ಬೆಳೆಗಾರರಿಗೆ ಉಚಿತ ವಿದ್ಯುತ್ ಮರೀಚಿಕೆ

Free electricity for growers
Published on

ಮಡಿಕೇರಿ:

10 ಹೆಚ್‌ಪಿ ಒಳಗಿನ ವಿದ್ಯುತ್ ಪಂಪ್‌ಸೆಟ್ ಬಳಸುವವರು ಸೇರಿದಂತೆ ಕಾಫಿ ಬೆಳೆಗಾರರು ಬಾಕಿ ಉಳಿಸಿಕೊಂಡಿರುವ ವಿದ್ಯುತ್ ಬಿಲ್ ಪಾವತಿಸುವಂತೆ ಸೆಸ್ಕ್ ಸೂಚನೆ ನೀಡಿದೆ. ತಪ್ಪಿದಲ್ಲಿ ಸಂಪರ್ಕ ಕಡಿತಗೊಳಿಸುವ ಎಚ್ಚರಿಕೆಯನ್ನೂ ನೀಡಿದೆ. 10 ಹೆಚ್‌ಪಿ ಒಳಗಿನ ವಿದ್ಯುತ್ ಪಂಪ್‌ಸೆಟ್‌ಗಳ ಬಳಕೆದಾರÀ ಕಾಫಿ ಬೆಳೆಗಾರರಿಗೆ ಡಿಬಿಟಿ ಮೂಲಕ ಹಣ ಮರುಪಾವತಿ ಮಾಡುವುದಾಗಿ ಹೇಳಲಾಗುತ್ತಿದ್ದರೂ ಈ ಬಗ್ಗೆ ಬೆಳೆಗಾರರಿಗೆ ನಂಬಿಕೆ ಇಲ್ಲ. ಹಾಗಾಗಿ ಸೆಸ್ಕ್ ಸೂಚನೆ ವಿರುದ್ಧ ಬೆಳೆಗಾರರಿಂದ ಆಕ್ರೋಶ ವ್ಯಕ್ತವಾಗುತ್ತಿದೆ.

10 ಹೆಚ್‌ಪಿ ತನಕದ ವಿದ್ಯುಚ್ಚಕ್ತಿ ಪಂಪ್‌ಸೆಟ್ ಹೊಂದಿರುವ ಕಾಫಿ ಬೆಳೆಗಾರರನ್ನು ಎಲ್‌ಟಿ 4 ಸಿ ನಿಂದ ಎಲ್‌ಟಿ 4 ಎ ಗೆ ಸೇರ್ಪಡೆಗೊಳಿಸಿ, ಉಚಿತ ವಿದ್ಯುತ್ ಸೌಲಭ್ಯ ಕೊಡಬೇಕು. 10 ಹೆಚ್.ಪಿ.ವರೆಗಿನ ವಿದ್ಯುಚ್ಚಕ್ತಿ ಪಂಪ್‌ಸೆಟ್ ಬಳಕೆದಾರರ ಬಾಕಿ ಹಣ ಸಂಪೂರ್ಣವಾಗಿ ಮನ್ನಾ ಮಾಡಬೇಕು. 10 ಹೆಚ್.ಪಿ.ಗೂ ಹೆಚ್ಚಿನ ವಿದ್ಯುಚ್ಚಕ್ತಿ ಪಂಪ್‌ಸೆಟ್ ಹೊಂದಿರುವ ಬೆಳೆಗಾರರಿಗೆ ಬಾಕಿಯನ್ನು ಬಡ್ಡಿ ರಹಿತವಾಗಿ ಕಂತುಗಳ ರೂಪದಲ್ಲಿ ಪಾವತಿಸಲು ಅನುಕೂಲ ಮಾಡಿಕೊಡಬೇಕು ಎನ್ನುವುದು ಕಾಫಿ ಬೆಳೆಗಾರರ ಬಹು ವರ್ಷಗಳ ಬೇಡಿಕೆ.

