

ಮಂಡ್ಯ: ಗ್ರಾಮಗಳಲ್ಲಿ ಜನಸಾಮಾನ್ಯರಿಗೆ ದಂತ ಚಿಕಿತ್ಸೆ ಪಡೆಯಲು ಸರಿಯಾದ ವ್ಯವಸ್ಥೆ ಇಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲೇ ಪ್ರಥಮ ಬಾರಿಗೆ ಜಿಲ್ಲಾ ಆರೋಗ್ಯ ಇಲಾಖೆಯಿಂದ ‘ಗ್ರಾಮಗಳಲ್ಲಿ ಮುಗುಳ್ನಗೆಯ ಸಿಂಚನ ಯೋಜನೆ’ ಪ್ರಾರಂಭಿಸಲಾಗಿದೆ. ಸಾರ್ವಜನಿಕರಿಗೆ ಅನುಕೂಲವಾಗುವಂತ ಹಾಗೂ ಒಳ್ಳೆಯ ಕಾರ್ಯಕ್ರಮಗಳನ್ನು ರೂಪಿಸಲು ಸರ್ಕಾರದ ಆದೇಶಕ್ಕೆ ಕಾಯದೇ ಪ್ರಾರಂಭಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ನಗರದ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಮಿಮ್ಸ್)ಯ ಆಡಿಟೋರಿಯಂನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಆರೋಗ್ಯ ಇಲಾಖೆಯಿಂದ ಆಯೋಜಿಸಿದ್ದ ‘ಗ್ರಾಮಗಳಲ್ಲಿ ಮುಗುಳ್ನಗೆಯ ಸಿಂಚನ ಯೋಜನೆ’ಗೆ ಚಾಲನೆ ನೀಡಿ ಮಾತನಾಡಿದರು. ಇಂದು ದಂತ ಚಿಕಿತ್ಸೆಗೆ ಬಳಸುವ ಯಂತ್ರಗಳು ದುಬಾರಿಯಾಗಿದ್ದು, ಚಿಕಿತ್ಸಾ ವೆಚ್ಚವು ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಗ್ರಾಮೀಣ ಭಾಗದ ಜನರು ದಂತ ಸಂಬಂಧಿ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ಹಿಂದೇಟು ಹಾಕುತ್ತಾರೆ. ರಾಜ್ಯದಲ್ಲೇ ಪ್ರಪ್ರಥಮ ಬಾರಿಗೆ ’ದಂತ ಆರೋಗ್ಯ ಹಳ್ಳಿಯ ಕಡೆಗೆ ’ ಎಂಬ ಶೀರ್ಷಿಕೆಯಡಿ ಗ್ರಾಮಗಳಲ್ಲಿ ಮುಗುಳ್ನಗೆಯ ಸಿಂಚನ ಕಾರ್ಯಕ್ರಮವು ಆರಂಭಗೊಳ್ಳುತ್ತಿದೆ. ಜಿಲ್ಲೆಯಲ್ಲಿ ಎಲ್ಲ ಜನರು ಇದರ ಸದುಪಯೋಗ ಪಡೆಯಿರಿ ಎಂದರು.
ನಮ್ಮ ಪೂರ್ವಿಕರು ಆರೋಗ್ಯದಿಂದ ಬದುಕುತ್ತಿದ್ದರು. ಮಾತ್ರೆ, ಔಷಧ ತೆಗೆದುಕೊಳ್ಳದೇ ಬದುಕು ನಡೆಸಿದವರೂ ಇದ್ದಾರೆ. ಕ್ಯಾನ್ಸರ್, ಹೃದಾಯಾಘಾತ ಎನ್ನುವುದು ವಿರಳ ಎನ್ನುವಂತಿತ್ತು. ಆದರೀಗ ಮಗು ಹುಟ್ಟುವಾಗಲೇ ಕಾಯಿಲೆಗಳು ಕಾಣಿಸಿಕೊಳ್ಳುತ್ತಿವೆ. ದಂತ ಸಮಸ್ಯೆಗಳು ಕೂಡ ಹೊರತಾಗಿಲ್ಲ. ಆದ್ದರಿಂದ ತಾಲೂಕಿನ ಪ್ರತಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶಿಬಿರ ಆಯೋಜಿಸಿ ತಜ್ಞ ದಂತ ವೈದ್ಯರು, ಸಿಬ್ಬಂದಿ ತಪಾಸಣೆ ಹಾಗೂ ಚಿಕಿತ್ಸೆಯವನ್ನು ಉಚಿತವಾಗಿ ನೀಡುತ್ತಾರೆ. ಇದು ಹೆಚ್ಚಿನ ಅನುಕೂಲವಾಗಲಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಪ್ರತಿ ಪಿಎಚ್‌ಸಿವಾರು ನಿರಂತರವಾಗಿ ಕಾರ್ಯಕ್ರಮವನ್ನು ಆಂದೋಲನದ ರೂಪದಲ್ಲಿ ನಡೆಸಬೇಕು. ಶಿಬಿರದ ಆಯೋಜನೆಗೂ ಮುನ್ನ ಮಾಹಿತಿ ಕೊಡುವುದರಿಂದ ಎಲ್ಲರಿಗೂ ಸೌಲಭ್ಯ ಸಿಗುವಂತಾಗಬೇಕು ಎಂದು ಸೂಚನೆ ನೀಡಿದರು.
