

ವಿಜಯಪುರ: ಹಲವು ರೀತಿಯ ವಿಕಲತೆ ಸಮಸ್ಯೆಗಳನ್ನು ಎದುರಿಸುತ್ತಿರುವ ಜನರಿಗಾಗಿ ಸರ್ಕಾರ ಹಲವು ಯೋಜನೆ ಜಾರಿಗೊಳಿಸಿದ್ದು, ಅರ್ಹರು ಅಂತಹ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಬಿಎಲ್‌ಡಿಇ ಡೀಮ್ಡ್ ವಿಶ್ವವಿದ್ಯಾಲಯದ ಬಿ.ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಜಿಲ್ಲಾ ವಿಕಲಚೇತನರ ಮತ್ತು ಪುನರ್ವಸತಿ ಕೇಂದ್ರದ ನೋಡಲ್ ಅಧಿಕಾರಿ ಡಾ. ಈಶ್ವರ ಬಾಗೋಜಿ ಹೇಳಿದರು.
ಇಂಡಿ ತಾಲೂಕಿನ ಝಳಕಿಯ ಹೋಲಿಕ್ರಾಸ್ ವಿಶೇಷ ಶಾಲೆಯ ಮಕ್ಕಳಿಗೆ ಬಿಎಲ್ಡಿಇ ಆಸ್ಪತ್ರೆಯ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಉಚಿತ ಕ್ಯಾಲಿಪರ್ (ಕೃತಕ ಅಂಗಸಹಾಯಕ ಸಾಧನ) ಗಳನ್ನು ವಿತರಿಸಿ ಅವರು ಮಾತನಾಡಿ, ಒಟ್ಟು 21 ವಿಕಲತೆಗಳಿಗೆ ಸಂಬಂಧಿಸಿದಂತೆ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದೆ. ದೈಹಿಕ ಅಂಗವಿಕಲತೆಯಲ್ಲಿ ಚಲನವಲನ ದೋಷ, ಕುಷ್ಠ ರೋಗ ನಿವಾರಣೆ, ಸೆರೆಬ್ರಲ್ ಫಾಲ್ಟಿ, ಕುಬ್ಜತೆ, ಮಸ್ಕುಲರ್ ಡಿಸ್ಟ್ರೋಪಿ, ಆಸಿಡ್ ದಾಳಿಗೊಳಗಾದವರು, ಅಂಧತ್ವ ಮತ್ತು ಮಂದದೃಷ್ಟಿ ದೋಷ, ಕಿವುಡುತನ ಮತ್ತು ಕ್ಲಿಷ್ಟ ಶ್ರವಣ, ಮಾತಿನ ಮತ್ತು ಭಾಷಾ ಅಂಗವಿಕಲತೆ ಸೇರಿ ಮುಂತಾದ ವಿಕಲತೆ ಹಾಗೂ ಆರೋಗ್ಯ ಸಂಬಂಧಿತ ಸಮಸ್ಯೆಗಳಿಗೆ ಜಿಲ್ಲಾ ವಿಕಲಚೇತನ ಮತ್ತು ಪುನರ್ವಸತಿ ಕೇಂದ್ರದ ವತಿಯಿಂದ ಸರಕಾರಿ ಸೌಲಭ್ಯ ಒದಗಿಸಲಾಗುತ್ತಿದೆ ಎಂದರು.
ಅಂಗವಿಕಲತೆಗೆ ಸಂಬಂಧಿಸಿದ ಕೆಲವು ಕಾಯಿಲೆಗಳಿಗೆ ಉಚಿತ ಶಸ್ತ್ರಚಿಕಿತ್ಸೆಯ ಸೌಲಭ್ಯವೂ ಇದೆ. ಹೀಗಾಗಿ, ಇಂತಹ ಸಮಸ್ಯೆಗಳಿಂದ ಬಳಲುತ್ತಿರುವವರು ಹಾಗೂ ವಿಕಲತೆ ಸಮಸ್ಯೆ ಎದುರಿಸುತ್ತಿರುವವರ ಏಳಿಗೆಗಾಗಿ ಶ್ರಮಿಸುತ್ತಿರುವ ಸಂಘ-ಸಂಸ್ಥೆಗಳ ಜಿಲ್ಲಾ ವಿಕಲಚೇತನ ಮತ್ತು ಪುನರ್ವಸತಿ ಕೇಂದ್ರ ಸಂಪರ್ಕಿಸಿ ಸರ್ಕಾರಿ ಯೋಜನೆಗಳ ಲಾಭ ಪಡೆದುಕೊಳ್ಳುವಂತೆ ಅವರು ಸಲಹೆ ನೀಡಿದರು.
ಅಂಗವಿಲಕತೆ ಸಮಸ್ಯೆ ಎದುರಿಸುತ್ತಿದ್ದ ನಾಲ್ಕು ಮಕ್ಕಳಿಗೆ ಎಂಟು ಕ್ಯಾಲಿಪರ್‌ಗಳನ್ನು ವಿತರಿಸಲಾಯಿತು. ಮಕ್ಕಳು ಇದೇ ಮೊದಲ ಬಾರಿಗೆ ಬೇರೆಯವರ ಸಹಾಯವಿಲ್ಲದೆ ಕ್ಯಾಲಿಪರ್ ಧರಿಸಿ ನಿಂತು ನಡೆದಾಡುವ ಮೂಲಕ ಹೊಸ ಅನುಭವ ಪಡೆದು ಸಂತಸಪಟ್ಟರು.
ಕೇಂದ್ರದ ಗೋಪಾಲ ದೇಶಪಾಂಡೆ, ಅನೀಲ ಚೌಧರಿ, ಕೃತಕ ಅಂಗಾಂಗ ತಯಾರಕರಾದ ಡಿ.ಡಿ. ಸ್ವಾನ್, ಹೋಲಿಕ್ರಾಸ್ ವಿಶೇಷ ಶಾಲೆಯ ನಿರ್ದೇಶಕಿ ನೀತಾ ಆಳ್ವಾ, ಸಿಬ್ಬಂದಿ ಲೀನಾ ಡಿಕೊಸ್ಟಾ, ಅನೌಪಚಾರಿಕ ಶಿಕ್ಷಣ ಸಂಸ್ಥೆಯ ನಿರ್ದೇಶಕ ಫಾ. ಟಿಯೋಲ್ ಮಚಾದೊ ಎಸ್.ಜೆ., ಇಂಡಿಯ ದೀಪಾಲಯದ ನಿರ್ದೇಶಕಿ ಜಸಿಂತಾ ಮಚಾದೊ ಮತ್ತಿತರರಿದ್ದರು.