ಶಿವಪಾಡಿ, ಸರಳೇಬೆಟ್ಟು ಗ್ರಾಮ ದತ್ತು ಸ್ವೀಕಾರಕ್ಕೆ ನಿರ್ಧಾರ...

UDP-15-3-Prasad
Published on

ನೇತ್ರಾಲಯದ ಡಾ. ಕೃಷ್ಣಪ್ರಸಾದ್​ ಘೋಷಣೆ

200ಕ್ಕೂ ಅಧಿಕ ಮಂದಿಗೆ ಕನ್ನಡಕ ಉಚಿತ ವಿತರಣೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಕಳೆದ ಫೆಬ್ರವರಿಯಲ್ಲಿ ನಡೆದಿದ್ದ ಶಿವಪಾಡಿ ವೈಭವ ಉಡುಪಿಗೆ ಮಾತ್ರವಲ್ಲದೆ ರಾಜ್ಯಕ್ಕೇ ಮಾದರಿಯಾಗಿದ್ದು, ಬಡ ಜನತೆಗೆ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟ ಈ ಕಾರ್ಯಕ್ರಮ ಅತೀವ ಸಂತೋಷ ತಂದಿದೆ. ಮುಂದಿನ ದಿನಗಳಲ್ಲಿ ಶಿವಪಾಡಿ ಹಾಗೂ ಸರಳೇಬೆಟ್ಟು ಗ್ರಾಮವನ್ನು ದತ್ತು ತೆಗೆದುಕೊಳ್ಳಲು ನಿರ್ಧಾರ ಮಾಡಿದ್ದೇನೆ ಎಂದು ಉಡುಪಿಯ ಪ್ರಸಾದ್​ ನೇತ್ರಾಲಯದ ಡಾ. ಕೃಷ್ಣಪ್ರಸಾದ್​ ಘೋಷಿಸಿದರು.

ಶಿವಪಾಡಿಯ ರತ್ನ ಸಂಜೀವ ಕಲಾ ಮಂಡಲದಲ್ಲಿ ನೂರಾರು ಲಾನುಭವಿಗಳಿಗೆ ಉಚಿತ ಕನ್ನಡಕ ವಿತರಿಸಲು ಮಾ.15ರಂದು ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪತ್ರ ತಂದರೆ ಉಚಿತ ಸೇವೆ

ಶಿವಪಾಡಿ ಉಮಾಮಹೇಶ್ವರ ದೇಗುಲದ ಮೊಕ್ತೇಸರ ಮಹೇಶ್​ ಠಾಕೂರ್​ ಹಾಗೂ ಅವರ ತಂಡ ಅತ್ಯಂತ ಯಶಸ್ವಿಯಾಗಿ ಉತ್ಸವ ನಡೆಸಿಕೊಟ್ಟಿದೆ. ಶಿವಪಾಡಿ ದೇವಸ್ಥಾನದ ಆಡಳಿತ ಮಂಡಳಿಯ ಪತ್ರ ತಂದರೆ ಸರಳೇಬೆಟ್ಟು ಹಾಗೂ -ಶಿವಪಾಡಿಯ ಜನತೆಗೆ ನಮ್ಮ ಆಸ್ಪತ್ರೆ ವತಿಯಿಂದ ಉಚಿತವಾಗಿ ಕನ್ನಡಕ ವಿತರಣೆ ಹಾಗೂ ಶಸ್ತ್ರ ಚಿಕಿತ್ಸೆ ಮಾಡಲಾಗುವುದು ಎಂದರು.

ಅತಿದೊಡ್ಡ ಉಡುಗೊರೆ

ಶಿವಪಾಡಿ ದೇಗುಲದ ಮೊಕ್ತೇಸರ ಮಹೇಶ್​ ಠಾಕೂರ್​ ಮಾತನಾಡಿ, ಪ್ರಸಾದ್​ ನೇತ್ರಾಲಯ ನಮ್ಮ ಊರಿಗೇ ಬೆಳಕು ನೀಡಿದೆ. ದೇವಸ್ಥಾನದ ವತಿಯಿಂದ ನಡೆದ ಶಿವಪಾಡಿ ಉತ್ಸವ ಇಷ್ಟೊಂದು ಪರಿಣಾಮ ಬೀರಿರುವುದನ್ನು ಕಂಡು ನಾವು ಭಾವುಕರಾಗಿದ್ದೇವೆ. ಇದೊಂದು ಸಾರ್ಥಕ್ಯದ ಅನುಭವ. ಜನರಿಗೆ ಅತಿದೊಡ್ಡ ಉಡುಗೊರೆ ನೀಡಿದ ಡಾ.ಕೃಷ್ಣ ಪ್ರಸಾದ್​ ಅವರಿಗೆ ಗ್ರಾಮದ ಸಮಸ್ತ ಜನರ ಪರವಾಗಿ ಧನ್ಯವಾದ ಸಲ್ಲಿಸುತ್ತೇನೆ ಎಂದರು.

