

ಸೋಮವಾರಪೇಟೆ : ಕ್ರೀಡಾ ಚಟುವಟಿಕೆಗಳಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಶಾಸಕ ಡಾ.ಮಂತರ್‌ಗೌಡ ಅಭಿಪ್ರಾಯಪಟ್ಟರು.
ಕೊಡಗು ಪತ್ರಕರ್ತರ ಸಂಘ ಹಾಗೂ ಸೋಮವಾರಪೇಟೆ ತಾಲೂಕು ಘಟಕದ ಆಶ್ರಯದಲ್ಲಿ ಬಳಗುಂದ ಸರ್ಕಾರಿ ಪ್ರಾಥಮಿಕ ಶಾಲೆಯ ಮೈದಾನದಲ್ಲಿ ಭಾನುವಾರ ಜಿಲ್ಲೆಯ ಪತ್ರಕರ್ತರಿಗೆ ಆಯೋಜಿಸಿದ್ದ ಕೆಪಿಎಸ್, ಕ್ರಿಕೆಟ್ ಲೀಗ್ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು. ಪತ್ರಕರ್ತರು ಪ್ರತಿನಿತ್ಯ ಒತ್ತಡದಿಂದ ಕೆಲಸ ಮಾಡಲೇಬೇಕಾದ ಅನಿವಾರ್ಯತೆಯಿದೆ. ದಿನಕ್ಕೆ ಅರ್ಧಗಂಟೆ ಸಮಯವನ್ನು ವ್ಯಾಯಾಮಕ್ಕಾಗಿ ಮೀಸಲಿಡಬೇಕು. ವಯಸ್ಸಿಗೆ ಅನುಗುಣವಾಗಿ ವ್ಯಾಯಾಮ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಗ್ರಾಮೀಣ ಪತ್ರಕರ್ತರಿಗೂ ಸರ್ಕಾರದ ಸೌಲಭ್ಯಗಳು ಸಿಗಬೇಕು ಎಂಬುದು ನಮ್ಮ ಆಶಯವಾಗಿದೆ. ರಾಜ್ಯದ ಗ್ರಾಮೀಣ ಪತ್ರಕರ್ತರಿಗೆ ಜಿಲ್ಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಸಂಚರಿಸಲು ಉಚಿತ ಬಸ್‌ಪಾಸ್ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಹೊಸ ವರ್ಷದಲ್ಲಿ ಈ ಸೌಲಭ್ಯ ಪಡೆದುಕೊಳ್ಳಬಹುದು ಎಂದು ಹೇಳಿದರು.
ನಿವೇಶನವಿಲ್ಲದ ಪತ್ರಕರ್ತರು ಜಿಲ್ಲೆಯಲ್ಲಿದ್ದಾರೆ ಎಂಬುದು ನನ್ನ ಗಮನಕ್ಕೆ ಬಂದಿದೆ. ಗ್ರಾಮೀಣ ಪತ್ರಕರ್ತರಿಗೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಿವೇಶನ ಕಲ್ಪಿಸಲು ಸರ್ಕಾರದೊಂದಿಗೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.
ಪತ್ರಕರ್ತರು ಒಗ್ಗಟ್ಟಿನಲ್ಲಿದ್ದರೆ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸುಲಭವಾಗುತ್ತದೆ. ರಾಜಕಾರಣಿಗಳು ಕುರ್ಚಿಗೋಸ್ಕರ ಪರಸ್ಪರ ಕಾಲೆಳೆದುಕೊಳ್ಳುವುದು ಮಾಮೂಲಿಯಾಗಿದೆ. ಇದರಿಂದ ರಾಜಕಾರಣಿಗಳಿಗೆ ಒಳ್ಳೆಯದೇ ಆಗಿರುವ ಸಂದರ್ಭವನ್ನು ಕಂಡಿದ್ದೇವೆ. ಆದರೆ ಪತ್ರಕರ್ತರು ಒಗ್ಗಟ್ಟಿನ ಹೋರಾಟದ ಮೂಲಕ ಸೌಲಭ್ಯಗಳನ್ನು ಪಡೆದುಕೊಳ್ಳುವ ಅನಿವಾರ್ಯತೆಯಿದೆ ಎಂದು ಹೇಳಿದರು.
ಕ್ರೀಡೆ ಎಂಬುದು ಕೊಡಗಿನ ಜನರ ರಕ್ತದಲ್ಲೇ ಇದೆ. ಪತ್ರಕರ್ತರು ಕೂಡ ಶಾಲಾ, ಕಾಲೇಜು ದಿನಗಳಲ್ಲಿ ಎಲ್ಲ ಆಟಗಳನ್ನು ಆಡಿರುತ್ತಾರೆ. ಕ್ರೀಡಾ ಕಾರ್ಯಕ್ರಮದಲ್ಲಿ ಪರಸ್ಪರ ಭೇಟಿಯ ಸುಸಂದರ್ಭ ಒದಗುತ್ತದೆ. ಸೋಲು- ಗೆಲುವುವನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸಬೇಕು ಎಂದು ಹೇಳಿದರು.