ವೈದ್ಯರು ಎಂದಿಗೂ ದೇವರ ಸಮಾನ. ಇತ್ತೀಚಿನ ವರ್ಷದಲ್ಲಿ ಕೆಲವೊಂದು ವ್ಯತ್ಯಾಸವಾಗಿರಬಹುದು. ಆದರೆ ವೈದ್ಯರು ಸೇವಾ ಮನೋಭಾವದಿಂದಲೇ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿರುತ್ತಾರೆ. ಆದ್ದರಿಂದ ನಿಮ್ಮ ಸೇವೆ ಎಂದಿಗೂ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಸಕ ರವಿಕುಮಾರ್ ಗಣಿಗ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಮಿಮ್ಸ್ ಪ್ರಾಂಶುಪಾಲ ಡಾ.ತಮ್ಮಣ್ಣ, ವೈದ್ಯಕೀಯ ಅಧೀಕ್ಷಕ ಡಾ.ಪಿ.ವಿ.ಶ್ರೀಧರ್, ಜಿಲ್ಲಾ ಸರ್ಜನ್ ಡಾ.ಗಾಯತ್ರಿ, ಡಾ.ಮಮತಾ, ಡಾ.ಸತ್ಯಪ್ರಕಾಶ್ ಇತರರಿದ್ದರು.
ಯೋಜನೆಯಲ್ಲಿ ಸಿಗುವ ಸೌಲಭ್ಯ
ಪ್ರಾಸ್ತಾವಿಕ ನುಡಿಗಳನ್ನಾಡಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್, ಯೋಜನೆಯಡಿ ಬಾಯಿ ದಂತ ತಪಾಸಣೆ ಹಾಗೂ ಸಲಹೆ, ಬಾಯಿ ಕ್ಯಾನ್ಸರ್ ಸ್ಕ್ರೀನಿಂಗ್, ಹಲ್ಲು ಕೀಳುವುದು, ಹಲ್ಲು ತುಂಬಿಸುವುದು, ಬಾಯಿ ಮುಖಗಳ ಗಾಯ ಸ್ವಚ್ಛಗೊಳಿಸುವುದು, ಪ್ಲ್ಯೂರೋಸಿಸ್ ತಪಾಸಣೆ ಹಾಗೂ ಚಿಕಿತ್ಸೆ, ದಂತ ಸ್ವಚ್ಛತೆ ಮಾಡಲಾಗುವುದು. ಇದಲ್ಲದೆ ದಂತ ಭಾಗ್ಯ ಯೋಜನೆ ಫಲಾನುಭವಿಗಳಿಗೆ ಉಚಿತ ದಂತ ಪಂಕ್ತಿಗಾಗಿ ಸ್ಥಳದಲ್ಲೇ ರೆಫರಲ್ ಕಾರ್ಡ್ ಜತೆಗೆ ಹಲವು ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ವಿವರಿಸಿದರು.
ಇಲಾಖೆಯಲ್ಲಿ ಸುಮಾರು 18 ದಂತ ಆರೋಗ್ಯ ವೈದ್ಯಾಧಿಕಾರಿಗಳಿದ್ದಾರೆ. ಅವರಲ್ಲಿ ಏಳಕ್ಕೂ ಹೆಚ್ಚು ಜನರು ತಜ್ಞ ವೈದ್ಯರಿದ್ದಾರೆ. ಈಗಾಗಲೇ ಅವರೆಲ್ಲ ತಮ್ಮ ಕಾರ್ಯಕ್ಷೇತ್ರದಲ್ಲಿ ಅತ್ಯುತ್ತಮ ಸೇವೆಗಳನ್ನು ಸಾರ್ವಜನಿಕರಿಗೆ ಈಗಾಗಲೇ ನೀಡುತ್ತಿದ್ದಾರೆ. ಇನ್ನು ದಂತ ಸಂಬಂಧವಿರುವ ಅನೇಕ ಮೂಢನಂಬಿಕೆಗಳಾಗಿದೆ. ಹಲ್ಲು ಕಿತ್ತರೆ ಕಣ್ಣು ಕಾಣುವುದಿಲ್ಲ, ಮಂಜಾಗುವುದು, ದಂತ ಸ್ವಚ್ಛಗೊಳಿಸಿದರೆ ಹಲ್ಲು ಸಡಿಲವಾಗುತ್ತದೆ, ದಂತಕ್ಷಯದಲ್ಲಿ ಹುಳು ಹರಿದಾಡುತ್ತದೆ ಎಂಬ ತಪ್ಪು ತಿಳಿವಳಿಕೆಗಳಿವೆ. ಇದರಿಂದ ಜನರು ಹೊರಬೇಕು ಎಂದು ಸಲಹೆ ನೀಡಿದರು.
