

ಹುಕ್ಕೇರಿ: ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘದ ೫೬ನೇ ವಾರ್ಷಿಕ ಮಹಾಸಭೆ ಶನಿವಾರ ಸದಸ್ಯರ ಗದ್ದಲ-ಗಲಾಟೆಗಳ ನಡುವೆ ಗೊಂದಲದ ಗೂಡಾಗಿ ಅಂತ್ಯಗೊಂಡಿತು.
ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಪಾಟೀಲ ಮಾತನಾಡಿ, ರಾಜ್ಯ ಸರ್ಕಾರ ಗೃಹಜ್ಯೋತಿ ಯೋಜನೆಯಡಿ ಸಂಘದ ವ್ಯಾಪ್ತಿಯಲ್ಲಿ ೮೯,೦೦೩ ಗ್ರಾಹಕರು ಉಚಿತ ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ದಾರೆ. ಸಂಘ ಪ್ರಸಕ್ತ ಸಾಲಿನಲ್ಲಿ ೨೭೨.೯೬ ಕೋಟಿ ರೂ. ಮೊತ್ತದ ವಿದ್ಯುತ್ ಖರೀದಿಸಿ ೩೨೦.೩೬ ಕೋಟಿ ರೂ. ಮಾರಾಟ ಮಾಡಿದ್ದು, ೪೭.೪೦ ಕೋಟಿ ರೂ. ಉಳಿತಾಯವಾಗಿದೆ. ವಿದ್ಯುತ್ ಪರಿವರ್ತಕ ಮತ್ತು ಸಾಮಗ್ರಿಗಳು ೧೧ ಕೆವಿ ಲೈನ್, ಕಟ್ಟಡಗಳು ಸೇರಿ ೧೫೨.೦೩ ಕೋಟಿ ರೂ. ಆಸ್ತಿ ಇದ್ದು, ಒಟ್ಟು ೧೭೬.೫೧ ಕೋಟಿಯಷ್ಟಾಗಿದ್ದು, ೨೪.೪೮ ಕೋಟಿ ರೂ. ಆಸ್ತಿ ಹೆಚ್ಚಳವಾಗಿದೆ. ಸಂಘ ಹೆಸ್ಕಾಂಗೆ ೩೮೦.೩೧ ಕೋಟಿ ರೂ. ಪಾವತಿಸಬೇಕಿದ್ದು ಅದರಲ್ಲಿ ೧೯೮.೭೮ ಕೋಟಿ ರೂ. ಬಡ್ಡಿ ಆಕರಣೆ ಮಾಡಿದೆ. ಇದನ್ನು ಮನ್ನಾ ಮಾಡಲು ಪ್ರಸ್ತಾವ ಸಲ್ಲಿಸಲಾಗಿದೆ ಎಂದರು.
ಸ್ಥಾನಿಕ ಅಭಿಯಂತ ನೇಮಿನಾಥ ಖೆಮಲಾಪುರೆ ಮಾತನಾಡಿ, ಗೃಹಬಳಕೆ, ವಾಣಿಜ್ಯ, ಬೀದಿದೀಪ, ಕುಡಿಯುವ ನೀರು ಪೂರೈಕೆಗಳಿಗೆ ಒಟ್ಟು ೨,೩೨೬ ಹಾಗೂ ೩ ಎಚ್.ಟಿ. ಜೋಡಣೆಗಳಿಗೆ ವಿದ್ಯುತ್ ಸಂಪರ್ಕ ಒದಗಿಸಲಾಗಿದೆ ಎಂದರು.
ಸರ್ವಾನುಮತದಿಂದ ಒಪ್ಪಿಗೆ: ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘದ ಹೆಸರನ್ನು ಅಪ್ಪಣ್ಣಗೌಡ ಪಾಟೀಲ ಗ್ರಾಮೀಣ ವಿದ್ಯುತ್ ಸಹಕಾರ ಸಂಘ ಎಂದು ಹೆಸರು ಬದಲಾಯಿಸಲು ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು.
