ಆರೋಗ್ಯ ಜಾಗೃತಿಗೆ ಉಚಿತ ಶಿಬಿರಗಳು ಸಹಕಾರಿ

IMG-20240722-WA0133
Published on

ಹನಗೋಡು: ಅಲೆಮಾರಿ ಹಾಗೂ ಬುಡಕಟ್ಟು ಜನರ ಆರೋಗ್ಯ ಜಾಗೃತಿಗೆ ಉಚಿತ ಆರೋಗ್ಯ ಶಿಬಿರಗಳು ಸಹಕಾರಿಯಾಗಿವೆ ಎಂದು ಹೃದ್ರೋಗ ತಜ್ಞ ಡಾ.ಉದಯಕುಮಾರ್ ತಿಳಿಸಿದರು.

ಹನಗೋಡು ಹೋಬಳಿಯ ಬಿಜಾಪುರ ಕಾಲನಿಯ ಅಲೆಮಾರಿ ಜನಾಂಗದವರಿಗೆ ನೇರಳಕುಪ್ಪೆ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಎಪಿಐ (ಅಸೋಸಿಯೇಷನ್ ಆಫ್ ಫಿಸಿಶಿಯನ್ ಆಫ್ ಇಂಡಿಯಾ) ಮೈಸೂರು ಶಾಖೆ ವತಿಯಿಂದ ಆಯೋಜಿಸಿದ ಆರೋಗ್ಯ ಉಚಿತ ತಪಾಸಣಾ ಶಿಬಿರದಲ್ಲಿ ಮಾತನಾಡಿ, ಬಡಜನತೆ ಆರೋಗ್ಯದ ಬಗ್ಗೆ ನಿರ್ಲಕ್ಷೃ ತೋರದೆ ತಜ್ಞ ವೈದ್ಯರು ಲಭ್ಯವಿದ್ದಾಗ ಶಿಬಿರದಲ್ಲಿ ಪಾಲ್ಗೊಂಡು ಉಚಿತ ಆರೋಗ್ಯ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.


ಈ ಹಿಂದಿನ ದಿನಗಳಲ್ಲಿ ನಮ್ಮಲ್ಲಿ ವಾಂತಿ-ಭೇದಿ, ಟೈಫಾಯಿಡ್, ಕ್ಷಯ, ಕಾಲಾರದಂತಹ ರೋಗಗಳು ಸಾಮಾನ್ಯವಾಗಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಬಿಪಿ, ಶುಗರ್, ಹೃದ್ರೋಗ ಹಾಗೂ ಕಿಡ್ನಿ ಕಾಯಿಲೆಗಳು ಸಾಮಾನ್ಯವಾಗಿವೆ. ಇವು ಶ್ರೀಮಂತ ಕಾಯಿಲೆಗಳಾಗಿದ್ದು, ಬಡಜನರು ಆರ್ಥಿಕವಾಗಿ ಭರಿಸಲು ಅಸಾಧ್ಯ. ಗ್ರಾಮೀಣ ಭಾಗದ ಹಾಗೂ ನಗರ ಪ್ರದೇಶದ ಬಡ ಜನರಿಗೆ ಇಂತಹ ಉಚಿತ ಶಿಬಿರಗಳ ಮೂಲಕವೇ ಚಿಕಿತ್ಸೆಗೊಳಪಡಿಸಿದಾಗ ಮಾತ್ರ ಅವರನ್ನು ಸಂಕಷ್ಟದಿಂದ ಪಾರು ಮಾಡಲು ಸಾಧ್ಯವೆಂದು ತಿಳಿಸಿದರು.


ತಪಾಸಣಾ ಶಿಬಿರದಲ್ಲಿ ಎಪಿಐ ಮೈಸೂರು ಶಾಖೆಯ ಅಧ್ಯಕ್ಷ ಡಾ. ಕೆ.ಎಂ. ಶ್ರೀೀನಾಥ್, ತಜ್ಞ ವೈದ್ಯರಾದ ಡಾ.ಉಮೇಶ್, ಡಾ. ಪ್ರಸಾದ್, ಡಾ.ಸತ್ಯ, ಡಾ.ಸಾಯಿ ಚರಣ್, ಡಾ.ಶಶಾಂಕ್, ನೇರಳಕುಪ್ಪೆ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ಸುನಂದಾ, ಆರೋಗ್ಯ ನಿರೀಕ್ಷಣಾಧಿಕಾರಿ ಚಂದ್ರಶೇಖರ್ ಸೇರಿದಂತೆ ಆಶಾ ಕಾರ್ಯಕರ್ತೆಯರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.


ಶಿಬಿರದಲ್ಲಿ ತಪಾಸಣೆಗೊಳಗಾದ ರೋಗಿಗಳಿಗೆ ರಕ್ತದೊತ್ತಡ, ಸಕ್ಕರೆ ಕಾಯಿಲೆ, ಥೈರಾಯ್ಡ, ಕೊಲೆಸ್ಟ್ರಾಲ್ ಸೇರಿದಂತೆ ಸಾಮಾನ್ಯ ರೋಗಗಳನ್ನು ಪರೀಕ್ಷಿಸಿ ಉಚಿತ ಔಷಧ ಮಾತ್ರೆಗಳನ್ನು ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net