೆ ಎಂದರು.


ಬೇಸಿಗೆ ಶಿಬಿರದಲ್ಲಿ ಏನೇನು ಕಲಿಸಬೇಕು ಅನ್ನುವುದನ್ನು ನೋಡಿ ವಿವೇಕದಿಂದ ಯೋಚನೆ-ಯೋಜನೆ ಮಾಡಿ ಕಲಿಸಿದಾಗ ಮಾತ್ರ ಮಕ್ಕಳಿಗೆ ಸರಿಯಾಗಿ ತಲುಪಲು ಸಾಧ್ಯ. ನಟನೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಜಾನಪದ ಕಲೆಗಳನ್ನು ಸಂಸ್ಕೃತಿಯ ಮೂಲಕ ಉಳಿಸುವ ಕೆಲಸ ಮಾಡಬೇಕು ಎಂದರು.

ನಟನ ರಂಗಶಾಲೆ ಸಂಸ್ಥಾಪಕ ಅಧ್ಯಕ್ಷರಾಗಿದ್ದ ಎನ್.ಸುಬ್ರಹ್ಮಣ್ಯಂ ಅವರ ಗೌರವಾರ್ಥ ವೃತ್ತಿ ರಂಗಭೂಮಿಯ ಹಿರಿಯ ನಟಿ ಎಚ್.ಟಿ.ಇಂದಿರಮ್ಮ ಅವರಿಗೆ ‘ನಟನ ಪುರಸ್ಕಾರ’ ಪ್ರದಾನ ಮಾಡಲಾಯಿತು.

ನಟರಾದ ಕುರಿ ಪ್ರತಾಪ್, ಸುದರ್ಶನ್ ರಂಗಪ್ರಸಾದ್, ಸಂಗೀತಾ ಭಟ್, ನಟನ ಅಧ್ಯಕ್ಷ ಕೆ.ಎಸ್.ಆನಂದ್ ಬಾಬು, ನಟನದ ಮುಖ್ಯಸ್ಥ ಮಂಡ್ಯ ರಮೇಶ್, ಶಿಬಿರದ ಸಂಚಾಲಕಿ ದಿಶಾ ರಮೇಶ್, ಸಂಯೋಜಕ ಮೇಘ ಸಮೀರ, ನಟನ ವ್ಯವಸ್ಥಾಪಕ ರಾಮು ನಟನ ಇನ್ನಿತರರಿದ್ದರು


ಬಳಿಕ ಶಿಬಿರಾರ್ಥಿ ಮಕ್ಕಳಿಂದ ರಂಗ ಗೀತೆಗಳು, ಕಂಸಾಳೆ, ಯಕ್ಷಗಾನ, ಕಂಗೀಲು, ಡೊಳ್ಳು ಕುಣಿತ, ಮಲ್ಲಕಂಬ, ನಾಟಕ ಪ್ರಸ್ತುತಗೊಂಡಿತು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net