

ಮೈಸೂರು: ಬಸವಮಾರ್ಗ ಫೌಂಡೇಷನ್ ಸಂಸ್ಥಾಪಕರಾದ ಎಸ್.ಬಸವರಾಜು ಅವರು ಸರ್ಕಾರಿ ಶಾಲಾ ಮಕ್ಕಳ ಅನುಕೂಲಕ್ಕಾಗಿ ಉಚಿತ ಬಸ್ ವ್ಯವಸ್ಥೆ ಮಾಡಿದ್ದಾರೆ. ತಮ್ಮ ಮಗಳ ಹುಟ್ಟುಹಬ್ಬದ ಅಂಗವಾಗಿ ಕುಕ್ಕರಹಳ್ಳಿ ಶಾಲೆಯನ್ನು ದತ್ತು ಪಡೆದಿದ್ದಾರೆ.
ನಗರದ ಕುಕ್ಕರಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಓದುತ್ತಿರುವ ಕೆ.ಹೆಮ್ಮನಹಳ್ಳಿ, ಗಣಾಗರಹುಂಡಿ, ಸಾಹುಕಾರಹುಂಡಿ ಗ್ರಾಮದ 46 ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಮಾಡಿದ್ದು ಈ ಉಚಿತ ಸೇವೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್.ರಾಜು, ದಾನಿ ಎಸ್.ಬಸವರಾಜು ಅವರು ಇತ್ತೀಚೆಗೆ ಚಾಲನೆ ನೀಡಿದರು.
ಸಿ.ಎನ್.ರಾಜು ಮಾತನಾಡಿ, ಬಸವರಾಜು ಅವರು ಸಾಮಾಜಿಕ ಕಳಕಳಿ ಹೊಂದಿದ್ದು, ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಪಣ ತೊಟ್ಟು ನಿಂತಿದ್ದಾರೆ. ಕುಕ್ಕರಹಳ್ಳಿ ಶಾಲೆಯನ್ನು ಈಗಾಗಲೇ ದತ್ತು ಪಡೆದಿದ್ದು, ಅದನ್ನು ಮಾದರಿ ಶಾಲೆಯಾಗಿಸುವ ಗುರಿ ಹೊಂದಿದ್ದಾರೆ. ಇದಕ್ಕೆ ನಮ್ಮ ಸಂಪೂರ್ಣ ಸಹಕಾರ ಇರುತ್ತದೆ ಎಂದು ತಿಳಿಸಿದರು.
ಕೆ.ಹೆಮ್ಮನಹಳ್ಳಿ, ಗಣಾಗರಹುಂಡಿ, ಸಾಹುಕಾರಹುಂಡಿ ಗ್ರಾಮದಿಂದ ಕುಕ್ಕರಹಳ್ಳಿ ಸರ್ಕಾರಿ ಶಾಲೆಗೆ ಬರುವ 46 ಮಕ್ಕಳಿಗೆ ಸೂಕ್ತ ಸಾರಿಗೆ ವ್ಯವಸ್ಥೆ ಇರಲಿಲ್ಲ. ಇದನ್ನು ಅರಿತ ಬಸವಮಾರ್ಗ ಫೌಂಡೇಷನ್‌ನ ಎಸ್.ಬಸವರಾಜು ಬಸ್ ವ್ಯವಸ್ಥೆ ಮಾಡಿದ್ದಾರೆ. ಇದಕ್ಕೆ ಶಿಕ್ಷಣ ಇಲಾಖೆಯಿಂದ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದು ಹೇಳಿದರು.
ಎಸ್.ಬಸವರಾಜು ಮಾತನಾಡಿ, ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಸಿಗಬೇಕು. ಅದಕ್ಕೂ ಮೊದಲು ಅವರಿಗೆ ಮೂಲಸೌಕರ್ಯಗಳನ್ನು ಒದಗಿಸುವ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ಅವರ ಓಡಾಟಕ್ಕೆ ಉಚಿತ ಬಸ್ ವ್ಯವಸ್ಥೆ ಮಾಡಿದ್ದೇವೆ ಎಂದು ತಿಳಿಸಿದರು.
ಗ್ರಾಮಾಂತರ ಪ್ರದೇಶಗಳಿಂದ ಶಾಲೆಗೆ ಬರುವ ಮಕ್ಕಳಿಗೆ ಸರಿಯಾಗಿ ಸಾರಿಗೆ ಸೌಲಭ್ಯ ಇಲ್ಲ. ಇದರಿಂದ ಅವರ ವಿದ್ಯಾಭ್ಯಾಸದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿತ್ತು. ಇದನ್ನು ಶಾಲೆಯ ಮುಖ್ಯಶಿಕ್ಷಕರು ನನ್ನ ಗಮನಕ್ಕೆ ತಂದರು. ನಾನು ನಮ್ಮ ಸಂಸ್ಥೆಯಿಂದ ಬಸ್ ವ್ಯವಸ್ಥೆ ಮಾಡಿದ್ದು, ಇದರಿಂದ ಮಕ್ಕಳಿಗೆ ಅನುಕೂಲವಾಗುವ ವಿಶ್ವಾಸ ಇದೆ ಎಂದರು.
ಶಾಲೆಯ ಮುಖ್ಯ ಶಿಕ್ಷಕ ಆರ್.ಚಂದ್ರ, ಸಿಆರ್‌ಪಿ ಪ್ರಕಾಶ್, ಎಸ್‌ಡಿಎಂಸಿ ಅಧ್ಯಕ್ಷ ಸ್ವಾಮಿ, ಶಿಕ್ಷಕರು, ಪಾಲಕರು ಇದ್ದರು.