ಈ ಸಂಬAಧ ಬೆಳೆಗಾರ ಸಂಘಟನೆಗಳು ಮತ್ತು ಕಾಪಿ ಬೆಳೆಗಾರರು ಹಲವು ಬಾರಿ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಈ ಹಿಂದೆ ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದ ಸಂದರ್ಭದಲ್ಲಿ ಕಾಫಿ ಬೆಳೆಗಾರರಿಗೆ ಉಚಿತ ವಿದ್ಯುತ್ ಬಗ್ಗೆ 2022 ಮಾ. 22ರಂದು ಸದನದಲ್ಲೇ ಭರವಸೆ ಕೊಟ್ಟಿದ್ದರು. ‘ಇಂಧನ ಸಚಿವರು, ಅಧಿಕಾರಿಗಳ ಜೊತೆಗೆ ಚರ್ಚೆ ಮಾಡಲಾಗಿದೆ. 10 ಹೆಚ್.ಪಿ. ತನಕ ಬೇರೆ ರೈತರಿಗೆ ಉಚಿತ ವಿದ್ಯುತ್ ಕೊಡುವಂತೆ ಕಾಫಿ ಬೆಳೆಗಾರರಿಗೂ ಕೊಡಲು ನಮ್ಮ ಸರಕಾರ ಸಿದ್ಧವಿದೆ. 10 ಹೆಚ್.ಪಿ. ತನಕ ಕಾಫಿ ಬೆಳೆಗಾರರಿಗೆ ಸಬ್ಸಿಡಿ ಕೊಡಲು ಸÀರ್ಕಾರ ತೀರ್ಮಾನ ಮಾಡಿದೆ ಎಂದಿದ್ದರು. ಆದರೆ ಈಗ ಕಾಫಿ ಬೆಳೆಗಾರರು ಬಾಕಿ ಪಾವತಿಸುವಂತೆ ಸೆಸ್ಕ್ ಸೂಚಿಸಿರುವುದು ಬೆಳೆಗಾರರ ಆಕ್ರೋಶಕ್ಕೆ ಕಾರಣವಾಗಿದೆ. ಡಿಬಿಟಿ ಮೂಲಕ ಶುಲ್ಕ ಮರುಪಾವತಿಗೂ ವಿರೋಧ ವ್ಯಕ್ತವಾಗುತ್ತಿದೆ. ಈ ಬಗ್ಗೆ ವಿಜಯವಾಣಿ ಓದುಗರು ಹಂಚಿಕೊAಡ ಅಭಿಪ್ರಾಯಗಳು ಇಲ್ಲಿದೆ.

ಕೊಡಗಿನಲ್ಲಿ ರೈತರೇ ಕಾಫಿ ಬೆಳೆಯುತ್ತಿರುವುದು. ಕಾಫಿ ಉದ್ದಿಮೆಯಿಂದ ಸಾವಿರಾರು ಕೋಟಿ ರೂ. ಆದಾಯ, ವಿದೇಶಿ ವಿನಿಮಯ, ಹಾಗೂ ತೆರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಬರುತ್ತಿದೆ. ಅಕಾಲಿಕ ಮಳೆ, ಬರಗಾಲದಿಂದ ಸಂಕಷ್ಟದಲ್ಲಿರುವ ಸಣ್ಣ ಕಾಫಿ ಬೆಳೆಗಾರರ 10 ಹೆಚ್.ಪಿ. ಪಂಪ್‌ಸೆಟ್‌ಗಳಿಗೆ ಷರತ್ತಿಲ್ಲದೆ ಉಚಿತ ವಿದ್ಯುತ್ ಕೊಡಲೇಬೇಕು. ರೈತರ ವಿದ್ಯುತ್ ಬಿಲ್ ಬಾಕಿ ಮನ್ನಾ ಮಾಡಬೇಕು. ತಪ್ಪಿದಲ್ಲಿ ಸರ್ಕಾರದ ವಿರುದ್ಧ ನಿರಂತರ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ.
ಕೆ.ಎಂ. ದಿನೇಶ್, ಅಧ್ಯಕ್ಷ, ರಾಜ್ಯ ರೈತ ಸಂಘ, ಸೋಮವಾರಪೇಟೆ ತಾಲೂಕು

