

ತರೀಕೆರೆ: ಉತ್ತಮ ನಿರ್ವಹಣೆ ಮೂಲಕ ಲಾಭದಲ್ಲಿರುವ ಮಲೆನಾಡು ಭಾಗದ ಸಹಕಾರ ಸಂಘಗಳು ಜಿಲ್ಲೆಗೆ ಮಾದರಿಯಾಗಿವೆ ಎಂದು ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಿ.ಎಸ್.ಸುರೇಶ್ ಹೇಳಿದರು.
ಪಟ್ಟಣದ ಖಾಸಗಿ ಸಭಾಂಗಣದಲ್ಲಿ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯೂನಿಯನ್, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಹಾಗೂ ಸಹಕಾರ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ದ 71ನೇ ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಹಕಾರಿ ಕ್ಷೇತ್ರಕ್ಕೆ ಯುವಕರ ಪ್ರವೇಶ ಬಲವರ್ಧನೆಯ ಸಂಕೇತವಾಗಿದೆ. ಕೇಂದ್ರ ಸರ್ಕಾರ ಪಾರದರ್ಶಕ ವ್ಯವಸ್ಥೆಗೆ ಒತ್ತು ನೀಡುವ ಸಲುವಾಗಿ ದೇಶದ ಎಲ್ಲ ಸಹಕಾರ ಸಂಘಗಳನ್ನು ಗಣಕೀಕೃತಗೊಳಿಸುತ್ತಿದೆ. ರೈತರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಲಾಗುತ್ತಿದ್ದು, ತಾಲೂಕಿನ 8 ಸಹಕಾರ ಸಂಘಗಳಿಗೆ ಎಂಐಸಿ ಯೋಜನೆಯಡಿ ಸಬ್ಸಿಡಿ ದರದಲ್ಲಿ ಸಾಲ ನೀಡಿ ಕಟ್ಟಡ ನಿರ್ಮಾಣಕ್ಕೆ ಸಹಕರಿಸಲಾಗಿದೆ ಎಂದರು.
ಶಾಸಕ ಜಿ.ಎಚ್.ಶ್ರೀನಿವಾಸ್ ಮಾತನಾಡಿ, ದೇಶದಲ್ಲಿ ಹೆಚ್ಚು ಹಾಲು ಉತ್ಪಾದನೆಯಾಗುತ್ತಿರುವುದಕ್ಕೆ ಸಹಕಾರ ಸಂಘಗಳು ಕಾರಣ. ಹಾಲು ಉತ್ಪಾದಕರ ಸಂಘದ ಮೂಲಕ ಮಹಿಳೆಯರು ಸ್ವಾವಲಂಬಿ ಬದುಕು ನಡೆಸುವಂತಾಗಿದೆ. ಸಹಕಾರ ಸಂಘಗಳ ಪ್ರಗತಿ ಕುರಿತು ಆತ್ಮಾವಲೋಕನ ನಡೆಸುವುದು ಅಗತ್ಯ. ತಾಲೂಕಿನ ಲಿಂಗದಹಳ್ಳಿ ಮತ್ತು ರಂಗೇನಹಳ್ಳಿ ಪಿಎಸಿಎಸ್‌ಗಳು ಉತ್ತಮವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಎಲ್ಲ ಸಹಕಾರ ಸಂಘಗಳು ಈ ಹಾದಿಯಲ್ಲಿ ಸಾಗಬೇಕಿದೆ ಎಂದು ಹೇಳಿದರು.
ಕರ್ನಾಟಕ ಸಹಕಾರ ವಸತಿ ಮಹಾಮಂಡಳದ ಮಾಜಿ ರಾಜ್ಯ ಉಪಾಧ್ಯಕ್ಷ ಟಿ.ವಿ.ಶಿವಶಂಕರಪ್ಪ, ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕರಾದ ಪಿ.ಶಶಿಕುಮಾರ್, ಟಿ.ಧನಪಾಲ್, ಹಾಸನ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ನಿರ್ದೇಶಕಿ ಎಚ್.ಟಿ.ಆಶಾ ಮತ್ತಿತರರಿದ್ದರು.