ದಂತದ ಅನಾರೋಗ್ಯದಿಂದ ಹೃದಯ, ಉಸಿರಾಟದ ಸಂಬಂಧಿಸಿದ ಕಾಯಿಲೆಗಳು, ಸ್ಟ್ರೋಕ್, ಡಿಮೇನ್ಷಿಯ, ಅಪೌಷ್ಟಿಕತೆ, ಅಜೀರ್ಣ ಕಾಣಿಸಿಕೊಳ್ಳುತ್ತದೆ. ಈ ಕಾರಣ ಶಾಲಾ ಮಕ್ಕಳು, ಸಾರ್ವಜನಿಕರು ಹಾಗೂ ವಿಶೇಷವಾಗಿ ಗರ್ಭಿಣಿ ಮತ್ತು ಬಾಣಂತಿಯರಲ್ಲಿ ಜಾಗೃತಿ ಅರಿವು ಮೂಡಿಸುವುದು ಈ ಸೇವೆಯ ಉದ್ದೇಶವಾಗಿದೆ. ದಂತ ಆರೋಗ್ಯ ಸೇವೆ ನೀಡುವುದು ಆರೋಗ್ಯ ಇಲಾಖೆಗೆ ಸವಾಲಿನ ವಿಚಾರವಾಗಿದೆ. ಬಾಯಿಗೆ ಸಂಬಂಧಿಸಿದ ಕಾಯಿಲೆಗಳು ಲಕ್ಷಾಂತರವಿದೆ. ಅವುಗಳಲ್ಲಿ ದಂತಕ್ಷಯ/ ಹಲ್ಲು ಹುಳುಕು, ವಸಡಿನ ಕಾಯಿಲೆ ಬಾಯಿ ಕ್ಯಾನ್ಸರ್, ಬಾಯಿಯ ಗಡ್ಡೆಗಳು, ಹುಣ್ಣುಗಳು, ವಕ್ರದಂತ, ಮುಖ ದವಡೆ ವಕ್ರತೆ ಪ್ರಮುಖವಾಗಿ ಕಂಡುಬರುತ್ತದೆ. ಒಟ್ಟಾರೆ ಅಸಾಂಕ್ರಮಿಕ ರೋಗಗಳಲ್ಲಿ ಪ್ರಪಂಚದ 50ರಷ್ಟು ಜನರು ಕಂಡುಬರುತ್ತಾರೆ. ದಂತಕ್ಕೆ ಸಂಬಂಧಿಸಿದ ಅಸಾಂಕ್ರಾಮಿಕ ರೋಗಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಬೇಕು. ಸ್ವಚ್ಛತಾ ಅಭ್ಯಾಸಗಳು, ಪ್ರತಿ ಆರು ತಿಂಗಳಿಗೊಮ್ಮೆ ದಂತ ತಜ್ಞರನ್ನು ಭೇಟಿ ಮಾಡಿ ತಪಾಸಣೆ ಸಲಹೆ ಚಿಕಿತ್ಸೆ ಪಡೆಯುವುದರಿಂದ ಹಾಗೂ ಧೂಮಪಾನ, ಮದ್ಯಪಾನದಂತಹ ದುಷ್ಚಟಗಳಿಂದ ದೂರವಿರುವುದರಿಂದ ಬಹುತೇಕ ಬಾಹ್ಯ ರೋಗಗಳನ್ನು ತಡೆಯಬಹುದಾಗಿದೆ. ಇನ್ನು ಖಾಸಗಿ ಚಿಕಿತ್ಸಾಲಯಗಳಲಿ ದಂತ ಚಿಕಿತ್ಸೆಗಳು ದುಬಾರಿಯಾದ ಕಾರಣ ಚಿಕಿತ್ಸೆ ಪಡೆಯಲಾಗದ ಅನೇಕರಿಗೆ ಈ ಯೋಜನೆ ವರವಾಗಲಿದೆ ಎಂದು ಹೇಳಿದರು.