ಬಿಜೆಪಿ ಸರ್ಕಾರವಿದ್ದಾಗ ಕೆಲವು ಷರತ್ತುಗಳನ್ನು ವಿಧಿಸಿ, ಸಣ್ಣ ಕಾಫಿ ಬೆಳೆಗಾರರಿಗೆ ಉಚಿತ ವಿದ್ಯುತ್ ನೀಡಲು ಅಧಿವೇಶನದಲ್ಲಿ ಒಪ್ಪಿಗೆ ನೀಡಿದೆ. ಇದುವರೆಗೆ ಉಚಿತ ವಿದ್ಯುತ್ ನೀಡುವ ಬಗ್ಗೆ ಅಧಿಕೃತ ಅದೇಶ ಬಂದಿಲ್ಲ. ಸೆಸ್ಕ್ ನವರು ಬಡ್ಡಿ, ಚಕ್ರಬಡ್ಡಿ, ಮಿನಿಮಂ ಎಲ್ಲವನ್ನೂ ಹಾಕಿ ಕೆಲ ರೈತರ ವಿದ್ಯುತ್ ಬಿಲ್ ಲಕ್ಷ ರೂ. ದಾಟಿದೆ. ಪಂಪ್‌ಸೆಟ್ ಉಪಯೋಗಿಸುವ ವಿದ್ಯುತ್ ರೈತರು ತಿಂದಿಲ್ಲ. ನೀರು ಹೊಡೆದು ಕಾಫಿ ಗಿಡಗಳನ್ನು ಉಳಿಸಿಕೊಂಡಿದ್ದಾರೆ. ಉತ್ಪಾದನೆ ಹೆಚ್ಚಿಸಿದ್ದಾರೆ. ವಿದ್ಯುತ್ ಬಿಲ್ ಮನ್ನಾ ಮಾಡಬೇಕು.
ಜಿ.ಎಸ್. ಮಧುಕುಮಾರ್, ಕೃಷಿಕ, ಶಾಂತಳ್ಳಿ ಗ್ರಾಮ

ಕೊಡಗು ಹೊರತುಪಡಿಸಿ ಬೇರೆ ಜಿಲ್ಲೆಗಳಲ್ಲಿ ರೈತರಿಗೆ 10 ಹೆಚ್.ಪಿ. ಒಳಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಈ ಕುರಿತು ನಿರಂತರ ಹೋರಾಟದ ಫಲವಾಗಿ ಕಾಫಿ ಬೆಳೆಗಾರರಿಗೂ ಉಚಿತ ವಿದ್ಯುತ್ ನೀಡಲಾಗುವುದು ಎಂದು ಸÀರ್ಕಾರದ ಒಪ್ಪಿದೆ. ಸÀರ್ಕಾರ ನೇರವಾಗಿ ಸೆಸ್ಕ್ಗೆ ಬಾಕಿ ಹಣ ಪಾವತಿ ಮಾಡಲಿ. ಅದು ಬಿಟ್ಟು ರೈತರು ಹಣವನ್ನು ಕಟ್ಟಿ ಪುನಃ ಅದನ್ನು ಡಿಬಿಟಿ ಮೂಲಕ ನೀಡುವುದು ಯಾಕೆ? ಈ ಹಿಂದೆ ಡಿಬಿಟಿಯಲ್ಲಿ ಕಟ್ಟಿದ ಕೆಲವು ರೈತರಿಗೆ ಹಣ ವಾಪಸ್ ಸಿಕ್ಕಿಲ್ಲ. ಸುಖಾಸುಮ್ಮನೆ ರೈತರ ವಿದ್ಯುಚ್ಛಕ್ತಿ ನಿಲುಗಡೆಗೆ ಮುಂದಾದರೆ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ.

ಕಾಡ್ಯಮಾಡ ಮನು ಸೋಮಯ್ಯ, ಅಧ್ಯಕ್ಷ, ರೈತ ಸಂಘ, ಕೊಡಗು

ಬೇಸಿಗೆಯಲ್ಲಿ ರೈತರು ಕೃತಕ ನೀರಾವರಿ ವ್ಯವಸ್ಥೆಗೆ ಮೊರೆ ಹೋಗುತ್ತಾರೆ. ಇಂತಹ ಸಂದರ್ಭದಲ್ಲಿ ಬೇರೆ ಜಿಲ್ಲೆಯಲ್ಲಿ ಇರುವಂತೆ ಕಾಫಿ ಬೆಳೆಗಾರರಿಗೂ ಉಚಿತ ವಿದ್ಯುತ್ ನೀಡಿದರೆ ಒಳ್ಳೆಯದಿತ್ತು. ಅದರೆ ಆ ಬಗ್ಗೆ ಚಿಂತನೆ ನಡೆಸದೆ. ಉಳಿದ ಬಿಲ್ ಪಾವತಿಸಲು ಒತ್ತಡ ಹೇರುತ್ತಿರುವುದು ಸರಿಯಲ್ಲ. ಇದು ರೈತರಿಗೆ ಹೊರೆಯಾಗಲಿದೆ.