ಕಾರ್ಯಕ್ರಮದಲ್ಲಿ ಉಮಾಮಹೇಶ್ವರ ದೇವಸ್ಥಾನದ ಅಭಿವೃದ್ಧಿ ಟ್ರಸ್ಟ್​ ಅಧ್ಯಕ್ಷ ದಿನೇಶ್​ ಪ್ರಭು, ಶಿವಪಾಡಿ ವೈಭವ ಕಾರ್ಯಕ್ರಮದ ಕಾರ್ಯದರ್ಶಿ ಪ್ರಕಾಶ್​ ಕುಕ್ಕೇಹಳ್ಳಿ, ಟ್ರಸ್ಟಿಗಳಾದ ಪ್ರಕಾಶ್​ ಪ್ರಭು, ಶ್ರೀಕಾಂತ್​ ಪ್ರಭು ಹಾಗೂ ಡಾ.ರೇಶ್ಮಾ ಇತರರು ಉಪಸ್ಥಿತರಿದ್ದರು.

ಆಶಾಕಿರಣವಾದ ಆರೋಗ್ಯಮೇಳ

ಕಳೆದ ಶಿವರಾತ್ರಿ ಸಂದರ್ಭದಲ್ಲಿ ಮಣಿಪಾಲ ಸಮೀಪದ ಶಿವಪಾಡಿ ಉಮಾಮಹೇಶ್ವರ ದೇವಸ್ಥಾನದಲ್ಲಿ ನಡೆದಿದ್ದ ಶಿವಪಾಡಿ ವೈಭವ ಕಾರ್ಯಕ್ರಮದಲ್ಲಿ ಆರೋಗ್ಯ ಮೇಳವೂ ಒಂದಾಗಿತ್ತು. ಪ್ರಸಾದ್​ ನೇತ್ರಾಲಯದ ವತಿಯಿಂದ ಉಚಿತವಾಗಿ ಕಣ್ಣಿನ ತಪಾಸಣೆ, ಕನ್ನಡಕ ವಿತರಣೆ ಹಾಗೂ ಉಚಿತ ಶಸ್ತ್ರ ಚಿಕಿತ್ಸೆಯೂ ಘೋಷಣೆಯಾಗಿತ್ತು. ಬಳಿಕ ರತ್ನ ಸಂಜೀವ ಕಲಾ ಮಂಡಲದಲ್ಲಿ ನೂರಾರು ಮಂದಿ ಕಣ್ಣಿನ ತಪಾಸಣೆ ಮಾಡಿಸಿಕೊಂಡಿದ್ದರು. ಅದರಲ್ಲಿ 50ಕ್ಕೂ ಅಧಿಕ ಜನರಿಗೆ ಉಚಿತ ಶಸ್ತ್ರ ಚಿಕಿತ್ಸೆ ಹಾಗೂ 200ಕ್ಕೂ ಅಧಿಕ ಮಂದಿಗೆ ಉಚಿತ ಕನ್ನಡಕ ವಿತರಣೆ ಮಾಡಲಾಗುತ್ತಿದ್ದು, ಸಾಂಕೇತಿಕವಾಗಿ ಈ ಕಾರ್ಯಕ್ರಮದಲ್ಲಿ ವಿತರಿಸಲಾಯಿತು. ಕೇವಲ ಹೆಸರಿಗಷ್ಟೇ ಈ ಮೇಳ ನಡೆಯದೆ, ಅನೇಕ ಮಂದಿಗೆ ಆಶಾಕಿರಣವಾಗಿ ಕಂಗೊಳಿಸಿದ್ದು, ಶಿವಪಾಡಿ ವೈಭವಕ್ಕೆ ಮತ್ತೊಂದು ಮೆರುಗು ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net