

ಚಿಕ್ಕಬಳ್ಳಾಪುರ: ಒಂದೆಡೆ ಉಚಿತ ಪ್ರಯಾಣ ಸೇವೆಯಿಂದ ತುಂಬಿ ತುಳುಕಾಡುತ್ತಿದ್ದ ರಾಜ್ಯ ರಸ್ತೆಗೆ ಸಂಸ್ಥೆಯ ಬಸ್ ನಿಲ್ದಾಣ, ಮತ್ತೊಂದೆಡೆ ಪ್ರಯಾಣಿಕರು ಬಾರದೇ ಬೇಸರ ವ್ಯಕ್ತಪಡಿಸಿದ ಖಾಸಗೀ ಬಸ್ ಮಾಲೀಕರು ಮತ್ತು ಸಿಬ್ಬಂದಿ.
ಇದು ವಿಜಯವಾಣಿ ಭಾನುವಾರ ಚಿಕ್ಕಬಳ್ಳಾಪುರದಲ್ಲಿ ಕೈಗೊಂಡಿದ್ದ ರಿಯಾಲಿಟಿ ಚೆಕ್‌ನಲ್ಲಿ ಕಂಡು ಬಂದ ದೃಶ್ಯ. ಹೌದು! ಜಿಲ್ಲಾ ಕೇಂದ್ರದಲ್ಲಿನ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದಲ್ಲಿ ಸಿಂಗಾರಗೊಂಡಿದ್ದ ಬಸ್‌ಗಳು, ತುಂಬಿ ತುಳುಕಾಡುತ್ತಿದ್ದ ಪ್ರಯಾಣಿಕರ ಸಂಭ್ರಮ. ಶಕ್ತಿ ಯೋಜನೆಯ ಜಿಲ್ಲಾ ಮಟ್ಟದ ಕಾರ್ಯಕ್ರಮಕ್ಕೆ ಚಾಲನೆ ನೀಡುತ್ತಿದ್ದಂತೆ ಬಸ್‌ಗಳಲ್ಲಿ ಪುರುಷರ ಜತೆಗೆ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದರು.
ಉಚಿತ ಬಸ್ ಪ್ರಯಾಣ ಸೇವೆ ಪ್ರಾರಂಭದ ಮಾಹಿತಿ ಹಿನ್ನೆಲೆಯಲ್ಲಿ ಬೆಳಿಗ್ಗೆ ಊರುಗಳಿಗೆ ತೆರಳಬೇಕಾಗಿದ್ದ ಮಹಿಳೆಯರು ಹೆಚ್ಚಿಗೆ ಮಧ್ಯಾಹ್ನ ನಂತರ ಸಂಚಾರ ಹೊರಟರು. ಮೊದಲ ಬಾರಿಗೆ ಹಣವನ್ನು ಪಾವತಿಸದೇ ಸರ್ಕಾರಿ ಬಸ್ಸಿನಲ್ಲಿ ಪ್ರಯಾಣಿಸಲಾಗುತ್ತಿದೆ ಎಂಬುದಾಗಿ ಸಂತಸ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರವು ಮಹಿಳೆಯರ ಹಿತದೃಷ್ಟಿಯಿಂದ ಒಳ್ಳೆಯ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿದೆ. ಮೊದಲಿನಿಂದಲೂ ಪ್ರಯಾಣ ದರ ದುಬಾರಿ ಇದೆ. ಇದು ಬೇಸರಕ್ಕೆ ಕಾರಣವಾಗಿತ್ತು. ಈಗ ಹೊರೆಯೇ ಇಲ್ಲದಿರುವುದು ಖುಷಿಯ ವಿಚಾರ. ಪ್ರಯಾಣಿಸಲು ಕಾಸಿಗಾಗಿ ಪರದಾಡುವಂತಿಲ್ಲ ಎಂದು ಸಂತಸ ವ್ಯಕ್ತಪಡಿಸಿದರು.