ಮನೆಯಪಂಡ ಶೀಲಾ ಬೋಪಣ್ಣ. ಪ್ರಾಂಶುಪಾಲರು, ಕುಂದ

ಸೆಸ್ಕ್ ಕಾರ್ಯನಿರ್ವಾಹಕÀ ಎಂಜಿನಿಯರ್ ಎಚ್ಚರಿಕೆ ಕೊಡಗು ಜಿಲ್ಲೆಯ ರೈತರನ್ನು ಕೆಣಕುವಂತಿದೆ. ಒಂದೆಡೆ ಸಕಾಲಕ್ಕೆ ಮಳೆ ಬಾರದೆ ಅನಾವೃಷ್ಟಿ ಕಂಡAತಹ ರೈತರು ಕಂಗಾಲಾಗಿದ್ದು, ಸೆಸ್ಕ್ ಎಂಜಿನಿಯರ್ ಎಚ್ಚರಿಕೆ ಮರ್ಮಾಘಾತವನ್ನು ನೀಡಿದೆ. ರೈತರ ಹತ್ತು ಹೆಚ್.ಪಿ. ಮೋಟಾರಿನ ವಿದ್ಯುತ್ ಶಕ್ತಿಯನ್ನು ಉಚಿತವಾಗಿ ಕೊಡಬೇಕೆನ್ನುವ ಸರ್ಕಾರದ ಭರವಸೆ ಕೇವಲ ಭರವಸೆಯಾಗಿ ಉಳಿಯುವುದೇ ಎಂಬ ಸಂಶಯ ಬಲವಾಗಿ ಮೂಡಿಬರುತಿದೆ. ಜಿಲ್ಲೆಯ ರೈತರು ಕೂಡಲೇ ಎಚ್ಚೆತ್ತುಕೊಂಡು ಅಧಿಕಾರಿಗಳ ಈ ನಡೆಯ ಬಗ್ಗೆ ಪ್ರತಿಭಟಿಸಬೇಕಾಗಿದೆ ಮತ್ತು ಅನಿವಾರ್ಯವಾದರೆ ಚಳವಳಿಯನ್ನು ಹಮ್ಮಿಕೊಳ್ಳಬೇಕಾಗಿದೆ.

ಮುಂಡAಡ ಸಿ. ನಾಣಯ್ಯ, ನಿವೃತ್ತ ಸಹಾಯಕ ಮಹಾ ಪ್ರಬಂಧಕ, ನಬಾರ್ಡ್

ಕಾಫಿ ಬೆಳೆಗಾರರ ನೀರಾವರಿ ಪಂಪ್‌ಸೆಟ್ ಬಾಕಿಗೆ ಸಂಬAಧಿಸಿದAತೆ ಮಡಿಕೇರಿ ವಿಭಾಗದ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಎಚ್ಚರಿಕೆ ಒಂದು ದುರಂತ. ನಾವು ಬೆಳೆಗಾರರು ಸ್ಥಳೀಯ ಶಾಸಕರನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚಿಸಿ ಮುಂದಿನ ಹೋರಾಟಕ್ಕೆ ಸಿದ್ಧತೆ ಮಾಡಿಕೊಳ್ಳ ಬೇಕಾಗುತ್ತದೆ. ಕಾಫಿ ಬೆಳೆಗಾರರಿಗೆ ಉಚಿತ ವಿದ್ಯುತ್ ಕೊಡುವ ಸರ್ಕಾರದ ಭರವಸೆ ಮಧ್ಯೆ ಈ ಸೂಚನೆ ಬರಸಿಡಿಲು ಬಡಿದಂತಾಗಿದೆ. ಬರ ಪ್ರದೇಶ ಎಂದು ಘೋಷಣೆ ಮಾಡಿ ಈ ರೀತಿಯ ಆದೇಶ ಸರಿ ಅಲ್ಲ.

