ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಉಚಿತವಾಗಿ ದಂತ ಚಿಕಿತ್ಸೆ: ಆರೋಗ್ಯ ಇಲಾಖೆಯಿಂದ ಮಹತ್ವದ ಯೋಜನೆ ಅನುಷ್ಠಾನ

Free Dental Treatment Scheme Implementation by Health Department mandya
Published on

ಮಂಡ್ಯ: ಜನರಿಗೆ ಎದುರಾಗುವ ದಂತ ಸಮಸ್ಯೆಗೆ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿಯೇ ಚಿಕಿತ್ಸೆ ಕೊಡುವ ನಿಟ್ಟಿನಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ಮಹತ್ವದ ಯೋಜನೆ ರೂಪಿಸಿದೆ. ಇದಕ್ಕೆ ಸಂಬಂಧಿಸಿದಂತೆ ಲಕ್ಷಾಂತರ ರೂ ಮೌಲ್ಯದ ಯಂತ್ರೋಪಕರಣಗಳನ್ನು ಖರೀದಿಸಲಾಗಿದ್ದು, ಶೀಘ್ರದಲ್ಲೇ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ.
ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸೂಚನೆ ಮೆರೆಗೆ ಕಾರ್ಯಕ್ರಮ ರೂಪಿಸಲಾಗಿದೆ. ಇದರೊಂದಿಗೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿಯೇ ಸಾರ್ವಜನಿಕರು ದಂತಕ್ಕೆ ಸಂಬಂಧಿಸಿದಂತೆ ವಿವಿಧ ಕಾಯಿಲೆಗೆ ಚಿಕಿತ್ಸೆ ಪಡೆಯಬಹುದು. ಪರಿಣಾಮ ಜಿಲ್ಲೆಯ ಜನರಿಗೆ ದೊಡ್ಡ ಹೊರೆ ತಪ್ಪಿದಂತಾಗಲಿದೆ.
ಏನಿದು ಯೋಜನೆ?: ಸಾಮಾನ್ಯವಾಗಿ ಎದುರಾಗುವ ದಂತ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯಲು ತಾಲೂಕು ಅಥವಾ ಜಿಲ್ಲಾಸ್ಪತ್ರೆಗೆ ಬರಬೇಕು. ಆರ್ಥಿಕವಾಗಿ ಸಬಲರಾಗಿರುವವರು ಖಾಸಗಿಯತ್ತ ಮುಖ ಮಾಡಿದರೆ, ಬಡವರಿಗೆ ಸರ್ಕಾರಿ ಆಸ್ಪತ್ರೆಯೇ ಗಟ್ಟಿ. ಈ ಹಿನ್ನೆಲೆಯಲ್ಲಿ ಅಂತಹವರಿಗೆ ಅನುಕೂಲ ಮಾಡಲೆಂದು ಯೋಜನೆ ಅನುಷ್ಠಾನಗೊಳಿಸುವ ನಿರ್ಧಾರ ಮಾಡಲಾಗಿದೆ. ಅದರಂತೆ ಜನರು ಇರುವಲ್ಲಿಗೆ ಹೋಗಿ ಚಿಕಿತ್ಸೆ ನೀಡುವುದಾಗಿದೆ.
ಪ್ರಸ್ತುತ ಚಿಕಿತ್ಸೆಗೆಂದು ನಗರ, ಪಟ್ಟಣಕ್ಕೆ ಆಗಮಿಸಬೇಕಿದೆ. ಇದಕ್ಕೆ ಹಣದ ಜತೆಗೆ ಸಮಯವೂ ನೀಡುವುದು ಅನಿವಾರ್ಯವಾಗಿರುವುದರಿಂದ ಇಲಾಖೆಯ ಹೊಸ ಕಾರ್ಯಕ್ರಮ ಸಹಕಾರಿಯಾಗಲಿದೆ. ಯೋಜನೆಗೆಂದು ಸುಮಾರು ಹತ್ತು ಲಕ್ಷ ರೂ ವೆಚ್ಚದ ಯಂತ್ರವನ್ನು ಖರೀದಿಸಲಾಗಿದೆ. ಇದಕ್ಕೆ ಪೂರಕ ಸಾಮಗ್ರಿಗಳನ್ನು ತರಲಾಗಿದೆ. ಯಂತ್ರಗಳು ಎಲ್ಲಿಗೆ ಬೇಕಾದರೂ ತೆಗೆದುಕೊಂಡು ಹೋಗಬಹುದಾಗಿದೆ. ಅಂತೆಯೇ ಮಾರುತಿ ವ್ಯಾನ್ ಕೂಡ ಸಿದ್ಧವಾಗಿದ್ದು, ಕೆಲವೇ ದಿನದಲ್ಲಿ ಸಾರ್ವಜನಿಕರಿಗೆ ಅನುಕೂಲಕ್ಕೆ ಲಭ್ಯವಾಗಲಿದೆ.