ವ್ಯವಸ್ಥಾಪಕ ಡಿ.ಎಸ್.ನಾಯಿಕ, ಲೆಕ್ಕಪತ್ರ ಅಧಿಕಾರಿ ಎಸ್.ಎನ್.ಹಿರೇಮಠ, ಎಸ್.ಆರ್.ಮಲಗೌಡನವರ ವರದಿ ಓದಿದರು. ಸಂಘದ ಅಧ್ಯಕ್ಷ ಜಯಗೌಡ ಪಾಟೀಲ, ಸಂಘದ ಉಪಾಧ್ಯಕ್ಷ ವಿಷ್ಣು ರೇಡೇಕರ, ನಿರ್ದೇಶಕರಾದ ಶಶಿರಾಜ ಪಾಟೀಲ, ಕಲಗೌಡ ಪಾಟೀಲ, ಕೆಂಚಪ್ಪ ಬೆಣಚಿನಮರಡಿ, ಬಸಗೌಡ ಮಗೆಣ್ಣವರ, ಕುನಾಲ ಪಾಟೀಲ, ಜೋಮಲಿಂಗ ಪಟೋಳಿ, ರವೀಂದ್ರ ಅಸೂದೆ, ಈರಪ್ಪ ಬಂಜಿರಾಮಗೋಳ, ಸಂಗೀತಾ ದಪ್ಪಾಧೂಳಿ, ಶಿವಲೀಲಾ ಮಣಗುತ್ತಿ, ಸೋಮಲಿಂಗ ಪಾಟೀಲ, ಸಹಾಯಕ ಅಭಿಯಂತರ ಉದಯ ಮಗದುಮ್ಮ, ಮಾಜಿ ಸಚಿವ ಶಶಿಕಾಂತ ನಾಯಿಕ ಇತರರಿದ್ದರು.
ಗ್ರಾಹಕರ ದಾರಿ ತಪ್ಪಿಸಬೇಡಿ: ಚುನಾವಣೆ ಸಮೀಪದಲ್ಲಿರುವ ನಿಮಿತ್ತ ನೂತನ ಆಡಳಿತ ಮಂಡಳಿ ಪರಿವರ್ತಕ ತುರ್ತು ವಿತರಣೆ, ನೌಕರರ ಕಾಯಂ ನೇಮಕಾತಿ ಸೇರಿ ಹಲವು ಸುಳ್ಳು ಹೇಳುತ್ತಿದೆ. ಮೊದಲಿದ್ದ ಆಡಳಿತ ಮಂಡಳಿಯ ಕೆಲ ಸದಸ್ಯರು ವಿಶ್ವಾಸದ್ರೋಹ ಎಸಗಿದ್ದು, ಗ್ರಾಹಕರ ದಾರಿ ತಪ್ಪಿಸುತ್ತಿದ್ದಾರೆ ಎಂದು ಕೆಲ ಸದಸ್ಯರು ಆಕ್ಷೇಪಿಸಿದರು.
ಹಣ ಮರಳಿಸಬೇಕು: ಎಲಿಮುನ್ನೋಳಿಯ ಭೀಮಗೌಡ ಗಿರಿಗೌಡನವರ, ಜಿನಗೌಡ ಇಮಗೌಡನವರ ಮಾತನಾಡಿ, ನಿರಂತರ ಜ್ಯೋತಿ ಜಾರಿ ಮಾಡಿದ್ದೇವೆ ಎನ್ನುವುದಾದರೆ, ೫೦/೫೦ ಸ್ಕೀಂ ಮೂಲಕ ಯೋಜನೆ ಜಾರಿಮಾಡಿರುವುದೇಕೆ, ನಿರಂತರ ಯೋಜನೆಯಡಿ ತೋಟಪಟ್ಟಿಗಳಿಗೆ ಸಂಪರ್ಕ ಕಲ್ಪಿಸಲು ಸರ್ಕಾರ ಅನುದಾನ ನೀಡಿದೆ. ಈ ನಿಟ್ಟಿನಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸುವಾಗ ಜನರಿಂದ ತುಂಬಿಸಿಕೊಂಡ ಹಣವನ್ನು ಮರಳಿಸಬೇಕೆಂದು ಆಗ್ರಹಿಸಿದರು.