ಕೆಲಸ, ಆದಾಯಕ್ಕೆ ಕುತ್ತು
ನಗರಸಭೆಯ ಖಾಸಗೀ ಬಸ್ ನಿಲ್ದಾಣದಲ್ಲಿನ ಪ್ರಯಾಣಿಕರ ಅಭಾವ ಕಂಡು ಬಂತು. ಇದಕ್ಕೆ ಬಸ್‌ನ ಮಾಲೀಕರು, ಚಾಲಕರು ಮತ್ತು ನಿರ್ವಾಹಕರು ಅಸಮಾಧಾನ ವ್ಯಕ್ತಪಡಿಸಿದರು. ಪ್ರತಿನಿತ್ಯ ಸಂಚರಿಸುವ ಪ್ರಯಾಣಿಕರ ಪೈಕಿ ಮಹಿಳೆಯರೇ ಬಹುಪಾಲು. ಈಗ ಖಾಸಗೀ ಬಸ್‌ಗಳಿಗೆ ಬರುವುದಿಲ್ಲ. ಪುರುಷರನ್ನು ನೆಚ್ಚಿಕೊಂಡು ವಾಹನ ಓಡಿಸುವಂತಹ ದುಸ್ಥಿತಿ ಬಂದಿದೆ. ಮೊದಲೇ ದುಬಾರಿ ಡೀಸೆಲ್, ತೆರಿಗೆ, ನಿರ್ವಹಣೆ ವೆಚ್ಚದಿಂದ ಆದಾಯಕ್ಕೆ ಖೋತಾ ಬೀಳುತ್ತಿದೆ. ಈಗ ನಷ್ಟ ಹೆಚ್ಚಳವಾಗಿ ಸಿಬ್ಬಂದಿಯ ಕೆಲಸಕ್ಕೂ ಕುತ್ತು ಬಂದಿದೆ ಎಂದು ಮಾಲೀಕರು ಅಳಲು ತೋಡಿಕೊಂಡರು.
ಚಿಕ್ಕಬಳ್ಳಾಪುರ ನಗರದಲ್ಲಿ ೧೦೦ ಕ್ಕೂ ಹೆಚ್ಚು ಖಾಸಗೀ ಬಸ್‌ಗಳಿದ್ದವು. ಆದರೆ, ನಷ್ಟದಿಂದ ಹಲವರು ಮಾರಿಕೊಂಡು, ಬೇರೆ ಜೀವನ ನಡೆಸುತ್ತಿದ್ದಾರೆ. ಸಾಲದ ಹಣದಲ್ಲಿ ಲಕ್ಷಾಂತರ ರೂ ಬಂಡವಾಳ ಹೂಡಿ, ಬಸ್‌ಗಳನ್ನು ಓಡಿಸಲಾಗಿದೆ. ಇದರ ನಡುವೆಯೂ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಾರದೇ ಸೀಟುಗಳು ಖಾಲಿ ಉಳಿಯುತ್ತಿದ್ದವು. ಈಗ ಶಕ್ತಿ ಯೋಜನೆಯು ಪ್ರಯಾಣಿಕರ ಸಂಖ್ಯೆಯನ್ನು ಮತ್ತಷ್ಟು ಇಳಿಸುವಿಕೆ ಖಚಿತ. ಈ ವ್ಯವಹಾರವನ್ನು ನಂಬಿಕೊಂಡು ಬದುಕುವುದು ಕಷ್ಟ ಎಂದು ತಿಳಿಸಿದರು.
* ರಾಜ್ಯ ಸರ್ಕಾರವು ಮಹಿಳೆಯರ ಹಿತದೃಷ್ಟಿಯಿಂದ ಒಳ್ಳೆಯ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿದೆ. ಮೊದಲಿನಿಂದಲೂ ಪ್ರಯಾಣ ದರ ದುಬಾರಿ ಇದೆ. ಇದು ಬೇಸರಕ್ಕೆ ಕಾರಣವಾಗಿತ್ತು. ಈಗ ಹೊರೆಯೇ ಇಲ್ಲದಿರುವುದು ಖುಷಿಯ ವಿಚಾರ. ಪ್ರಯಾಣಿಸಲು ಕಾಸಿಗಾಗಿ ಪರದಾಡುವಂತಿಲ್ಲ.
ತುಳಸಿ, ಖಾಸಗೀ ಉದ್ಯೋಗಿ
*ಪ್ರಯಾಣಿಕರ ಇಳಿಮುಖಗೊಂಡಿರುವುದರಿಂದ ಲಾಭವಿಲ್ಲದೇ ಸರಿಯಾಗಿ ಮಾಲೀಕರು ವೇತನ ನೀಡುತ್ತಿಲ್ಲ. ಈಗ ಕೆಲಸಕ್ಕೂ ಕುತ್ತು ಬರುವಂತಾಗಿದೆ. ಸರ್ಕಾರವು ಖಾಸಗೀ ಬಸ್ ಮಾಲೀಕರ ಹಿತದೃಷ್ಟಿಯಿಂದ ರಿಯಾಯಿತಿಗಳನ್ನು ಘೋಷಿಸಬೇಕು.
ಬಾಬಾಜಾನ್, ಖಾಸಗೀ ಬಸ್ ಸಿಬ್ಬಂದಿ