ದಿನಕ್ಕೊಂದು ಪಿಎಚ್‌ಸಿಯಲ್ಲಿ ಚಿಕಿತ್ಸೆ: ಯೋಜನೆಯನ್ನು ಯಶಸ್ವಿಗೊಳಿಸಲು ರೂಪುರೇಷೆ ಸಿದ್ಧಪಡಿಸಲಾಗಿದೆ. ಅದರಂತೆ ಪ್ರತಿದಿನವೂ ತಪಾಸಣೆ ಮಾಡಲಾಗುತ್ತಿದೆ. ಪ್ರತಿದಿನ ಒಂದೊಂದು ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಪಾಸಣೆ ನಡೆಯಲಿದೆ. ಶಿಬಿರ ಆಯೋಜಿಸುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳಿಂದ ಆ ಕೇಂದ್ರ ವ್ಯಾಪ್ತಿಯ ಜನರಿಗೆ ಮಾಹಿತಿ ನೀಡಲಾಗುವುದು. ಆ ಮೂಲಕ ಪ್ರಚಾರ ನೀಡಿ ಯೋಜನೆ ಸದುಪಯೋಗಪಡಿಸಿಕೊಳ್ಳಲು ಅನುಕೂಲ ಕಲ್ಪಿಸಲಾಗುತ್ತಿದೆ.
ಇನ್ನು ಕಾರ್ಯಕ್ರಮದ ಮತ್ತೊಂದು ಪ್ರಮುಖ ಅಂಶವೆಂದರೆ ತಪಾಸಣೆ ಜತೆಗೆ ಚಿಕಿತ್ಸೆಗೆ ಅಗತ್ಯವಿರುವ ಔಷಧವನ್ನು ಇಲಾಖೆಯಿಂದಲೇ ಉಚಿತ ನೀಡುವುದಾಗಿದೆ. ಸಣ್ಣಪುಟ್ಟ ರೋಗಕ್ಕೆ ಔಷಧವನ್ನು ವಿತರಿಸುವುದರ ಜತೆಗೆ ಅವಶ್ಯಕತೆ ಇದ್ದರೆ ತಾಲೂಕು ಅಥವಾ ಜಿಲ್ಲಾಸ್ಪತ್ರೆಯಲ್ಲಿ ತಜ್ಞ ವೈದ್ಯರಿಂದ ಶಸ್ತ್ರಚಿಕಿತ್ಸೆ ಮಾಡಿಸಲಾಗುವುದು. ಮಾತ್ರವಲ್ಲದೆ ಈ ಕಾರ್ಯಕ್ರಮದ ಮೂಲಕ ದಂತಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಕೆಲಸವೂ ನಡೆಯಲಿದೆ. ರಜಾ ದಿನವನ್ನು ಹೊರತುಪಡಿಸಿ ಉಳಿದ ದಿನಗಳಲ್ಲಿ ನಿರಂತರವಾಗಿ ಶಿಬಿರ ಆಯೋಜನೆಗೊಳ್ಳಲಿದೆ.
ಒಟ್ಟಾರೆ ಮಹತ್ವದ ಕಾರ್ಯಕ್ರಮದ ಅನುಷ್ಠಾನಕ್ಕೆ ಜಿಲ್ಲಾ ಆರೋಗ್ಯ ಇಲಾಖೆ ನಾಂದಿಯಾಡಲು ಸಜ್ಜಾಗಿದ್ದು, ಯಶಸ್ವಿಯಾದರೆ ಜನಸಾಮಾನ್ಯರಿಗೆ ಹೆಚ್ಚಿನ ಸಹಕಾರಿಯಾಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net