ಸ್ಪರ್ಧಾತ್ಮಕ ಪರೀಕ್ಷೆಗೆ ಉಚಿತ ತರಬೇತಿ: ಕೃಷಿಕ್ ಸರ್ವೋದಯ ಟ್ರಸ್ಟ್ ಕಾರ್ಯಾಧ್ಯಕ್ಷ ಡಾ.ರಾಮಲಿಂಗಯ್ಯ ಮಾಹಿತಿ

23_12_Mdy_01(Krushika Trust)
Published on

ಮಂಡ್ಯ: ಮಂಡ್ಯ ಕೃಷಿಕ್ ಸರ್ವೋದಯ ಟ್ರಸ್ಟ್‌ನಿಂದ ಡಿ.25ರಿಂದ ಹತ್ತು ಭಾನುವಾರ ಮತ್ತು ಸರ್ಕಾರಿ ರಜಾ ದಿನದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತವಾಗಿ ಫೌಂಡೇಷನ್ ಕೋರ್ಸ್(ಬುನಾದಿ ತರಬೇತಿ) ತರಗತಿ ಆಯೋಜಿಸಲಾಗಿದೆ ಎಂದು ಎಂದು ಟ್ರಸ್ಟ್‌ನ ಕಾರ್ಯಾಧ್ಯಕ್ಷ ಡಾ.ರಾಮಲಿಂಗಯ್ಯ ತಿಳಿಸಿದರು.

ಜಿಲ್ಲೆಯ ಪದವಿ ಮತ್ತು ಸ್ನಾತಕೋತ್ತರ ಪದವಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಆಸಕ್ತ ವಿದ್ಯಾರ್ಥಿಗಳು ಮತ್ತು ಪದವೀಧರ ಅಭ್ಯರ್ಥಿಗಳು ತರಬೇತಿ ಪಡೆದುಕೊಳ್ಳಬಹುದು. ತರಬೇತಿ ದಿನಗಳಂದು ಮಧ್ಯಾಹ್ನದ ಊಟದ ವ್ಯವಸ್ಥೆಯನ್ನೂ ಮಾಡಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕಳೆದ 25 ವರ್ಷದಿಂದ ಜಿಲ್ಲೆಯ ಯುವಕ, ಯುವತಿಯರಿಗೆ ಐಎಎಸ್, ಐಪಿಎಸ್, ಐಎಫ್‌ಎಸ್ ಮತ್ತು ಕೆಎಎಸ್, ಕೆಎಸ್‌ಪಿಎಸ್, ಬ್ಯಾಂಕಿಂಗ್ ಹಾಗೂ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ತರಬೇತಿ ಜತೆಗೆ ಮಾರ್ಗದರ್ಶನ ನೀಡಲಾಗಿದೆ. ಈವರೆಗೆ ಸಂಸ್ಥೆಯಲ್ಲಿ 10 ಸಾವಿರಕ್ಕೂ ಹೆಚ್ಚು ಜನ ತರಬೇತಿ ಪಡೆದಿದ್ದು, 800ಕ್ಕೂ ಹೆಚ್ಚು ವಿವಿಧ ಸರ್ಕಾರಿ ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.

ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆ ಅಭ್ಯರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿ, ಉನ್ನತ ಹುದ್ದೆಗಳನ್ನು ಅಲಂಕರಿಸಬೇಕೆಂಬುದು ಮಂಡ್ಯ ಕೃಷಿಕ್ ಸರ್ವೋದಯ ಟ್ರಸ್ಟ್‌ನ ಆಶಯ. ಆದ್ದರಿಂದ ಹಳ್ಳಿಗೊಬ್ಬ ಐಎಎಸ್/ಕೆಎಎಸ್ ಅಧಿಕಾರಿ ಘೋಷವಾಕ್ಯದೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ಕೆಲಸವನ್ನು ಟ್ರಸ್ಟ್ ಮಾಡುತ್ತಿದೆ. ಇದರ ಭಾಗವಾಗಿ ಡಿ.25ರಿಂದ ಫೌಂಡೇಷನ್ ಕೋರ್ಸ್ ತರಗತಿಗಳನ್ನು ಆಯೋಜಿಸಲಾಗಿದೆ. ಮಾರ್ಚ್‌ವರೆಗೆ ಉಚಿತವಾಗಿ ತರಬೇತಿ ನೀಡಲಾಗುತ್ತದೆ. ಅಗತ್ಯವಿದ್ದರೆ ತರಗತಿಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು. ಮಾರ್ಚ್ ನಂತರ ನಿರ್ವಹಣಾ ವೆಚ್ಚಕ್ಕೆಂದು ಕಡಿಮೆ ಪ್ರಮಾಣದ ಶುಲ್ಕ ಪಡೆದು ರೆಗ್ಯುಲರ್ ಕ್ಲಾಸ್‌ಗಳನ್ನು ನಡೆಸಲಾಗುವುದು. 25ರಂದು ಬೆಳಗ್ಗೆ 10ಕ್ಕೆ ತರಬೇತಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಟ್ರಸ್ಟ್‌ನ ಅಧ್ಯಕ್ಷ ಟಿ.ತಿಮ್ಮೇಗೌಡ ಅಧ್ಯಕ್ಷತೆ ವಹಿಸುವರು. ಜಿಲ್ಲಾಧಿಕಾರಿ ಡಾ.ಎಚ್.ಎನ್. ಗೋಪಾಲಕೃಷ್ಣ, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್. ನಾಗರಾಜು, ಜಿಪಂ ಸಿಇಒ ಶಾಂತಾ ಎಲ್.ಹುಲ್ಮನಿ ಸೇರಿದಂತೆ ಹಲವು ಗಣ್ಯರು ಭಾಗವಹಿಸುವರು ಎಂದು ತಿಳಿಸಿದರು.

ಟ್ರಸ್ಟ್‌ನ ಕಾರ್ಯದರ್ಶಿ ಎ.ಎಂ. ಅಣ್ಣಯ್ಯ ಮಾತನಾಡಿ, ವಿಷಯ ತಜ್ಞರು, ಸಂಪನ್ಮೂಲ ವ್ಯಕ್ತಿಗಳು ತರಬೇತಿ ನೀಡಲಿದ್ದಾರೆ. ನಗರದ ಆದರ್ಶ ವಿದ್ಯಾಸಂಸ್ಥೆ ಹಿಂಭಾಗದ ಕೆಎಚ್‌ಬಿ ಕಾಲನಿಯಲ್ಲಿನ ಟ್ರಸ್ಟ್‌ನ ವೃತ್ತಿ ಮಾರ್ಗದರ್ಶನ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರದಲ್ಲಿ ತರಗತಿ ನಡೆಯಲಿವೆ. ಆಸಕ್ತರು ಮೊ.9902241722, 9448019306 ಸಂಪರ್ಕಿಸಬಹುದು ಎಂದರು.

ಸಂಯೋಜಕ ಡಾ.ಕೆ.ಬಿ. ಬೋರಯ್ಯ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net