ವೀರೇಂದ್ರ ಕುಮಾರ್. ಕಾಫಿ ಬೆಳೆಗಾರ, ಹಂಡ್ಲಿ

ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸÀರ್ಕಾರ ಹತ್ತು ಎಚ್.ಪಿ.ವರೆಗೆ ಉಚಿತ ವಿದ್ಯುತ್ ನೀಡಿರುವುದು ಸ್ವಾಗತಾರ್ಹ. ಇದನ್ನು ಸÀರ್ಕಾರ ಕಾಫಿ ಬೆಳೆಗಾರರಿಗೂ ಮುಂದುವರಿಸಬೇಕು. ಇದರಿಂದ ಸಣ್ಣ ಹಿಡುವಳಿದಾರರಿಗೆ ಬಹಳ ಉಪಯೋಗವಾಗುತ್ತದೆ. ಅವರ ಆದಾಯವೂ ದ್ವಿಗುಣಗೊಳ್ಳಲು ಇದು ಸಹಕಾರಿಯಾಗಿದೆ. ಇಂಥ ಬರಗಾಲದಲ್ಲಿ ಸರ್ಕಾರ ರೈತರ ಮೇಲೆ ಈ ರೀತಿಯ ಆರ್ಥಿಕ ಹೊಡೆತ ನೀಡಬಾರದು ಎಂದು ಮನವಿ ಮಾಡಿಕೊಳ್ಳುತ್ತೇನೆ.

ತೇಜಾ, ರೈತ ಮಹಿಳೆ, ಹೆಬ್ಬಾಲೆ

ಕಾಫಿ ಬೆಳೆಗಾರರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಇನ್ನೂ ಮರೀಚಿಕೆಯೇ ಆಗಿದೆ. ತಾವು ಬಳಸಿದ ವಿದ್ಯುತ್‌ಗೆ ಬಿಲ್ ಪಾವತಿಸಲೇಬೇಕಾದ ಅನಿರ್ವಾಯತೆ ಬೆಳೆಗಾರರದ್ದು. ಕಾಫಿ ತೋಟದ ವಿದ್ಯುತ್ ಪಂಪ್‌ಸೆಟ್‌ಗಳ ಬಿಲ್ ಪಾವತಿಸದ ರೈತರಿಗೆ ಸೆಸ್ಕ್ ಕಿರುಕುಳ ನೀಡಿದರೆ ಉಗ್ರ ಹೋರಾಟ ಮಾಡಲಾಗುವುದು ಇದರ ಬಗ್ಗೆ ಮುಂದಿನ ದಿನಗಳಲ್ಲಿ ಸಿದ್ದಾಪುರದಲ್ಲಿ ಸಭೆಯನ್ನು ಕೂಡ ಆಯೋಜನೆ ಮಾಡಲು ತೀರ್ಮಾನಿಸಲಾಗಿದೆ.

ಪ್ರವೀಣ್ ಬೋಪಣ್ಣ, ತಾಲೂಕು ರೈತ ಸಂಘ, ವಿರಾಜಪೇಟೆ

ಹೆಚ್.ಪಿ. ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಅಥವಾ ಡಿಬಿಟಿ ಬಗ್ಗೆ ಸರ್ಕಾರದಿಂದ ಯಾವುದೇ ಸ್ಪಷ್ಟ ನಿರ್ದೇಶನಗಳು ಬಂದಿಲ್ಲ. ನಾವು ಕೂಡ ಇದಕ್ಕಾಗಿ ಕಾದಿದ್ವಿ. ಇಲಾಖೆಯಿಂದ ಯಾವ ರೀತಿಯ ಸ್ಪಷ್ಟನೆಗಳೂ ಸಿಕ್ಕಿಲ್ಲ. ಸರ್ಕಾರದ ನಿರ್ಧಾರಗಳೂ ಪ್ರಕಟವಾಗಿಲ್ಲ. ಡಿಬಿಟಿ ಬಗ್ಗೆಯೂ ಯಾವುದೇ ಕ್ರಮಗಳು ಆಗಿಲ್ಲ. ಬಹುತೇಕ ಬೆಳೆಗಾರರು ನಾಲ್ಕು ವರ್ಷಗಳಿಂದ ಬಿಲ್ ಬಾಕಿ ಉಳಿಸಿಕೊಂಡಿದ್ದಾರೆ. ದೊಡ್ಡ ಮೊತ್ತ ನಮಗೆ ಬರಬೇಕಿದೆ. ಹಾಗಾಗಿ ಬಿಲ್ ವಸೂಲಾತಿಗೆ ನಿಯಮಾನುಸಾರ ಕ್ರಮ ತೆಗೆದುಕೊಳ್ಳಲಾಗುತ್ತಿದೆ.

ಅನಿತಾ ಬಾಯಿ, ಕಾರ್ಯನಿರ್ವಾಹಕ ಎಂಜಿನಿಯರ್, ಸೆಸ್ಕ್, ಮಡಿಕೇರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net