

ಕಿಕ್ಕೇರಿ: ದೇಸಿ ಗೋವುಗಳಿಂದ ರೋಗಮುಕ್ತರಾಗಿ ಬದುಕುವ ಜತೆಗೆ ಪರಿಸರ ಸಂರಕ್ಷಣೆಯಾಗಲಿದೆ ಎಂದು ವೇದಬ್ರಹ್ಮ ಗೋಪಾಲಕೃಷ್ಣ ಅವಧಾನಿ ತಿಳಿಸಿದರು.
ಇಲ್ಲಿನ ಬ್ರಹ್ಮೇಶ್ವರ ದೇಗುಲ ಆವರಣದಲ್ಲಿ ಮಲೆನಾಡು ಗಿಡ್ಡ ಸಂರಕ್ಷಣ ಮತ್ತು ಸಂವರ್ಧನ ಅಭಿಯಾನ ಹಾಗೂ ಸೇವಾ ಗತಿವಿಧಿ, ಮೈಸೂರು ವಿಭಾಗ, ಕಾಮಧೇನು ಗೋಶಾಲೆ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಉಚಿತ ಗೋವು ವಿತರಣಾ ಸಮಾರಂಭದಲ್ಲಿ ಮಾತನಾಡಿದರು.
ದೇಸಿ ತಳಿಯ ಗೋವುಗಳಿಂದ ಆರೋಗ್ಯ ವೃದ್ಧಿಸಲಿದೆ. ಅಮೃತ ಸಮನಾದ ಹಾಲು ವಿದೇಶಿ ತಳಿ ರಾಸುಗಳಿಂದ ಸಿಗಲಾರದು. ಎಲ್ಲವೂ ಹೈಬ್ರಿಡ್ ರೀತಿ ಮಾರ್ಪಟಾಗಿ ಹುಟ್ಟಿನಿಂದಲೇ ರೋಗನಿರೋಧಕ ಶಕ್ತಿ ಇಲ್ಲವಾಗಿ ರೋಗಿಗಳಾಗುವಂತಾಗಿದೆ. ಸರ್ವ ರೋಗ ನಿವಾರಣೆ ಶುದ್ಧ ಹಾಲಿನಿಂದ. ಇದು ದೇಸಿ ತಳಿ ಹಸುಗಳಿಂದ ಮಾತ್ರ ಸಾಧ್ಯ. ಸಂಸ್ಥೆ ಉಚಿತವಾಗಿ ದೇಸಿ ತಳಿ ಹೆಣ್ಣು, ಗಂಡು ಗೋವುಗಳನ್ನು ನೀಡುತ್ತಿದೆ ಎಂದರು.
ಆರ್ಥಿಕವಾಗಿ ಹೆಚ್ಚು ಲಾಭ ಸಿಗಲಿದೆ ಎಂದು ಮಿಶ್ರತಳಿ ರಾಸು ಸಾಕುವ ಬದಲು ಸಮಾಜದ ಆರೋಗ್ಯ ರಕ್ಷಣೆಗಾಗಿ ದೇಸಿ ತಳಿ ಹಸು ಸಾಕಬೇಕು. ಇಂತಹ ಹಸುಗಳ ಮೈ ಸವರಿದರೆ ಸಾಕಷ್ಟು ರೋಗ ದೂರವಾಗಲಿದೆ. ಇವುಗಳ ಹಾಲು, ತುಪ್ಪ, ಮೊಸರು ದೇಹಕ್ಕೆ ಸಂಜೀವಿನಿಯಾಗಿದೆ. ಗೋವು ಸಗಣಿ, ಗೋಮಯ ಉತ್ಪನ್ನ ಪರಿಸರ ಸಂರಕ್ಷಣೆ, ರೋಗಮುಕ್ತ ಸಮಾಜ ನಿರ್ಮಾಣಕ್ಕೆ ಔಷಧ ರೀತಿ ಕೆಲಸ ಮಾಡಲಿವೆ ಎಂದು ತಿಳಿಸಿದರು.
ಬೆಡದಹಳ್ಳಿ ಪಂಚಭೂತನಾಥ ಪೀಠದ ಶ್ರೀರುದ್ರಮುನಿ ಸ್ವಾಮೀಜಿ ಮಾತನಾಡಿ, ಗೋಶಾಲೆಗಳು ಪ್ರತಿ ಗ್ರಾಮದಲ್ಲಿ ಸ್ಥಾಪಿತವಾದರೆ ಆರೋಗ್ಯ ಲಭಿಸಲಿದೆ. ದೇಸಿ ಗೋವುಗಳ ಹಾಲು ಸೇವಿಸಲು ಎಲ್ಲರೂ ಮುಂದಾದರೆ ಆಸ್ಪತ್ರೆಗೆ ಹೋಗುವ ಪ್ರಮೇಯ ದೂರವಾಗಲಿದೆ ಎಂದು ನುಡಿದರು.
ದಕ್ಷಿಣ ಪ್ರಾಂತ ಗೋ ಸೇವಾ ಪ್ರತಿನಿಧಿ ಪ್ರವೀಣ್ ಸರಳಾಯ ಮಾತನಾಡಿ, ಸಂಸ್ಥೆಯಿಂದ ಉಚಿತವಾಗಿ ದೇಸಿ ತಳಿ ಮಲೆನಾಡು ಗಿಡ್ಡದಂತಹ ವಿವಿಧ ತಳಿ ಜೋಡಿ ಹಸುಗಳನ್ನು ನೀಡುತ್ತಿದೆ. ತಳಿ ಸಂವರ್ಧನೆಗೆ ನೀಡಲಾಗುತ್ತಿದ್ದು, ದುರ್ಬಳಕೆ ಮಾಡಿಕೊಳ್ಳದಿರಿ. ಸಾಕಲು ಸಾಧ್ಯವಿಲ್ಲದಿದ್ದರೆ ಹಿಂತಿರುಗಿಸಿ ಎಂದು ಗೋಪಾಲಕರಿಗೆ ತಿಳಿಸಿದರು.
ಮಲೆನಾಡು ಗಿಡ್ಡ, ಹಳ್ಳಿಕಾರ ಮತ್ತಿತರ ತಳಿ ಗಂಡು-ಹೆಣ್ಣು 14 ಜೋಡಿ ಗೋವುಗಳನ್ನು ಉಚಿತವಾಗಿ ನೀಡಲಾಯಿತು. ಮಲೆನಾಡು ಗಿಡ್ಡ ಗೋಸಂರಕ್ಷಕ ಅಕ್ಷಯ ಆಳ್ವ, ಮೈಸೂರು ವಿಭಾಗದ ಗೋ ಸಂರಕ್ಷಕ ಪುನೀತ್, ಬಿಜೆಪಿ ಕಾರ್ಯಕರ್ತ ಭಾರತೀಪುರ ಪುಟ್ಟಣ್ಣ, ಮಂಡ್ಯ ಜಿಲ್ಲಾ ಗೋವು ಸೇವಕ ಶಶಿಕುಮಾರ್, ಬಜರಂಗ ದಳದ ಅಕ್ಷಯ್, ಪುನೀತ್, ಶಿಕ್ಷಕ ಜಯರಾಂ, ಆದಿತ್ಯ ಭಾರಧ್ವ್ವಾಜ್, ದರ್ಶನ್, ಪವನ್, ಯಶಸ್, ಯುವರಾಜ್, ಚಿರಾಗ್, ನಾಗಣ್ಣ ಇದ್ದರು.