ಖಾಸಗಿ ಆಸ್ಪತ್ರೆಯಲ್ಲಿ ಉಚಿತ ಡಯಾಲಿಸಿಸ್ ಸೇವೆ: ಯಶ್ಪಾಲ್

udp-24-yashpal
Published on

ಉಡುಪಿ:  ಜಿಲ್ಲಾಸ್ಪತ್ರೆಯ ಡಯಾಲಿಸಿಸ್ ಚಿಕಿತ್ಸೆ ಅವ್ಯವಸ್ಥೆಯಿಂದಾಗಿ ಡಯಾಲಿಸಿಸ್ ಚಿಕಿತ್ಸೆ ವಂಚಿತ ಸುಮಾರು 50 ಮಂದಿ ರೋಗಿಗಳಿಗೆ ಸಮಾಜದ ದಾನಿಗಳ ಸಹಕಾರದಿಂದ 15 ದಿನಗಳ ಕಾಲ  ಉಚಿತವಾಗಿ ಡಯಾಲಿಸಿಸ್ ಸೇವೆಯನ್ನು  ಆದರ್ಶ ಆಸ್ಪತ್ರೆಯಲ್ಲಿ ಶನಿವಾರದಿಂದ  ಆರಂಭಿಸಿರುವುದಾಗಿ  ಶಾಸಕ  ಯಶ್ ಪಾಲ್ ಸುವರ್ಣ ತಿಳಿಸಿದ್ದಾರೆ.

ಆದರ್ಶ ಆಸ್ಪತ್ರೆಯಲ್ಲಿ 5 ಮಂದಿ ಡಯಾಲಿಸಿಸ್ ಚಿಕಿತ್ಸೆ ಪಡೆದಿದ್ದು, ರೋಗಿಗಳ ಬೇಡಿಕೆಗೆ ತಕ್ಕಂತೆ ಸೇವೆ ಒದಗಿಸುವ ನಿಟ್ಟಿನಲ್ಲಿ ಸಿದ್ಧತೆ ನಡೆಸಿದ್ದು, ಮುಂದಿನ ದಿನದಲ್ಲಿ ಅಗತ್ಯತೆ ಮೇರೆಗೆ ಡಾ ಟಿ ಎಂ ಎ ಪೈ  ಆಸ್ಪತ್ರೆಯಲ್ಲೂ ಡಯಾಲಿಸಿಸ್ ಸೇವೆಗೆ ಮಾತುಕತೆ ನಡೆಸಲಾಗಿದೆ ಎಂದು ಮಾಹಿತಿ ನೀಡಿದರು.

ಈಗಾಗಲೇ ಸಮಸ್ಯೆಯನ್ನು ಹಲವು ಬಾರಿ ಆರೋಗ್ಯ ಇಲಾಖೆಯ ಸಚಿವರು ಹಾಗೂ ಉನ್ನತ ಅಧಿಕಾರಿಗಳಿಗೆ ಮನವಿ ಮಾಡಿದರೂ ಸ್ಪಂದಿಸದೇ ಬಡ ರೋಗಿಗಳ ಪ್ರಾಣದೊಂದಿಗೆ ಚೆಲ್ಲಾಟವಾಡುತ್ತಿದೆ.

ಜಿಲ್ಲೆಯ ಜನರ ಆರೋಗ್ಯದ ಮೇಲೆ ಕಾಳಜಿಯಿಂದ ಮಾನವೀಯ ನೆಲೆಯಲ್ಲಿ ವಿಶೇಷ ಮುತುವರ್ಜಿ ವಹಿಸಿ ದಾನಿಗಳ ಸಹಕಾರದಿಂದ ವೆಚ್ಚ ಭರಿಸಲು ಮುಂದಾಗಿದ್ದು, ಸರ್ಕಾರ ಕೂಡಲೇ ಬಡ ರೋಗಿಗಳ ಯಾತನೆಯನ್ನು  ನೀಗಿಸುವ ನಿಟ್ಟಿನಲ್ಲಿ ಆದ್ಯತೆಯ ಮೇರೆಗೆ ಡಯಾಲಿಸಿಸ್ ಸೇವೆ ಸಮರ್ಪಕವಾಗಿ ನಡೆಸಲು ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಈಗಾಗಲೇ ಮುಖ್ಯ ಮಂತ್ರಿ ಸಿದ್ದರಾಮಯ್ಯ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ರವರಿಗೆ ಮನವಿ ಸಲ್ಲಿಸಿದ್ದು, ಉಚಿತ ಭಾಗ್ಯಗಳ ಜೊತೆ ಜೊತೆಗೆ ರಾಜ್ಯ ಸರಕಾರ ಬಡ ರೋಗಿಗಳಿಗೆ ಆರೋಗ್ಯ ಭಾಗ್ಯ ನೀಡುವಲ್ಲೂ ಸರ್ಕಾರ ಮುಂದಾಗಲಿ ಎಂದು ಹೇಳಿದರು.

ಉಡುಪಿ ಆದರ್ಶ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಸೇವೆ ಪಡೆದ  ರೋಗಿಗಳ ಆರೋಗ್ಯ ವಿಚಾರಿಸಿ ಸಮರ್ಪಕ ರೀತಿಯಲ್ಲಿ ವ್ಯವಸ್ಥೆ ನಡೆಸುವ ಬಗ್ಗೆ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಜಿ. ಎಸ್.ಚಂದ್ರಶೇಖರ್, ಜಿಲ್ಲಾ ಆಸ್ಪತ್ರೆಯ ಸರ್ಜನ್ ಡಾ. ವೀಣಾ ಹಾಗೂ ವೈದ್ಯರೊಂದಿಗೆ ಸಮಾಲೋಚನೆ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net