

ಮಂಡ್ಯ: ದಾನ ಮಾಡುವ ಕೆಲಸಗಳು ಚೈನ್ ಲಿಂಕ್‌ನಂತೆ ಬೆಳೆದುಕೊಂಡು ಹೋಗಲಿ ಎಂದು ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ ಹೇಳಿದರು.
ನಗರದ ರೆಡ್‌ಕ್ರಾಸ್ ಭವನದಲ್ಲಿ ಜಿವಿಕೆ ಸಂಸ್ಥೆ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವಿ.ವಿ ರಸ್ತೆ ಶಾಖೆ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಸರ್ಕಾರಿ ಶಾಲೆಗಳಿಗೆ ಲೇಖನ ಸಾಮಗ್ರಿ ಮತ್ತು ಪೀಠೋಪಕರಣಗಳ ಉಚಿತ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ನಡೆಯುತ್ತಿರುವ ದಾನದ ಕಾರ್ಯಕ್ರಮಗಳಿಗೆ ಹೊಸ ವ್ಯಾಖ್ಯಾನ ಕೊಡಬೇಕಾಗಿದೆ. ದಾನ ಮಾಡುವುದು ಮುಖ್ಯ. ಇದು ಒಬ್ಬರನ್ನು ನೋಡಿ ಇನ್ನೊಬ್ಬರು ಕಲಿಯಬೇಕಾಗಿದೆ. ಜತೆಗೆ ಒಬ್ಬರಿಂದ ಸಮಾಜ ಸೇವೆ ಮಾಡುವ ಬದಲು ಹತ್ತು ಜನರು ಸೇರಿ ಮಾಡಬೇಕು ಎಂದು ಸಲಹೆ ನೀಡಿದರು.
ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ನಿವೃತ್ತ ಮುಖ್ಯ ವ್ಯವಸ್ಥಾಪಕ ವಿಜಯರಾಜ್ ಮಾತನಾಡಿ, ಎಲ್ಲರೂ ತಮ್ಮ ಸಂಪಾದನೆ ಬಗ್ಗೆ ಚಿಂತಿಸುತ್ತಾರೆ. ಆದರೆ ಜಿವಿಕೆ ಸಂಸ್ಥೆಯ ಅಧ್ಯಕ್ಷ ವಾಸು ಅವರು ದಾನವನ್ನು ವೃತ್ತಿಯಾಗಿ ಮಾಡಿಕೊಂಡಿದ್ದಾರೆ. ತನ್ನ ಬೆವರಿನ ಫಲವನ್ನು ಬೇರೆಯವರಿಗೆ ಕೊಡುವುದು ಪುಣ್ಯದ ಕೆಲಸ. ವಾಸು ಅವರು ಕಳೆದ ಎಂಟು ವರ್ಷಗಳಿಂದ ಸಮಾಜದ ಎಲ್ಲ ಸ್ತರಗಳಿಗೂ ದಾನವನ್ನು ತಲುಪಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ವಕೀಲ ಮಧುಸೂದನ್ ಮಾತನಾಡಿ, ಜಿವಿಕೆ ಜಿಲ್ಲೆಯ ಕೊನೆಯ ಭಾಗದಲ್ಲಿರುವ ಸರ್ಕಾರಿ ಶಾಲೆಗಳನ್ನ ಗುರುತಿಸಿ ಅವರಿಗೆ ಬೇಕಾದ ಉಪಕರಣಗಳನ್ನು ಕೊಡುತ್ತಿದ್ದಾರೆ. ದೇಶದ ಭವಿಷ್ಯದ ದೃಷ್ಟಿಯಿಂದ ಮುಂದೆ ಸಹಾಯ ಮಾಡುವ ಮನೋಭಾವ ಬೆಳೆಯಬೇಕು. ವಿದ್ಯಾರ್ಥಿಗಳಿಗೆ ದಾನದ ಬಗ್ಗೆ ತಿಳಿಸಿಕೊಡುವ ಕೆಲಸವನ್ನು ಶಿಕ್ಷಕರು ಮಾಡಬೇಕು. ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳು ಉನ್ನತವಾಗಿ ಅಭಿವೃದ್ಧಿ ಹೊಂದಲು ಇಂತಹ ಕಾರ್ಯಕ್ರಮಗಳು ಅವಶ್ಯಕ. ಇವುಗಳಿಂದ ಸಮಾಜದಲ್ಲಿ ಕೊಡುಗೆಯಾಗಿ ಬೆಳೆಯಲು ಸಹಕಾರವಾಗುತ್ತದೆ ಎಂದರು.
ಸಾಹಿತಿ ತೈಲೂರು ವೆಂಕಟಕೃಷ್ಣ, ಜಿವಿಕೆ ಸಂಸ್ಥೆಯ ಅಧ್ಯಕ್ಷ ಆರ್.ವಾಸು, ಉಪಾಧ್ಯಕ್ಷ ಬಸವರಾಜು, ಸದಸ್ಯ ಸುನೀತಾಮಣಿ, ಯೋಗಾನಂದ ಪಟೇಲ್ ಇತರರಿದ್ದರು.