ಅಖಿಲ ಭಾರತ ಸಂತ ಸಮಿತಿ ರಾಜ್ಯ ಕಾರ್ಯದರ್ಶಿ ಶ್ರೀ ರಾಜೇಶ್‌ನಾಥ ಗುರೂಜಿ ಮಾತನಾಡಿ, ಸಮಾಜಮುಖಿ ಚಿಂತನೆ ಹಾಗೂ ಪ್ರತಿಫಲಾಪೇಕ್ಷೆಯಿಲ್ಲದೆ ಕೆಲಸ ಮಾಡುವವರು ಮಾತ್ರ ನಿಜವಾದ ಪತ್ರಕರ್ತರಾಗಲು ಸಾಧ್ಯ. ಬಡವರು, ಶೋಷಿತರ ಪರವಾಗಿ ಮನಮಿಡಿದು ಅಂತಹವರಿಗೆ ಸರ್ಕಾರದ ಸೌಲಭ್ಯಗಳನ್ನು ಒದಗಿಸಿಕೊಡಲು ಶ್ರಮಿಸುವ ಅನೇಕ ಪತ್ರಕರ್ತರು ನಿವೇಶನ ರಹಿತರಾಗಿದ್ದಾರೆ ಎಂಬುದನ್ನು ಕೇಳಿ ನೋವಾಗುತ್ತಿದೆ. ಜನಪ್ರತಿನಿಧಿಗಳು ಮತ್ತು ಸರ್ಕಾರ ಮನಸ್ಸು ಮಾಡಿದರೆ, ನಿವೇಶನ ರಹಿತ ಪತ್ರಕರ್ತರಿಗೆ ಕೆಲವೇ ದಿನಗಳಲ್ಲಿ ನಿವೇಶನ ಮತ್ತು ಮನೆ ಕಟ್ಟಿಕೊಡಬಹುದು ಎಂದು ಹೇಳಿದರು.
ದುಶ್ಚಟಗಳಿಗೆ ಬಿದ್ದವರನ್ನು ಸರಿಪಡಿಸುವ ಪ್ರಯತ್ನ ಮಾಡುವ ಪತ್ರಕರ್ತರು ದುಶ್ಚಟಗಳಿಗೆ ಬಲಿಯಾಗಿ ಆರೋಗ್ಯವನ್ನು ಹಾಳು ಮಾಡಿಕೊಳ್ಳಬಾರದು. ವರ್ಷಕೊಮ್ಮೆ ಅರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಹೇಳಿದರು.
ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎ.ಮುರಳೀಧರ್, ರಾಜ್ಯ ಪತ್ರಕರ್ತರ ಸಂಘದ ಜಿಲ್ಲಾ ನಿರ್ದೇಶಕ ಹರಪಳ್ಳಿ ರವೀಂದ್ರ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಆರ್.ಹರೀಶ್, ಬಳಗುಂದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಿ.ಎಂ.ಪಾರ್ವತಿ, ಮಡಿಕೇರಿ ಪತ್ರಿಕಾ ಭವನ ಮ್ಯಾನೇಜಿಂಗ್ ಟ್ರಸ್ಟಿ ಟಿ.ಪಿ.ರಮೇಶ್, ಕೆಪಿಸಿಸಿ ಸದಸ್ಯ ಕೆ.ಎ.ಯಾಕೂಬ್, ಉದ್ಯಮಿ ಸುಗುರಾಜ್ ಕುಶಾಲನಗರ, ಒಕ್ಕಲಿಗರ ಯುವ ವೇದಿಕೆ ಜಿಲ್ಲಾಧ್ಯಕ್ಷ ಗಿರೀಶ್ ಮಲ್ಲಪ್ಪ, ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಜಿ.ಅನಂತ ಶಯನ, ರೈತ ಹೋರಾಟ ಸಮಿತಿ ಅಧ್ಯಕ್ಷ ಚಕ್ರವರ್ತಿ ಸುರೇಶ್, ಸಂಘದ ಉಪಾಧ್ಯಕ್ಷ ಕವನ್ ಕಾರ್ಯಪ್ಪ, ಕಾರ್ಯದರ್ಶಿ ಡಿ.ಪಿ.ಲೋಕೇಶ್ ಇದ್ದರು. ಮೈಸೂರಿನ ನಾರಾಯಣ ಹೆಲ್ತ್ ಸಿಟಿ ಸೆಂಟರ್‌ನ ವೈದ್ಯರು ಪತ್ರಕರ್ತರ ಆರೋಗ್ಯ ತಪಾಸಣೆ ಮಾಡಿದರು.